ಪರಿಹಾರ ವಿತರಣೆಯಲ್ಲಿ ತಾರತಮ್ಯ- ಹತ್ಯೆಗೀಡಾದ ಹಿಂದೂಗಳ ಕುಟುಂಬಕ್ಕೆ ಹೆಚ್ಚು ಪರಿಹಾರ: ಸಿದ್ದರಾಮಯ್ಯ

ಬೆಂಗಳೂರು: ‘ಮತೀಯ ಸಂಘರ್ಷ, ದುರ್ಘಟನೆಗಳಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರ ನೀಡುವಾಗ ಸರ್ಕಾರವೇ ತಾರತಮ್ಯ ಮಾಡಿದರೆ ಹೇಗೆ? ಜಾತಿ, ಧರ್ಮ, ಸಂಘಟನೆಯ ಆಧಾರದಲ್ಲಿ ತಾರತಮ್ಯ ಮಾಡದೇ ಮೃತರ ಕುಟುಂಬಗಳಿಗೆ ಪರಿಹಾರ ನೀಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು.

ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹರ್ಷ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದಾರೆ. ಬೆಳ್ತಂಗಡಿಯಲ್ಲಿ ಬಜರಂಗದಳದ ಮುಖಂಡನಿಂದ ಕೊಲೆಯಾದ ಪರಿಶಿಷ್ಟ ಪಂಗಡದ ದಿನೇಶ್‌ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 4 ಲಕ್ಷ ಮಾತ್ರ ನೀಡಲಾಗಿದೆ. ದಿನೇಶ್‌ ಬಜರಂಗ ದಳಕ್ಕೆ, ಬಿಜೆಪಿಗೆ ಸೇರಿಲ್ಲ ಎಂಬ ಕಾರಣಕ್ಕೆ ಕಡಿಮೆ ಪರಿಹಾರ ಕೊಟ್ಟಿದ್ದೀರಾ’ ಎಂದು ಪ್ರಶ್ನಿಸಿದರು.

ಪರಿಹಾರವೇನು ಇವರ ಅಪ್ಪನ ಮನೆಯಿಂದ ಕೊಡುತ್ತಾರಾ? ಸಾರ್ವಜನಿಕರು ಬೆವರು ಸುರಿಸಿ ದುಡಿದು ಕಟ್ಟಿರುವ ತೆರಿಗೆ ಹಣ ಅದು. ಜನರಿಗೆ ಮಕ್ಮಲ್ ಟೋಪಿ ಹಾಕಬಹುದೆಂದು ಬಿಜೆಪಿ ತಿಳಿದುಕೊಂಡಿದೆ. ಒಂದಲ್ಲಾ ಒಂದು ದಿನ ರಾಜ್ಯದ ಜನರಿಗೆ ಸತ್ಯ ಗೊತ್ತಾಗುತ್ತದೆ. ಭಾವನಾತ್ಮಕ ವಿಚಾರಗಳಿಂದಲೇ ಬಿಜೆಪಿ ಇಕ್ಕಟ್ಟಿಗೆ ಸಿಲುಕುತ್ತದೆ. ರಾಜ್ಯದ ಜನರು ದಡ್ಡರಲ್ಲ, ಎಲ್ಲವನ್ನು ಗಮನಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

‘ಗದಗದಲ್ಲಿ ಸಮೀರ್‌ ಎಂಬ ಯುವಕನನ್ನು ಸಂಘ ಪರಿವಾರದ ಕಾರ್ಯಕರ್ತರು ಕೊಲೆ ಮಾಡಿದ್ದಾರೆ. ಆ ಯುವಕನ ಕುಟುಂಬಕ್ಕೆ ಬಿಡಿಗಾಸೂ ಪರಿಹಾರ ನೀಡಿಲ್ಲ. ಕೊಡಗು ಜಿಲ್ಲೆಯ ವಿರಾಜಪೇಟೆಯ ಅಲ್ತಾಫ್‌ ಅಹಮ್ಮದ್‌ ಎಂಬ ಯೋಧ ಕಾಶ್ಮೀರದಲ್ಲಿ ಹಿಮಗಡ್ಡೆ ಕುಸಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಈ ಇಬ್ಬರ ಕುಟುಂಬಗಳಿಗೂ ₹ 25 ಲಕ್ಷ ಪರಿಹಾರ ನೀಡಬೇಕಲ್ಲವೆ’ ಎಂದು ಕೇಳಿದರು.

