ಭಾರತದ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದರು.
ಗುರುವಾರ ತಡರಾತ್ರಿ ನಡೆದ ಫೈನಲ್ ನಲ್ಲಿ ನೀರಜ್ ಚೋಪ್ರಾ ಎರಡನೇ ಎಸೆತದಲ್ಲಿ 89.45 ಮೀ. ಎಸೆದು ಗಮನ ಸೆಳೆದರು. ಯಶಸ್ವಿಯಾದ ಒಂದೇ ಎಸೆತದಲ್ಲಿ ಋತುವಿನ ಶ್ರೇಷ್ಠ ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತರಾದರು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲು ನೀರಜ್ ವಿಫಲರಾದರು. ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದ ಗೌರವಕ್ಕೆ ಪಾತ್ರರಾದರು. ಅಲ್ಲದೇ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಎನಿಸಿಕೊಂಡರು. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಮತ್ತು ಪಿವಿ ಸಿಂಧು ಈ ಸಾಧನೆ ಮಾಡಿದ್ದಾರೆ.
ನೀರಜ್ ಚೋಪ್ರಾ ಮೊದಲ, 3, 4, 5 ಮತ್ತು 6 ಪ್ರಯತ್ನಗಳಲ್ಲಿ ವಿಫಲರಾದರು. ಇದರಿಂದ ತಮ್ಮ ಸಾಧನೆ ಉತ್ತಮ ಪಡಿಸಿಕೊಳ್ಳುವ ಅವಕಾಶ ಕಳೆದುಕೊಂಡರು.
ಪಾಕಿಸ್ತಾನದ ಅರ್ಷದ್ ನದೀಂ ಎರಡನೇ ಎಸೆತದಲ್ಲಿ 92.97 ಮೀ. ದೂರ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ಬರೆದರು. ಗ್ರೆನೆಡಾದ ಆಂಡರ್ಸನ್ ಪೀರ್ಟನ್ 88.87 ಮೀ. ಎಸೆತದೊಂದಿಗೆ ಕಂಚಿನ ಪದಕ ಗಳಿಸಿದರು.