ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ ವ್ಯವಸ್ಥೆಗಾಗಿ ಎಸ್‌ಎಫ್‌ಐ ಮನವಿ

ಹಾವೇರಿ: ತಾಲ್ಲೂಕಿನ ಹಿರೇಲಿಂಗದಹಳ್ಳಿ ಗ್ರಾಮಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಹಾಗೂ ವಿದ್ಯಾರ್ಥಿಗಳ ಪರೀಕ್ಷೆಯ ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ವತಿಯಿಂದ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ ʻʻವಿದ್ಯಾರ್ಥಿಗಳು ಪ್ರತಿದಿನ ವಿದ್ಯಾಭ್ಯಾಸದ ಉದ್ದೇಶದಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜಿಲ್ಲಾ ಕೇಂದ್ರದ ಕಾಲೇಜುಗಳಿಗೆ ಬರಬೇಕಾಗಿದೆ ಇಷ್ಟು ದಿನ ಕೋವಿಡ್-19 ನಿಂದ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಕಡಿತಗೊಂಡಿತ್ತು. ಪದವಿ ಕಾಲೇಜುಗಳನ್ನು ಸರಕಾರ ಆರಂಭಿಸಲಾಗಿದ್ದು, ತರಗತಿಗಳಿಗೆ ಹಾಗೂ ಪರೀಕ್ಷೆಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ ಇಷ್ಟಾದರೂ ಕೊರೊನಾ ಪೂರ್ವದಲ್ಲಿ ಇದ್ದ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಇದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿ ಎಮ್.ಎಸ್.ವಗಣ್ಣ ಅವರಿಗೆ ಮನವಿ ಸಲ್ಲಿಸಿದ ಎಸ್‌ಎಫ್‌ಐ ಸಂಘಟನೆಯು ಡಿಪೋ ಮ್ಯಾನೇಜರ್ ಅವರ ಗಮನಕ್ಕೆ ತರಬೇಕೆಂದು ವಿನಂತಿಸಿಕೊಂಡಿದ್ದಾರೆ.

ಬಸ್‌ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದರಿಂದ ಪ್ರತಿನಿತ್ಯ ಹಾವೇರಿ ಕೇಂದ್ರಕ್ಕೆ ಸಾವಿರಾರು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಸಾರ್ವಜನಿಕರಿಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳು ಕೋವಿಡ್ ಮೂರನೇ ಅಲೆಯ ಮುಂಚೆ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿವೆ ಇದರ ಪರಿಣಾಮವಾಗಿ ಸಾರಿಗೆ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತಿದೆ ಮತ್ತು ಸಾರ್ವಜನಿಕರಿಗೂ ಸಮಸ್ಯೆಗಳು ಎದುರಾಗಿರುವ ಬಗ್ಗೆ ಎಸ್ಎಫ್ಐ ಅಸಮಧಾನವನ್ನು ವ್ಯಕ್ತಪಡಿಸಿದೆ.

ಎಸ್ಎಫ್ಐ ಮುಖಂಡರಾದ ಬೀರೇಶ ನೆಟಗಲ್ಲಣ್ಣ ಮಾತಾನಾಡಿ ʻʻಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಿಂದ ನಗರಕ್ಕೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಪ್ರಸ್ತುತ ಪದವಿ ಕಾಲೇಜುಗಳು ಪ್ರಾರಂಭವಾಗಿ ಒಂದು ವಾರ ಕಳೆದರು ಹಿರೇಲಿಂಗದಹಳ್ಳಿಗೆ ಬಸ್ ಬಿಡುತ್ತಿಲ್ಲ. ದಿನನಿತ್ಯವು ನೂರಾರು ವಿದ್ಯಾರ್ಥಿಗಳು ಹಿರೇಲಿಂಗದಹಳ್ಳಿಯಿಂದ ಸುಮಾರು  4 ಕಿಮಿ ನಡೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ತರಗತಿಗಳಿಗೆ ಬೇಗನೆ ಹೋಗಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಸ್ಥರು, ಕಾರ್ಮಿಕರು, ರೈತ ಮಾರುಕಟ್ಟೆಯ ವ್ಯವಹಾರಗಳಿಗೆ ನಗರಕ್ಕೆ ಹೋಗಲು ಸರಿಯಾದ ಸಮಯಕ್ಕೆ ಬಸ್‌ಗಳು ಇಲ್ಲದೆ ಪರಾದಾಡುವಂತಗಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಹಲವಾರು ಸಬೂಬುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆʼʼ ಎಂದು ಹೇಳಿದರು.

ವಿದ್ಯಾರ್ಥಿಗಳ ಹಾಗೂ ರೈತರ, ಕಾರ್ಮಿಕರು, ಗ್ರಾಹಕರ ಹಿತದೃಷ್ಟಿಯಿಂದ ಹಾವೇರಿ ನಗರದಿಂದ ಹಿರೇಲಿಂಗದಹಳ್ಳಿ ಗ್ರಾಮಕ್ಕೆ ಬೆಳಗ್ಗೆ 8:00 ಗಂಟೆಗೆ, ಮಧ್ಯಾಹ್ನ 1:30ಕ್ಕೆ ಹಾಗೂ ಸಾಯಂಕಾಲ 5:00 ರ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಿರಣ ಗುಬ್ಬೆರ, ಪ್ರಕಾಶ ಮನೆಗಾರ, ಆಕಾಶ ಬಾಸೂರ, ಮಹೇಶ ಕಳಸೂರ, ನಂದೇಶ ಹರಿಜನ, ಮಂಜು ಪಿಚ್ಚಿ, ಸುರೇಶ  ಮಾಳಗಿ, ರಾಜು ಕಾಶಂಬಿ ,ಸುನೀಲ ನಾಗನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *