ಪ್ಯಾಂಡೋರಾ ಪೇಪರ್ಸ್ ಲೀಕ್ : ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅಂಬಾನಿ, ಶಕೀರಾ ಹೆಸರುಗಳು

ಹೊಸದಿಲ್ಲಿ: ನಾನಾ ದೇಶಗಳ ಸಿರಿವಂತರ ಮುಚ್ಚಿಟ್ಟ ಆದಾಯಗಳನ್ನು, ಆಸ್ತಿಪಾಸ್ತಿಗಳ ಮಾಹಿತಿಯನ್ನು 2016ರಲ್ಲಿ ಪನಾಮಾ ಪೇಪರ್ಸ್‌ ಬಹಿರಂಗಗೊಳಿಸಿದ ಮಾದರಿಯಲ್ಲೇ, ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ (ಐಸಿಐಜೆ) ತನಿಖಾ ವರದಿಯೊಂದು (ಪಂಡೋರಾ ತನಿಖಾ ವರದಿ) ಹಲವು ದೇಶಗಳ ಮುಖ್ಯಸ್ಥರು, ಭಾರತೀಯ ಉದ್ಯಮಿಗಳು, ಕ್ರೀಡಾಪಟುಗಳು ತೆರಿಗೆ ರಹಿತ ರಾಷ್ಟ್ರಗಳಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಇಂಡಿ​ಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಬಯಲಿಗೆ ