ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಸೇರಿದಂತೆ ವ್ಯಾಪಕ ಅಕ್ರಮ ನಡೆದಿರುವುದು ದೃಢಪಟ್ಟಿದ್ದರೂ ನೀಟ್ ಯುಜಿ ಪರೀಕ್ಷೆ-2024 ಯಾಕೆ ರದ್ದುಪಡಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸುದೀರ್ಘ ತೀರ್ಪಿನಲ್ಲಿ ವಿವರಿಸಿತು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ನೀಟ್-ಯುಜಿ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಅಡ್ಡದಾರಿಗಳಿಗೆ ಕಡಿವಾಣ ಹಾಕಿ ಎಂದು ಸೂಚಿಸಿತು.
ಕೇಂದ್ರ ಪರೀಕ್ಷಾ ಕೇಂದ್ರ (NTA) ಪರೀಕ್ಷಾ ಅಕ್ರಮಗಳ ಬಗ್ಗೆ ಉಲ್ಟಾ ಹೊಡೆಯುವುದು ಬಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಲೋಷದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳಲು ಹಾಗೂ ಹೊಸ ನೋಂದಣಿಗೆ ಅವಕಾಶ ಮಾಡಿಕೊಟ್ಟಿರುವುದು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
1563 ವಿದ್ಯಾರ್ಥಿಗಳಿಗೆ ಕೃಪಾಂಕ ಅಂಕ ನೀಡಿದ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ವಿಮರ್ಶೆ ಮಾಡಲು ಸಾಧ್ಯವಿಲ್ಲ. ಆದರೆ ಅಭ್ಯರ್ಥಿಗಳಿಗೆ ಸಮಯದ ಅಭಾವದಿಂದ ಆಗಿರುವ ಸಮಸ್ಯೆಗೆ ನೀಡಲಾಗಿದೆ ಎಂದು ಭಾವಿಸಿ ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತೇವೆ. ಆದರೆ ಸೂಕ್ತ ಸಮಯದಲ್ಲಿ ಈ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.
ಪರೀಕ್ಷಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಪರೀಕ್ಷಾ ಕೇಂದ್ರ ಬದಲಾವಣೆ, ಸಮಯ, ನೋಂದಣಿ ಪ್ರಕ್ರಿಯೆಗಳ ಕುರಿತು ಈಗಾಗಲೇ ನೇಮಿಸಿರುವ ಸಮಿತಿ ಗಮನ ಹರಿಸಿ ಲೋಷದೋಷಗಳನ್ನು ಸರಿಪಡಿಸಬೇಕು. ಈ ಬಗ್ಗೆ ಸೆಪ್ಟೆಂಬರ್ 30ರೊಳಗೆ ವರದಿ ನೀಡುವಂತೆ ಪರೀಕ್ಷಾ ಕೇಂದ್ರಕ್ಕೆ ಸೂಚನೆ ನೀಡಿದೆ.