ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಕುರಿತು ಸೂಕ್ತ ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಧಾನಸಭೆಯ ಅಧಿವೇಶನದಲ್ಲಿಂದು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಚರ್ಚೆಯು ಗಂಭೀರವಾಗಿ ಪರಿಣಮಿಸಿತು. ಅಲ್ಲದೆ, ಧರಣಿ, ಕಾವೇರಿದ ಚರ್ಚೆ, ಗದ್ದಲಕ್ಕೆ ಕಾರಣವಾಗಿ ಕೊನೆಗೆ ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಬದ್ಧವಿದೆ. ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು.

ಪರಿಶಿಷ್ಟ ಪಂಗಡದ ಮೀಸಲಾತಿ ಸೇರಿದಂತೆ ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುವ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ಶೀಘ್ರದಲ್ಲಿ ತೀರ್ಮಾನಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಸುಪ್ರೀಂಕೋರ್ಟ್ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ಅವರಿಂದ ವರದಿ ಪಡೆದುಕೊಳ್ಳಲಾಗುವುದು ಎಂದಿದ್ದಾರೆ.

ಇಂದು ಬೆಳಗ್ಗೆ ವಿಧಾನಸಭೆಯ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಭೀಮಾ ನಾಯಕ್, ಅಜಯ್ ಧರ್ಮಸಿಂಗ್ ಮತ್ತಿತರರು ಧರಣಿ ನಡೆಸುತ್ತಾ ಪರಿಶಿಷ್ಟ ಪಂಗಡಕ್ಕೆ ಶೇ 7.5ರ ಮೀಸಲಾತಿ ನೀಡಬೇಕೆಂದು ಎಂದು ಒತ್ತಾಯಿಸಿದರು.

ಇದನ್ನು ಓದಿ: ಎರಡು ವರ್ಷದಲ್ಲಿ 754 ಕಾರ್ಖಾನೆಗಳಿಗೆ ಬೀಗ, 46,585 ಕಾರ್ಮಿಕರಿಗೆ ಉದ್ಯೋಗ ನಷ್ಟ

ಕಾಂಗ್ರೆಸ್‌ ಸದಸ್ಯರ ಧರಣಿ ಸಂದರ್ಭದಲ್ಲಿಯೇ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿ, ಮೀಸಲಾತಿ ಕುರಿತಂತೆ ಮಾತನಾಡಲು ಮುಂದಾದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಧರಣಿ ನಿರತರ ಮನವೊಲಿಸಿ ಅವರ ಸ್ವಸ್ಥಾನಕ್ಕೆ ಮರಳುವಂತೆ ಮಾಡಿದರು. ಮುಖ್ಯಮಂತ್ರಿಯವರು ತಮ್ಮ ಮಾತನ್ನು ಮುಂದುವರೆಸಿ ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ನೀಡಿದೆ.

ಹಿಂದುಳಿದ ವರ್ಗ 3ಬಿ ನಿಂದ 2ಎಗೆ ಹಾಗೂ 2ಎ ನಿಂದ ಎಸ್‌ಟಿಗೆ ವರ್ಗಾಯಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಹಲವು ಸಮುದಾಯಗಳು ಬೇಡಿಕೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಒಂದು ವಾರ ಅಥವಾ 10 ದಿನಗಳಲ್ಲಿ ಮಧ್ಯಂತರ ಅವಧಿಯನ್ನು ನೀಡಲಿದೆ.

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ವಿಚಾರ ಅತ್ಯಂತ ಕ್ಲಿಷ್ಟ ವಿಷಯವಾಗಿದೆ. ಹಾಗಾಗಿಯೇ ಸರ್ಕಾರ ಮುಂದೆ ಯಾವುದೇ ಕಾನೂನು ತೊಡಕುಗಳಾಗದಂತೆ ತೀರ್ಮಾನ ಮಾಡುವ ನಿಟ್ಟಿನಲ್ಲಿ ನಿವೃತ್ತ ಉಪ ಲೋಕಾಯುಕ್ತ ಸುಭಾಷ್ ಆಡಿ ಅವರ ನೇತೃತ್ವದಲ್ಲಿ ವಿವಿಧ ಸಮುದಾಯದ ಮೀಸಲಾತಿ ಬೇಡಿಕೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ವರದಿ ನೀಡಲು ಸಮಿತಿ ನೇಮಿಸಿದೆ.

ಪರಿಶಿಷ್ಟ ಪಂಗಡದ ಸಮುದಾಯಗಳು ಬ್ಯಾಕ್‌ ವರ್ಡ್ ಟ್ರೈಬ್(ಬಿಟಿ)ನಲ್ಲಿದ್ದಾಗ ಶೇ. 5ರಷ್ಟು ಮೀಸಲಾತಿ ಇತ್ತು. ಬಿಟಿಯಿಂದ ಎಸ್‌ಟಿಗೆ ಸೇರಿದ ಮೇಲೆ ಮೀಸಲಾತಿ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚಿಸಿ ವರದಿಯನ್ನು ಕೇಳಲಾಗಿತ್ತು.

ಇದನ್ನು ಓದಿ: ಹಿಂದುಳಿದ ವರ್ಗಗಳ ಮೀಸಲಾತಿ ಉಳಿದೀತೆ?

ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಮೀಸಲಾತಿ ಹೆಚ್ಚಳದ ಬಗ್ಗೆ ಶಿಫಾರಸ್ಸು ಮಾಡಿದೆ. ಈ ನಡುವೆ ಹಿಂದುಳಿದ ವರ್ಗದ ಹಲವು ಸಮುದಾಯಗಳು ಮೀಸಲಾತಿ ಬೇಡಿಕೆ ಇಟ್ಟಿವೆ. ಸುಪ್ರೀಂಕೋರ್ಟ್ ಇಂದ್ರಸಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಬಾರದು ಎಂದು ಹೇಳಿದೆ. ವಿಶೇಷ ಪ್ರಕರಣದಲ್ಲಿ ಹೆಚ್ಚಳಕ್ಕೆ ಅವಕಾಶ ಇರುವುದರ ಬಗ್ಗೆ ರಾಜ್ಯ ಅಡ್ವೋಕೇಟ್ ಜನರಲ್ ಅವರಿಂದ ವರದಿ ಕೇಳಲಾಗಿದೆ.

ಈ ಹಿಂದೆ ವಾಲ್ಮೀಕಿ ಸಮುದಾಯಕ್ಕೆ ಹಿಂದುಳಿದ ಬುಡಕಟ್ಟು ವರ್ಗದಡಿ ಶೇ. 5ರಷ್ಟು ಮೀಸಲಾತಿ ಸಿಗುತ್ತಿತ್ತು. ಪರಿಶಿಷ್ಕ ಪಂಗಡಕ್ಕೆ ವಾಲ್ಮೀಕಿ ಸಮುದಾಯ ಸೇರ್ಪಡೆ ನಂತರ ಶೇ. 3.5ರಷ್ಟು ಮೀಸಲಾತಿ ಸಿಗುತ್ತಿದೆ. ಇದನ್ನು ಶೇ. 7.5ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸದನದಲ್ಲಿ ತಿಳಿಸಿದರು.

ವಿಶೇಷ ಪ್ರಕರಣದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶವಿದೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಶೇಷ ಪ್ರಕರಣದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಅವಕಾಶವಿದೆ. ಸಂವಿಧಾನದ ಪರಿಚ್ಛೇದ 14, 15ರಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದರೆ ಎಂದು ಹೇಳಲಾಗಿದೆ ಅಷ್ಟೆ. ಆದರೆ ಮೇಲ್ವರ್ಗದವರಲ್ಲೂ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಸಂವಿಧಾನದಲ್ಲಿ ಹೇಳಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲೂ ಶೇ. 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹೇಳಿದೆ. ವಾಲ್ಮೀಕಿ ಗುರುಪೀಠದ ಶ್ರೀಗಳು ಧರಣಿ ಕೈಬಿಡಲು ಮನವೊಲಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಹೋರಾಟ ಕೈ ಬಿಡುವಂತೆ ಮನವಿ

ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಬೇಡಿಕೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಪ್ರಸನ್ನಾನಂದ ಪುರಿ ಸ್ವಾಮೀಜಿ ಧರಣಿ ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡರು.

ಸ್ವಾಮೀಜಿಗಳು ಧರಣಿ ಕೂತ ಕೂಡಲೇ ಅವರ ಜೊತೆ ಸಚಿವರು ಮಾತಾಡಿದ್ದಾರೆ. ಇನ್ನೂ ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಸುಭಾಷ್ ಆಡಿ ನೇತೃತ್ವದ ಸಮಿತಿ ವರದಿ ನೀಡಲಿದೆ. ವರದಿ ಬಂದ ನಂತರ ಸರ್ವಪಕ್ಷ ಸಭೆ ಕರೆದು ತೀರ್ಮಾನ ಮಾಡುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *