ನವದೆಹಲಿ: ಪ್ರಬಲ ಪೈಪೋಟಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಮಕ್ಕಳ ಮೇಲೆ ಪಾಲಕರು ಹೇರುವ ಒತ್ತಡವೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಆತ್ಮಹತ್ಯೆ ಪ್ರಕರಣದಲ್ಲಿ ಮಕ್ಕಳ ಪೋಷಕರೇ ಹೊಣೆಗಾರರೆಂದು ಅಸಮಾಧಾನ ವ್ಯಕ್ತಪಡಿಸಿದೆ.
ದೇಶದ ಹಲವು ನಗರಗಳಲ್ಲಿ ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಕೋಚಿಂಗ್ ಸೆಂಟರ್ಗಳ ಮೇಲೆ ನಿಗಾ ವಹಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮುಂಬಯಿ ಮೂಲದ ವೈದ್ಯ ಅನಿರುದ್ಧ ನಾರಾಯಣ ಮಾಲ್ಪನಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್ ಭಟ್ಟಿ ಅವರನ್ನು ಒಳಗೊಂಡ ಪೀಠ ಹೇಳಿದೆ.
ರಾಜಸ್ಥಾನದ ಕೋಟಾದಲ್ಲಿ ಮಕ್ಕಳ ಆತ್ಮಹತ್ಯೆ ಪ್ರಮಾಣಕ್ಕೆ ಪೋಷಕರು ಮಾತ್ರ ಕಾರಣ ಎಂದು ಅರ್ಜಿಯೊಂದರ ವಿಚಾರಣೆ ವೇಳೆ, ಇಂತಹ ಸನ್ನಿವೇಶಗಳಲ್ಲಿ ನ್ಯಾಯಾಂಗ ಯಾವುದೇ ಸೂಚನೆ ನೀಡುವುದು ಸಾಧ್ಯವಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.
ಇದರೊಂದಿಗೆ ಕೋಚಿಂಗ್ ಸೆಂಟರ್‍ಗಳಿಗೆ ಲಗಾಮು ಹಾಕಲು ಕೋರ್ಟ್ ನಿರಾಕರಿಸಿದೆ. ಕೋಟಾದಲ್ಲಿ ಈ ವರ್ಷ ಇಲ್ಲಿಯವರೆಗೆ 24 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಂದ ತಮ್ಮ ಸಾಮಥ್ರ್ಯಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಇದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ಹೆಜ್ಜೆ ಇಡುತ್ತಾರೆ. ಮಕ್ಕಳ ಆತ್ಮಹತ್ಯೆಗೆ ಕೋಚಿಂಗ್ ಸೆಂಟರ್‍ಗಳೇ ಕಾರಣ ಎಂದು ಮುಂಬೈ ಮೂಲದ ವೈದ್ಯ ಅನಿರುದ್ಧ್ ನಾರಾಯಣ್ ಮಲ್ಪಾನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಕೋಚಿಂಗ್ ಇನ್‍ಸ್ಟಿಟ್ಯೂಟ್‍ಗಳಲ್ಲಿ ಕನಿಷ್ಠ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆಯೂ ಅವರು ತಮ್ಮ ಅರ್ಜಿಯಲ್ಲಿ ಮಾತನಾಡಿದ್ದಾರೆ. ಈ ಕುರಿತು ಕಾನೂನು ರೂಪಿಸಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು, ತಪ್ಪು ಮಕ್ಕಳ ಪೋಷಕರಲ್ಲಿದೆಯೇ ಹೊರತು ಕೋಚಿಂಗ್ ಸಂಸ್ಥೆಗಳದ್ದಲ್ಲ ಎಂದು ಹೇಳಿದೆ.
ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ವಯಸ್ಸು 14-16 ವರ್ಷಗಳು. ಈ ವರ್ಷ ರಾಜಸ್ಥಾನದ ಕೋಟಾದಲ್ಲಿ ನೀಟ್ ಮತ್ತು ಜೆಇಇ ಕೋಚಿಂಗ್‍ಗೆ ಬಂದ 24 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಅಂಕಿ ಅಂಶವು ಕಳೆದ 8 ವರ್ಷಗಳಲ್ಲಿಯೇ ಅತ್ಯಕವಾಗಿದೆ. ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ತರಬೇತಿ ಸಂಸ್ಥೆಗಳಿಗೆ ವಿಶೇಷ ಶಿಫಾರಸುಗಳನ್ನು ಸಹ ಮಾಡಲಾಗಿದೆ. ಇಷ್ಟೆಲ್ಲಾ ಇದ್ದರೂ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಮುಖವಾಗಿಲ್ಲ.
ದೇಶದಲ್ಲಿ ಕೋಚಿಂಗ್ ಸೆಂಟರ್‍ಗಳೇ ಇರಬಾರದು ಎಂದು ನಮ್ಮಲ್ಲಿ ಹೆಚ್ಚಿನವರು ಬಯಸುವುದುಂಟು. ಆದರೆ, ಶಾಲೆಗಳ ಸ್ಥಿತಿ ಎಲ್ಲ ರೀತಿಯಿಂದಲೂ ಉತ್ತಮವಾಗಿಲ್ಲ. ಮತ್ತೊಂದು ಕಡೆ ತೀವ್ರತರದ ಸ್ಪರ್ಧೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಮೊರೆ ಹೋಗದೆ ಬೇರೆ ಆಯ್ಕೆ ಇಲ್ಲದಂತಾಗಿದೆ. ಎಂದು ನ್ಯಾ.ಖನ್ನಾ ಹೇಳಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊದ (ಎನ್‍ಸಿಆರ್ಬಿ) 2020ನೇ ಸಾಲಿನ ದತ್ತಾಂಶಗಳ ಪ್ರಕಾರ ದೇಶದಲ್ಲಿ ಸಂಭವಿಸಿದ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳ ಪೈಕಿ ಸುಮಾರು ಶೇ 8.2ರಷ್ಟು ಆತ್ಮಹತ್ಯೆ ಪ್ರಕರಣಗಳಾಗಿವೆ ಎಂದು ವಕೀಲೆ ಪ್ರಿಯಾ ತಿಳಿಸಿದರು.
ತನಗೆ ಪರಿಸ್ಥಿತಿಯ ಅರಿವು ಇದೆ. ಆದರೆ ಕೋರ್ಟ್ ನಿರ್ದೇಶನ ನೀಡುವುದು ಸಾಧ್ಯವಿಲ್ಲ. ಇದರ ಬದಲು ಅರ್ಜಿದಾರರು ತಮ್ಮ ಸಲಹೆಗಳೊಂದಿಗೆ ಸರ್ಕಾರವನ್ನು ಸಂಪರ್ಕಿಸಲಿ ಎಂದು ನ್ಯಾಯಪೀಠ ಸಲಹೆ ನೀಡಿತು. ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಿಯಾ ಹೇಳಿದರು. ಅದಕ್ಕೆ ಕೋರ್ಟ್ ಅನುಮತಿ ನೀಡಿತು.
ಐಐಟಿ- ಜೆಇಇ ಮತ್ತು ನೀಟ್‍ನಂತಹ ವಿವಿಧ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತರಬೇತಿ ನೀಡಲು ದೇಶಾದ್ಯಂತ ನಾಯಿ ಕೊಡೆಗಳಂತೆ ಖಾಸಗಿ ಕೋಚಿಂಗ್ ಕೇಂದ್ರಗಳು ತಲೆ ಎತ್ತುತ್ತಿವೆ. ಇವೆಲ್ಲವೂ ಲಾಭಕ್ಕಾಗಿ ಹವಣಿಸುತ್ತಿವೆ ಎಂದು ಅರ್ಜಿದಾರ ಮಾಲ್ಪನಿ ಹೇಳಿದ್ದರು.
14 ವರ್ಷ ತಲುಪುತ್ತಿದ್ದಂತೆಯೇ ಮಕ್ಕಳು ಈ ಕೋಚಿಂಗ್ ಫ್ಯಾಕ್ಟರಿಗಳ ಪ್ರವೇಶ ಪಡೆಯುತ್ತಾರೆ. ಅವರು ಹೆಚ್ಚಾಗಿ ತಮ್ಮ ಮನೆಗಳಿಂದ ದೂರವೇ ಇರುತ್ತಾರೆ. ಒಳ್ಳೆಯ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪಡೆಯುವ ಗುರಿಯೊಂದಿಗೆ ಕಠಿಣ ಸಿದ್ಧತೆಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು.