ಬೆಂಗಳೂರು : ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ಪರೀಕ್ಷೆ ನಡೆಸದೆ ಸೇವಾ ಹಿರಿತನವನ್ನಷ್ಟೇ ಆಧರಿಸಿ ಬಡ್ತಿ ನೀಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಗರದಲ್ಲಿ ಸೋಮುವಾರ ಪ್ರತಿಭಟನೆ ನಡೆಸಿದರು.
2012 ಮಾ.31ರ ಅಧಿಸೂಚನೆಯಂತೆ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್, ಬೆರಳಚ್ಚುಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಮಾತ್ರ ಒಂದೇ ಜ್ಯೇಷ್ಠತಾ ಪಟ್ಟಿಯಲ್ಲಿ ಸೇರಿಸಬೇಕು. 15ನೇ ಹಣಕಾಸಿನಲ್ಲಿ ಸಂಬಳಕ್ಕೆ ಮೀಸಲಿಟ್ಟ ಮೊತ್ತವನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿಲ್ಲ. ಸಂಬಳ ನೀಡಲು ಬೇಕಾದ ಮೊತ್ತವನ್ನು ಅನುದಾನದಿಂದ ಪ್ರತ್ಯೇಕಿಸಿ ಸಿಬ್ಬಂದಿ ಸಂಬಳದ ಖಾತೆಗೆ ಜಮಾ ಮಾಡಬೇಕು ಎಂದು ರಾಜ್ಯಾಧ್ಯಕ್ಷ ವಿ.ಪಿ. ಕುಲಕರ್ಣಿ ಆಗ್ರಹಿಸಿದರು.
‘ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಕಂಪ್ಯೂಟರ್ ಆಪರೇಟರ್‌ಗಳ ಸೇವಾ ಅವಧಿ ಪರಿಗಣಿಸಿ ನೇರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು. ತಿದ್ದುಪಡಿ ತರುವಾಗ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್, ಕ್ಲರ್ಕ್, ವಾಟರ್ ಮನ್, ಅಟೆಂಡರ್, ಸ್ವೀಪರ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಉತ್ತೀರ್ಣರಾದ ಎಲ್ಲ ನೌಕರರನ್ನು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
‘2012ರ ವೃಂದ ಮತ್ತು ನೇಮಕಾತಿ ನಿಯಮದಂತೆ ಗ್ರೇಡ್-2 ಕಾರ್ಯದರ್ಶಿ ಹುದ್ದೆಗಳಿಗೆ ಶೇ 70ರಷ್ಟು, ಲೆಕ್ಕ ಸಹಾಯಕ ಹುದ್ದೆಗಳಿಗೆ ಶೇ 10ರಷ್ಟು ಬಿಲ್ ಕಲೆಕ್ಟರ್‌ಗಳನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು. ಕನಿಷ್ಠ ಕೂಲಿ ಪರಿಷ್ಕರಿಸಿ 5 ವರ್ಷಗಳು ಕಳೆದಿದ್ದು, ಬೆಲೆ ಏರಿಕೆ ಆಧರಿಸಿ ಕನಿಷ್ಠ ಕೂಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು. ವೇತನಕ್ಕಾಗಿ ಕೂಡಲೇ ₹700 ಕೋಟಿ ಬಿಡುಗಡೆ ಮಾಡಬೇಕು’ ಎಂದು ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ ಒತ್ತಾಯಿಸಿದರು. ಸೆ.5ರಂದು ಹೊರಡಿಸಿರುವ ಆದೇಶದಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ಕಡೆಗೆ ಹೊರಟ ನೌಕರರನ್ನು ರೈಲು ನಿಲ್ದಾಣದ ಆವರಣದಲ್ಲೇ ಪೊಲೀಸರು ತಡೆದರು. ಅಲ್ಲಿಯೇ ಧರಣಿ ಮುಂದುವರಿಸಿದ ನೌಕರರು, ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಪ್ರತಿಭಟನೆಕಾರರ ಒತ್ತಡಕ್ಕೆ ಮಣಿದ ಪೊಲೀಸರು ನಿಯೋಗದ ಮೂಲಕ ಸಿಎಂ ಗೆ ಮನವಿ ಪತ್ರ ಸಲ್ಲಿಸಿದರು. ಈ ತಿಂಗಳ 13ರೊಳಗೆ ಮುಖಂಡರ ಜೊತೆ ಮಾತನಾಡುವುದಾಗಿ ಹೇಳಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಆರ್.ಎಸ್. ಬಸವರಾಜ, ಉಪಾಧ್ಯಕ್ಷ ಮಂಟನಗೌಡ, ಗೋಪಾಲಕೃಷ್ಣ ಅರಳಹಳ್ಳಿ, ಸಹಕಾರ್ಯದರ್ಶಿ ಗೈಬು ಜೈನೆಖಾನ್, ಶಿವಾನಂದ ಕವಲಗಾ ಸೇರಿದಂತೆ ಸಾವಿರಾರು ಪಂಚಾಯತ್ ನೌಕರರು ಇದ್ದರು.