ಸರ್ಕಾರ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡುತ್ತಿದೆ. ಸಂಘ ಪರಿವಾರದವರು ಅಲ್ಪಸಂಖ್ಯಾತರ ಕೊಲೆ ಮಾಡಿದರೆ ಮೃತ ಅಲ್ಪಸಂಖ್ಯಾತರಿಗೆ ಕಡಿಮೆ ಪರಿಹಾರವನ್ನು ಕೊಡುತ್ತಾರೆ. ಮುಸ್ಲಿಮರು ಹಿಂದೂಗಳ ಕೊಲೆ ಮಾಡಿದರೆ ಹೆಚ್ಚು ಪರಿಹಾರ. ಹತ್ಯೇಗೀಡಾದ ಹಿಂದೂಗಳ ಕುಟುಂಬಕ್ಕೆ ಹೆಚ್ಚು ಪರಿಹಾರ ನೀಡುತ್ತಾರೆ. ಇಂತಹ ತಾರತಮ್ಯ ಏಕೆಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸ್ಪೀಕರ್ ನಮ್ಮ ಆರ್‌ಎಸ್ಎಸ್ ಎಂದು ಹೇಳಿದ್ದು ತಪ್ಪು

ಇದೇ ವೇಳೆ, ಸ್ಪೀಕರ್ ನಮ್ಮ ಆರ್‌ಎಸ್ಎಸ್ ಎಂದು ಹೇಳಿದ್ದು ತಪ್ಪು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಆ ಮಾತು ಹೇಳಿದ್ದು ತಪ್ಪು. ಸ್ಪೀಕರ್ ಆದವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಆದರೆ ಸ್ಪೀಕರ್ ನಮ್ಮ ಆರ್‌ಎಸ್‌ಎಸ್‌ ಎಂದು ಹೇಳಿರುವುದು ಸರಿಯಲ್ಲ. ಸಮಾಜ ಒಡೆಯುವುದೇ ಆರ್‌ಎಸ್‌ಎಸ್‌ನವರ ಅಜೆಂಡಾ. ಹೀಗಾಗಿಯೇ ನಾವು ಆರ್‌ಎಸ್‌ಎಸ್ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರೇಣುಕಾಚಾರ್ಯ ಪುತ್ರಿ ಜಾತಿ ಪ್ರಮಾಣ ಪತ್ರ ವಿವಾದಕ್ಕೆ ಸಂಬಂಧಿಸಿ ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿ. ಶಾಸಕ ರೇಣುಕಾಚಾರ್ಯರನ್ನು ಸಮರ್ಥಿಸಿಕೊಳ್ಳಬಾರದು. ಅವರನ್ನು ಸಮರ್ಥಿಸಿಕೊಳ್ಳುವುದು ಪ್ರೋತ್ಸಾಹ ಕೊಟ್ಟಂತೆ. ಕಾನೂನುಬಾಹಿರ ಕೆಲಸಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತೆ. ರಾಜ್ಯ ಸರ್ಕಾರವೇ ಈಗ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ. ಅವರನ್ನು ಏನು ಮಾಡಬೇಕು ಹೇಳಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಯಾರನ್ನೂ ಬಿಡುವುದಿಲ್ಲ

ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂದು ನೋಡುವುದಿಲ್ಲ. ಆರ್‌ಎಸ್‌ಎಸ್‌, ಬಜರಂಗದಳ ಸೇರಿದಂತೆ ಯಾವುದೇ ಸಂಘಟನೆ ಸದಸ್ಯರು ಅಪರಾಧ ಕೃತ್ಯದಲ್ಲಿ ಭಾಗಿಯಾದರೂ ಕ್ರಮ ನಿಶ್ಚಿತ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಯಾವ ಲೋಪವೂ ಆಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರಣಿ ಹತ್ಯೆಗಳು ನಡೆದಿದ್ದವು ಎಂದು ಆರೋಪಿಸಿದರು.

ಬಿಜೆಪಿ– ಕಾಂಗ್ರೆಸ್‌ ಶಾಸಕರ ವಾಕ್ಸಮರ

ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ, 2017ರಲ್ಲಿ ನಡೆದಿದ್ದ ಪರೇಶ್‌ ಮೇಸ್ತ ಸಾವಿನ ಪ್ರಕರಣದ ಕುರಿತು ಪ್ರಸ್ತಾಪಿಸಲು ಯತ್ನಿಸಿದರು. ಆದರೆ, ಸಿದ್ದರಾಮಯ್ಯ ಮಾತು ನಿಲ್ಲಿಸಲಿಲ್ಲ. ಬಿಜೆಪಿ ಶಾಸಕರು ರೂಪಾಲಿ ಬೆಂಬಲಕ್ಕೆ ನಿಂತು ಏರಿದ ಧ್ವನಿಯಲ್ಲಿ ಕೂಗಲಾರಂಭಿಸಿದರು. ಕಾಂಗ್ರೆಸ್‌ ಶಾಸಕರೂ ಪ್ರತ್ಯುತ್ತರ ನೀಡಿದರು.

ಬಿಜೆಪಿಯ ಜಿ. ಸೋಮಶೇಖರ ರೆಡ್ಡಿ, ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಸಂಜೀವ ಮಠಂದೂರು ಸೇರಿದಂತೆ ಹಲವು ಶಾಸಕರು ಗುಂಪುಗೂಡಿ ಆಡಳಿತ ಪಕ್ಷದ ಕಡೆಯ ಮುಂದಿನ ಸಾಲಿನಲ್ಲಿ ನಿಂತು ಏರಿದ ಧ್ವನಿಯಲ್ಲಿ ಆಕ್ಷೇಪಿಸಿದರು.

Donate Janashakthi Media

Leave a Reply

Your email address will not be published. Required fields are marked *