ತಮಿಳುನಾಡು: ಆಧುನಿಕವಾಗಿ ಈ ಜಗತ್ತು ತುಂಬಾ ಮುಂದುವರಿಯುತ್ತಿದೆ. ಆದರೆ, ತನ್ನ ಬೆಳವಣಿಗೆ ಹಾದಿಯಲ್ಲಿ ಮನುಷ್ಯ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಅದಕ್ಕೆ ಉದಾಹರಣೆ ಇಲ್ಲಿನ ವಿಲ್ಲುಪುರಂನಲ್ಲಿ ಪಾಲಕರು ತಮ್ಮ ವಿಶೇಷ ಚೇತನ ಮಗನನ್ನು ಮೀನಿನ ಬುಟ್ಟಿಯಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಹೊತ್ತು ತಂದ ಹೃದಯವಿದ್ರಾವಕ ಘಟನೆ ನಡೆದಿದೆ.
ವಿಲ್ಲುಪುರಂ ಜಿಲ್ಲೆಯ ಮೇಲ್ಕರನೈ ಮೂಲದ ವೆಂಕಟೇಶನ್ ಮತ್ತು ಅವರ ಪತ್ನಿ ಕಲೈಮಲ್ ತಮ್ಮ ಮಗನನ್ನು ಮೀನಿನ ಬುಟ್ಟಿಯಲ್ಲಿ ಹೊತ್ತುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು. ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಮಕ್ಕಳಾದ ಗೋವಿಂದನ್ (26) ಮತ್ತು ಭುವನೇಶ್ವರಿ (24) ಹುಟ್ಟಿನಿಂದಲೇ ದೈಹಿಕವಾಗಿ ದುರ್ಬಲರು. ಅವರಿಗೆ ಚಲಿಸಲು ಮತ್ತು ಮಾತನಾಡಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ನ ಲೈಂಗಿಕ ದೌರ್ಜನ್ಯದ ತೀರ್ಪು ಖಂಡನೀಯ: ಮೀನಾಕ್ಷಿ ಬಾಳಿ
ವಿಶೇಷ ಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಆರ್ಥಿಕ ನೆರವು ಕಳೆದ ಆರು ತಿಂಗಳಿನಿಂದ ಮಗನಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ಪದೇಪದೆ ವಿನಂತಿಸಿದರೂ ಮತ್ತು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರೂ ಅಧಿಕಾರಿಗಳಿಂದ ಯಾವುದೇ ಪರಿಹಾರ ಸಿಗಲಿಲ್ಲ.
ಗೋವಿಂದನ್ ಮೃತಪಟ್ಟಿದ್ದಾರೆ ಮತ್ತು ಇನ್ನು ಮುಂದೆ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಆದರೆ, ನಮ್ಮ ಮಗ ಸತ್ತಿಲ್ಲ, ಇನ್ನೂ ಬದುಕಿದ್ದಾನೆ ಎಂದು ಹೇಳಿದರೂ ಕೂಡ ಅಧಿಕಾರಿಗಳು ಮಾತ್ರ ನಂಬುತ್ತಿರಲಿಲ್ಲ. ಅಧಿಕಾರಿಗಳ ಮಾತಿನಿಂದ ನೊಂದುಕೊಂಡ ದಂಪತಿ, ತಮ್ಮ ಮಗ ಜೀವಂತವಾಗಿದ್ದಾನೆ ಎಂದು ಸಾಬೀತುಪಡಿಸಲು ಮಗನನ್ನು ಮೀನಿನ ಬುಟ್ಟಿಯಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.
ಈ ಘಟನೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ಅಮಾನವೀಯತೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ನೋಡಿ: ಮಾದೇಶ್ವರ ಮತ್ತು ಮಂಟೇಸ್ವಾಮಿ ಬಗ್ಗೆ ನಮಗೆಷ್ಟು ಗೊತ್ತು? Janashakthi Media