ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಆದೇಶ ಹೊರಡಿಸಿ: ಸಿದ್ದರಾಮಯ್ಯ

ಬೆಂಗಳೂರು: ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಬರವಣಿಗೆಯಲ್ಲಿ ಭರವಸೆ ನೀಡಿದೆ. ಆದರೆ ಅಧಿಕೃತ ಆದೇಶ ಹೊರಡಿಸಿಲ್ಲ. ಈ ರೀತಿ ಮೋಸ ಮಾಡದೆ ಕೂಡಲೇ ಆದೇಶ ಹೊರಡಿಸಬೇಕು. ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಸರ್ಕಾರ ಬಾಯಿ ಮಾತಿನ ಭರವಸೆ ನೀಡಿದರೆ ಸಾಲದು, ಬೇಡಿಕೆಗಳನ್ನು ಈಡೇರಿಸಿ ಕುರಿತು ಅಧಿಕೃತ ಆದೇಶ ಹೊರಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಸಿದ್ಧರಾಮಯ್ಯ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿತ್ತು. ವೇತನ ಹೆಚ್ಚಳ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರ ಪೌರ ಕಾರ್ಮಿಕರಿಗೆ ಸ್ಪಂದಿಸುತ್ತಿಲ್ಲ ಎಂದರು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ತಿಳಿಸಿದರು.

ಪೌರ ಕಾರ್ಮಿಕರ ಸೇವೆ ಕಾಯಂ, ಪ್ರತಿ ತಿಂಗಳು ವೇತನ ಪಾವತಿ ಕುರಿತು ಸರ್ಕಾರ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಬರವಣಿಗೆಯಲ್ಲಿ ನೀಡಿರುವ ಭರವಸೆ ಕಣ್ಣೊರೆಸುವ ತಂತ್ರ ಮಾತ್ರ. ಸರ್ಕಾರದ ಈ ಭರವಸೆ ನಂಬಬಾರದು. ಚಳವಳಿಯನ್ನು ವಾಪಸ್ಸು ಪಡೆಯಲಿ ಎಂಬ ಕಾರಣಕ್ಕೆ ಈ ರೀತಿಯ ನಾಟಕವಾಡಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಹೊರ ಗುತ್ತಿಗೆ, ಗುತ್ತಿಗೆ ಸೇರಿದಂತೆ ಎಲ್ಲ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುತ್ತೇವೆ. ಪೌರ ಕಾರ್ಮಿಕರ ಹಿತ ಕಾಯಲು ನಮ್ಮ ಪಕ್ಷ ಬದ್ಧ ಎಂದ ಸಿದ್ದರಾಮಯ್ಯ ಅವರು, ತಳ ಸಮುದಾಯದ ಪೌರ ಕಾರ್ಮಿಕರ ಜೀವನ ಕಷ್ಟಕರ. ಜೀವದ ಹಂಗು ತೊರೆದು, ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡುವ ಅವರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ. ನಮ್ಮ ಬೆಂಬಲ ಸದಾ ನಿಮಗೆ ಇರುತ್ತದೆ ಎಂದರು.

ಸಿದ್ದರಾಮಯ್ಯ ಅವರೊಂದಿಗೆ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಹಾಗೂ ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *