ಕೊಪ್ಪಳ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು ಮುನ್ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗಿ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಪರೀಕ್ಷಾ ಶುಲ್ಕವನ್ನು ಏರಿಸುವುದೆನದರೆ ಬಡವರ ಮಕ್ಕಳ ಶಿಕ್ಷಣದ ಮೇಲೆ ಬರೆ ಎಳದಂತೆ ಎಂದು ಹೋರಾಟದಲ್ಲಿ ಭಾಗಿಯಾದ ಆಮ್ ಆದ್ಮಿ ಪಕ್ಷ(ಎಎಪಿ)ದ ಕೊಪ್ಪಳ ಜಿಲ್ಲೆ ಸಂಘಟನಾ ಕಾರ್ಯದರ್ಶಿ ಹೇಳಿದರು.
ಬಳ್ಳಾರಿ ವಿಶ್ವವಿದ್ಯಾಲಯದ 240 ಕಾಲೇಜುಗಳಲ್ಲಿ ಎರಡನೇ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು 1300 ಮತ್ತು 1450 ರೂಗಳನ್ನು ಹೆಚ್ಚು ಮಾಡಿದ್ದಾರೆ. ಕಳೆದ ಬಾರಿ ಬಿ.ಎ, ಬಿ.ಕಾಂ., ಬಿ.ಎಸ್ಸಿ, ಬಿಬಿಎ/ಎಮ್ ನ ಮೊದಲ ಸೆಮಿಸ್ಟರ್ ನಲ್ಲಿ 150 ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಂಡಿದ್ದರು.
ಮೊದಲ ಸೆಮಿಸ್ಟರ್ ನಲ್ಲಿ ಎನ್.ಇ.ಪಿ. ಅಡಿಯಲ್ಲಿ ಕಡಿಮೆ ಶುಲ್ಕವನ್ನು ಕಟ್ಟಿಸಿಕೊಂಡಿದ್ದ ವಿಶ್ವವಿದ್ಯಾಲಯ, ಇವಾಗ ಎನ್.ಇ.ಪಿ ಹೆಸರಲ್ಲಿ ಹಗಲು ದರೋಡೆಗೆ ಇಳಿದಿದೆ. ಬಡ ಮಕ್ಕಳ ಭವಿಷ್ಯದ ಮೇಲೆ ವಿಶ್ವವಿದ್ಯಾಲಯ ಪದೇ ಪದೇ ಹುಡುಗಾಟ ಆಡುತ್ತಿದೆ. ಎನ್.ಇ.ಪಿ. ಎಂಬುದು ಖಾಸಗೀಕರಣದ ಮೋಸದ ಜಾಲ ಎಂಬುದು ಇವಾಗ ಅರಿವಾಗುತ್ತಿದೆ.
ಬಡ ವಿದ್ಯಾರ್ಥಿಗಳು ನೂರರಿಂದ ಎರಡ್ನೂರು ರೂಪಾಯಿಗಳನ್ನು ಕಟ್ಟದೆ ಪರದಾಡುತ್ತಾರೆ. ಇಂತಹ ಸಂದರ್ಭದಲ್ಲಿ ರೂ.1300-1450 ಕಟ್ಟಿ ಎಂದರೆ ಅವರು ಎಲ್ಲಿಂದ ತರಬೇಕು? ಎಂದು ಗೌತಮ್ ಬಳಗನೂರ ಪ್ರಶ್ನೆ ಮಾಡಿದರು.
ಹೋರಾಟಕ್ಕೆ ಮಣಿದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಬಸವರಾಜ್ ಪೂಜಾರ ಆಗಮಿಸಿ ಮನವಿ ಸ್ವೀಕರಿಸಿ, ಇವತ್ತು ಅಥವಾ ನಾಳೆಯ ಒಳಗಡೆ ಪರೀಕ್ಷಾ ಶುಲ್ಕ ಕಡಿಮೆ ಆಗುತ್ತೆ ಎಂಬ ಭರವಸೆ ನೀಡಿದ್ದಾರೆ. ಒಂದು ವೇಳೆ ಇವರ ಮಾತು ಹುಸಿಗೊಂಡರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿಗಳೆಲ್ಲ ಒಕ್ಕೊರಲಿನಿಂದ ಹೇಳಿದ್ದಾರೆ.
ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆದ ಎಂ.ಕೆ ಸಾಹೇಬ್ ನಾಗೇಶನಹಳ್ಳಿ, ಶಿಕ್ಷಣ ಪ್ರೇಮಿಗಳಾದ ಗೌತಮ್ ಬಳಗನೂರ, ರಘು ಚಕ್ರಿ, ಗವಿ ಹೂಗಾರ, ರಮೇಶ್ ಭೀಮಣ್ಣ, ನವೀನ್ ಹೊಸಕೋಟೆ ಮುಂತಾದವರ ನೇತೃತ್ವದಲ್ಲಿ ಈ ಹೋರಾಟ ನಡೆಯಿತು.