ಕಾರವಾರ: ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದು, ಇದೊಂದು ಆಕಸ್ಮಿಕ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2017ರ ಡಿಸೆಂಬರ್ 6ರಂದು ಈ ಘಟನೆ ನಡೆದಿತ್ತು. ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಪರೇಶ್ ಮೇಸ್ತಾ ಎಂಬ ಯುವಕ ನಾಪತ್ತೆಯಾಗಿದ್ದು, ಬಳಿಕ ಡಿಸೆಂಬರ್ 8ರಂದು ಹೊನ್ನಾವರದಲ್ಲಿ ಈತನ ಮೃತದೇಹ ಪತ್ತೆಯಾಗಿತ್ತು.
ಈ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡ ಬಳಿಕ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಇದೀಗ ತನಿಖಾ ವರದಿಯನ್ನು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದೊಂದು ಆಕಸ್ಮಿಕ ಸಾವು, ಕೊಲೆಯಲ್ಲ ಎಂದು ಸಿಬಿಐ ಅಭಿಪ್ರಾಯಪಟ್ಟಿದೆ.
ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಘಟನೆ
ಪರೇಶ್ ಮೇಸ್ತನದ್ದು ಕೊಲೆ ಅಂತ ಕುಟುಂಬಸ್ಥರು, ಹಾಗೂ ಬಿಜೆಪಿ, ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಪರೇಶ್ ಮೇಸ್ತನನ್ನು ಅನ್ಯ ಕೋಮಿನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು. ಮೇಸ್ತಾನನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಈ ಘಟನೆ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.
ಪರೇಶ್ ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಬಲವಾಗಿ ಕೇಳಿಬಂತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಡಿಸೆಂಬರ್ 11ರಂದು ಬಂದ್‌ಗೆ ಕರೆ ನೀಡಿದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡರು, ವಾಹನಗಳು ಜಖಂಗೊಂಡಿದ್ದವು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಸಂಘಪರಿವಾರದ ಕಾರ್ಯರ್ತರ ಹತ್ಯೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಪರೇಶ್ ಮೇಸ್ತಾ ಹೆಸರನ್ನು ಪಟ್ಟಿಯಲ್ಲಿ ಸೇರಿಸುತ್ತಿತ್ತು. ಈ ನಡುವೆ ಸಿಬಿಐ ಈಗ ಬಿ ರಿಪೋರ್ಟ್ ಸಲ್ಲಿಸಿದೆ.
ಸಿಬಿಐ ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ – ಸಿದ್ದರಾಮಯ್ಯ
ಸಿಬಿಐ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹನ್ನಾವರದ ಪರೇಶ್ ಮೇಸ್ತನದು ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದ ಬಿಜೆಪಿ ಮಾನ ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತದ ಇದೆ. ಬಿಜೆಪಿ ನಾಯಕರೇ ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತನಂತಹ ಯುವಕನ ರಕ್ತದ ಕಲೆ ಅಂಟಿಕೊಂಡಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.