ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಪದಚ್ಯುತಿಗೆ ಬಿಜೆಪಿ, ಜೆಡಿಎಸ್ ಪಟ್ಟು
ಬೆಂಗಳೂರು : ವಿಧಾನ ಪರಿಷತ್ ಒಂದು ದಿನದ ವಿಶೇಷ ಅಧಿವೇಶನ ಸಭಾಪತಿ ಪೀಠದ ಪರ ವಿರೋಧಧ ಚರ್ಚೆ ಹಾಗೂ ಗಲಾಟೆಗಳ ನಡುವೆ ಆರಂಭಗೊಂಡಿದೆ. ಗೋಹತ್ಯೆ ನಿಷೇಧ ಮಸೂದೆಯ ಬಗ್ಗೆ ವಿಧಾನ ಪರಿಷತ್ನಲ್ಲಿ ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಕಾರಣ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಅವಿಶ್ವಾಸ ಗೊತ್ತುವಳಿಯನ್ನು ಚರ್ಚಿಸಲು ಒಂದು ದಿನದ ಕಲಾಪ ನಡೆಸಲು ಅವಕಾಶ ನೀಡುವಂತೆ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ಕಲಾಪ ನಡೆಯಿತು. ಆದರೆ, ಸಭಾಪತಿಗಳನ್ನು ಪೀಠದಲ್ಲಿ ಕೂರಲು ಬಿಡದೆ ಬಿಜೆಪಿಯವರು ಗಲಾಟೆ ನಡೆಸಿದ್ದರಿಂದ ಹಾಗೂ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷದವರಿಂದ ತಳ್ಳಾಟ ನಡೆದಿದ್ದರಿಂದ ಅನಿರ್ದಿಷ್ಟಾವಧಿಗೆ ಇಂದಿನ ಕಲಾಪವನ್ನು ಮುಂದೂಡಲಾಯಿತು. ವಿಧಾನ ಪರಿಷತ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದು ಕೋಲಾಹಲ, ಸೃಷ್ಟಿಯಾಗಿದ್ದು, ಸಭಾ ಪೀಠವನ್ನು ಧ್ವಂಸ ಮಾಡಲು ಪ್ರಯತ್ನ ಮಾಡಿದ ಘಟನೆಯೂ ನಡೆಯಿತು. ಸಭಾಪೀಠಕ್ಕೆ ಹಾನಿ ಉಂಟು ಮಾಡಿದ ವಿಧಾನ ಪರಿಷತ್ ಸದಸ್ಯರು, ಗ್ಲಾಸ್ ಮೈಕ್ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಕಲಾಪದಲ್ಲಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ. ಇದಕ್ಕೆ ಜೆಡಿಎಸ್ ಕೂಡ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್ಗೆ ಶಾಕ್ ನೀಡಿದೆ. ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಅವಕಾಶ ನೀಡದ ಸಭಾಪತಿ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅವಿಶ್ವಾಸ ನಿರ್ಣಯ ಮಂಡನೆ ಆಗಿರುವುದರಿಂದ ಸಭಾಪತಿಗಳು ಪೀಠದಲ್ಲಿ ಕೂರುವಂತಿಲ್ಲ ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸರಿಯಾಗಿ ಕಲಾಪವನ್ನು ನಡೆಸಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದರು. ಇಂದು ನಡೆಯುತ್ತಿರುವ ವಿಧಾನ ಪರಿಷತ್ ಮರು ಕಲಾಪ ಆರಂಭಕ್ಕೂ ಮುನ್ನ ಉಪ ಸಭಾಪತಿಗಳು ಪೀಠದಲ್ಲಿ ಕುಳಿತಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಕಲಾಪ ಆರಂಭಕ್ಕೂ ಮುನ್ನ ಪೀಠದ ಮೇಲೆ ಕುಳಿತ ಉಪ ಸಭಾಪತಿಯವರ ನಡೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಉಪ ಸಭಾಪತಿ ಧರ್ಮೇಗೌಡರಿಗೆ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಲು ಹೋಗುತ್ತಿದ್ದಂತೆ ಅವರ ಸುತ್ತ ಆವರಿಸಿದ ಬಿಜೆಪಿ ಸದಸ್ಯರು ಗಲಾಟೆ ಮಾಡಿದರು. ಇದರಿಂದ ಕಲಾಪದಲ್ಲಿ ಕೆಲಕಾಲ ಆತಂಕ ಸೃಷ್ಠಿಯಾಗಿತ್ತು.
ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಒಳಗೆ ಬರಲು ಬಿಡದ ಬಿಜೆಪಿ ಸದಸ್ಯರು ಬಾಗಿಲು ಬಳಿ ಅಡ್ಡಲಾಗಿ ನಿಂತು ವಿರೋಧಿಸಿದರು. ಇದೇ ವೇಳೆ ಸಭಾಪತಿಗೆ ಪೀಠ ಬಿಡದೆ ಕುಳಿತಿದ್ದ ಉಪ ಸಭಾಪತಿಯನ್ನು ಕಾಂಗ್ರೆಸ್ ಸದಸ್ಯರು ಕೆಳಗೆ ಎಳೆದು ತಂದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಗಲಾಟೆ ಗದ್ದಲ ನಡೆಯಿತು. ಕೊನೆಗೂ ಉಪ ಸಭಾಪತಿಯನ್ನು ಪೀಠದಿಂದ ಕೆಳಗೆ ಎಳೆದು ತಂದ ಕಾಂಗ್ರೆಸ್ ಸದಸ್ಯರು ಒಂದೆಡೆಯಾದರೆ, ಇನ್ನೊಂದೆಡೆ ಸಭಾಪತಿಗೆ ಒಳಗೆ ಬಾರದಂತೆ ಬಿಜೆಪಿ ಸದಸ್ಯರು ವಿರೋಧಿಸಿದರು. ಸಭಾಪತಿಗಳ ಪೀಠ ಕಾಯುತ್ತಾ ನಿಂತ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದಲ್ಲಿದ್ದ ಗ್ಲಾಸ್ ಬಿಸಾಡಿ ಗಲಾಟೆಯೆಬ್ಬಿಸಿದರು. ಆ ಗಲಾಟೆ ನಿಯಂತ್ರಿಸಲು ಮಾರ್ಷಲ್ಗಳು ಹರಸಾಹಸ ಪಟ್ಟರು. ಕಾಂಗ್ರೆಸ್ ಸದಸ್ಯರೊಬ್ಬರನ್ನು ಪೀಠದ ಮೇಲೆ ಕೂರಿಸಿ, ಅವರನ್ನು ಸುತ್ತುವರೆದು ಬೇರೆ ಯಾರಿಗೂ ಅವಕಾಶ ಕೊಡದೆ ಕಾಂಗ್ರೆಸ್ ಸದಸ್ಯರು ಗಲಾಟೆ ಮಾಡಿದರು.
ಗೋಹತ್ಯ ಮಸೂದೆಗೆ ಹೇಗಾದರೂ ಮಾಡಿ ಒಪ್ಪಿಗೆ ಪಡೆಯುತ್ತಿವೇ ಎಂದು ಬಿಜೆಪಿ ಸಚಿವರು ಹೇಳುತ್ತಿದ್ದರು. ಪ್ರತಾಪ್ ಚಂದ್ರ ಶೆಟ್ಟಿ ಇದ್ದರೆ ಮಸೂದೆಗೆ ಅಂಗೀಕಾರ ಕಷ್ಟ ಎಂದು ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿತ್ತು. ಜೆಡಿಎಸ್ ಕೂಡಾ ಬಿಜೆಪಿಯ ನಿಲುವಿಗೆ ಕೈ ಜೋಡಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಇತ್ತಿಚೆಗೆನ ಬೆಳವಣಿಗೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸುವ ಮೂಲಕ ಹಳೇ ದೊಸ್ತಿಯನ್ನು ಮುಂದುವರಿಸುವ ಇಂಗಿತವನ್ನು ತೋರಿಸುತ್ತದೆ. ಇನ್ನೂ ಇದೇ ವೇಳೆ ಪ್ರತಾಪ್ ಚಂದ್ರಶೆಟ್ಟಿ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಕಾಂಗ್ರೆಸ್ ಮುಖಂಡರಾದ ಸಿದ್ರಾಮಯ್ಯ ಹಾಗೂ ಡಿ.ಕೆ.ಶಿವಕುಮಾರವರ ಬಳಿ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.