ಬೆಂಗಳೂರು: ಇಲ್ಲಿಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ನಡೆಸಿದ್ದಾರೆ. ಜೈಲಿನಲ್ಲೇ ಕುಳಿತು ಪಾತಕಿಗಳು ಅಕ್ರಮ ವ್ಯವಹಾರ ನಡೆಸುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಮೊಬೈಲ್, ಗಾಂಜಾ, ಇತರೆ ವಸ್ತುಗಳು ಪತ್ತೆಯಾಗಿವೆ.
ಆನೇಕಲ್ ಸಮೀಪದ ಪರಪ್ಪನ ಅಗ್ರಹಾರದಲ್ಲಿ ಬೆಳಗ್ಗೆ 6 ಗಂಟೆಯಿಂದಲೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಯುತ್ತಿದ್ದಾರೆ. ಗಾಂಜಾ, ಮೊಬೈಲ್ ಸೇರಿದಂತೆ ಇನ್ನಿತರ ಅಕ್ರಮ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೈದಿಗಳು ಜೈಲಿನಲ್ಲಿಯೇ ಕೂತು ಅನೇಕ ಅಪರಾಧ ಕೃತ್ಯದಲ್ಲಿ ತೊಡಗಿರುವುದು ಸಹ ಪತ್ತೆಯಾಗಿದೆ.
ಶಿಕ್ಷೆಗೆ ಗುರಿಯಾದ ಹಾಗೂ ವಿಚಾರಣಾಧೀನ ಕೈದಿಗಳು, ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇತ್ತು. ಮೊಬೈಲ್ ಬಳಸುತ್ತಿದ್ದ ಹಾಗೂ ಡ್ರಗ್ಸ್ ಸೇವಿಸುತ್ತಿದ್ದ ಆರೋಪವಿತ್ತು. ಇದೇ ಕಾರಣಕ್ಕೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ.
ಅಕ್ರಮ ಚಟುವಟಿಕೆಗಳ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಇಬ್ಬರು ಡಿಸಿಪಿ ಹಾಗೂ 2 ಡಿಸಿಪಿ, 15 ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸಿಸಿಬಿ ತಂಡ ದಾಳಿ ನಡೆಸಿದ್ದು, ಕಾರ್ಯಾಚರಣೆ ಇನ್ನು ಮುಂದುವರಿದಿದೆ. ಪರಪ್ಪನ ಅಗ್ರಹಾರ ಜೈಲನ್ನು ತಡಕಾಡುತ್ತಿರುವ ಅಧಿಕಾರಿಗಳು, ಜೈಲಿನಲ್ಲಿರುವ ಸಿಬ್ಬಂದಿ ಹಾಗೂ ಕೈದಿಗಳು ಕಂಗಾಲಾಗಿದ್ದಾರೆ. ಸಿಸಿಬಿ ಪೂರ್ಣ ತಂಡದಿಂದ ನಡೆದ ಈ ದಾಳಿ ಸದ್ಯ ಮುಂದುವರಿಸಿದ್ದು, ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.
ದಾಳಿ ವೇಳೆ ಹಲವು ಗಾಂಜಾ ಪ್ಯಾಕೆಟ್‌ಗಳು ದೊರಕಿವೆ. ಆರರಿಂದ ಏಳು ಗಾಂಜಾ ನಳಿಕೆಗಳು ಸಹ ಪತ್ತೆಯಾಗಿವೆ. ಇನ್ನೂ ಕೂಡ ದಾಳಿ ಮುಂದುವರಿದಿದೆ. ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.