ಬೆಂಗಳೂರು: ವಿವಿಧ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ನಡೆದಿರುವ ಅಕ್ರಮಗಳಲ್ಲಿ ಶಾಮೀಲಾಗಿರುವ ಸಹಕಾರ ಸಂಘಗಳ ನಿವೃತ್ತ ಜಂಟಿ ರಿಜಿಸ್ಟ್ರಾರ್ ಪಾಂಡುರಂಗ ಡಿ. ಗರಗ್ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆ ಆರಂಭಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಸೀಮಿತವಾಗಿ ಅಸ್ತಿತ್ವಕ್ಕೆ ಬಂದಿದ್ದ ಸಮಾಜ ಕಲ್ಯಾಣ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘವನ್ನು ವಿದ್ಯಾಗಿರಿ ನೌಕರರ ಗೃಹ ನಿರ್ಮಾಣ ಸಂಘ ಎಂಬುದಾಗಿ ಬದಲಿಸಿ ₹ 400 ಕೋಟಿ ಮೊತ್ತದ ಅಕ್ರಮ ನಡೆಸಿರುವುದು, ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದ ಅಕ್ರಮಗಳಿಗೆ ಬೆಂಬಲ ನೀಡಿರುವುದು ಮತ್ತು ಕೇತಮಾರನಹಳ್ಳಿ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನೇರವಾಗಿ ಪಾಲುದಾರರಾಗಿ ಅಕ್ರಮ ನಡೆಸಿರುವ ಆರೋಪ ಪಾಂಡುರಂಗ ಡಿ. ಗರಗ್ ಮೇಲಿದೆ.
ಪಾಂಡುರಂಗ ಡಿ. ಗರಗ್ 2015ರಿಂದ 2018ರವರೆಗೂ ಬೆಂಗಳೂರು ವಿಭಾಗದ ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಜಯನಗರ ನಿವಾಸಿ ಜೆ.ಡಿ. ಕುಮಾರಸ್ವಾಮಿ ಎಂಬುವವರು 2020ರ ಮೇ ತಿಂಗಳಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರನ್ನು ಎಸಿಬಿಗೆ ವರ್ಗಾಯಿಸಿದ್ದ ಲೋಕಾಯುಕ್ತರು, ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.
ದೂರಿನಲ್ಲಿರುವ ಆರೋಪಗಳ ಕುರಿತು ಎಸಿಬಿ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದರು. ಪಾಂಡುರಂಗ ಡಿ. ಗರಗ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಅನುಮತಿ ಕೋರಿ ಎಸಿಬಿ ಅಧಿಕಾರಿಗಳು 2021ರ ಸೆಪ್ಟೆಂಬರ್ 20ರಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ತನಿಖೆಗೆ ಅನುಮತಿ ನೀಡಿದ ಸಹಕಾರ ಇಲಾಖೆಯು 2021ರ ಡಿಸೆಂಬರ್ 3ರಂದು ಆದೇಶ ಹೊರಡಿಸಿತ್ತು.
ಕೆಲವು ತಿಂಗಳ ಹಿಂದೆ ಆರೋಪಿತರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ಸಹಕಾರ ಇಲಾಖೆಯಿಂದ ತನಿಖೆಗೆ ಅನುಮತಿ ಬಂದ ಬಳಿಕ ಮತ್ತೆ ಪ್ರಕ್ರಿಯೆ ಆರಂಭಿಸಿದ ಎಸಿಬಿ ಅಧಿಕಾರಿಗಳು, ಶುಕ್ರವಾರ (ಫೆಬ್ರುವರಿ 4) ದೂರುದಾರರ ಹೇಳಿಕೆ ದಾಖಲಿಸಿಕೊಂಡಿದ್ದರು. ಅದೇ ದಿನ ಪಾಂಡುರಂಗ ಡಿ. ಗರಗ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.