ದಾವಣಗೆರೆ: ಪದವಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಂದಿದ್ದು ಹೆಚ್ಚುವರಿ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣ ಎಂದು ಪ್ರಕಟಗೊಂಡಿದೆ. ಹಾಗೆಯೇ ವಿಷಯವಾರು ಉತ್ತೀರ್ಣರಾದರೂ ಸಹ ಸರಾಸರಿ ಅಂಕ ಕಡಿಮೆ ಬಂದಿದ್ದು ಹಾಗೂ ಕೊನೆಯಲ್ಲಿ ಅನುತ್ತೀರ್ಣ ಎಂದು ಪ್ರಕಟಣೆಯಾಗಿದೆ ಮತ್ತು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರೂ ಸಹ ಗೈರುಹಾಜರು ಎಂದು ತೋರಿಸಲಾಗಿದೆ ಇಂತಹ ಹಲವು ಗೊಂದಲಗಳು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಇದನ್ನು ಖಂಡಿಸಿ ಎಐಡಿಎಸ್‌ಓ ಪ್ರತಿಭಟನೆ ನಡೆಸಿದೆ.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೆಶನ್(ಎಐಡಿಎಸ್‌ಓ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ-2020) ಜಾರಿಯಾದಗಿನಿಂದಲೂ ವಿದ್ಯಾರ್ಥಿಗಳು ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗಿದ್ದು, ಸಾಕಷ್ಟು ಶೈಕ್ಷಣಿಕ ಅವಘಡಗಳ ನಡುವೆ ಅವರು ಪರೀಕ್ಷೆಯನ್ನು ಬರೆದಿದ್ದಾರೆ. ಇಂತಹ ಸಂಧರ್ಭದಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ತೀವ್ರ ಆತಂಕ ಎದುರಾಗಿದೆ. ಈ ಹತ್ತಾರು ಗೊಂದಲಗಳು ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡಿದ್ದು ಈ ಎಲ್ಲಾ ತರಹದ ಸಮಸ್ಯೆಗಳಿಗೆ ನೇರ ಹೊಣೆ ವಿಶ್ವವಿದ್ಯಾಲಯ ಎಂದು ಆರೋಪಿಸಿದರು.
ಪರೀಕ್ಷಾ ಮೌಲ್ಯಮಾಪನದಲ್ಲಾದ ಎಲ್ಲಾ ಲೋಪದೋಷಗಳನ್ನು ಬಗೆಹರಿಸಬೇಕು ಮತ್ತು ಪತ್ರಿಕಾ ಮರುಮೌಲ್ಯಮಾಪನ ಶುಲ್ಕ ತೆಗೆದುಕೊಳ್ಳದೆ ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಮೌಲ್ಯಮಾಪನಕುಲಸಚಿವರಿಗೆ ಸಲ್ಲಿಸಲಾಯಿತು. ಈ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪರವಾಗಿ ಎಲ್ಲಾ ದೋಷಗಳನ್ನು ಸಿಂಡಿಕೇಟ್ ಸದಸ್ಯರ ಜೊತೆ ಮತ್ತು ಕುಲಪತಿಗಳ ಸಭೆ ಕರೆದು ಚರ್ಚೆ ನಡೆಸಿ ವಿದ್ಯಾರ್ಥಿಗಳ ಪರ ನಿಲುವು ತೆಗೆದುಕೊಳ್ಳುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯೆ ಪುಷ್ಪಾ ಜಿ, ಜಿಲ್ಲಾ ಕಛೇರಿ ಕಾರ್ಯದರ್ಶಿ ಕಾವ್ಯ ಬಿ, ಸಂಘಟನಾಕಾರ ಅಭಿಷೇಕ್, ಶಿವುಕುಮಾರ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸದ್ದರು.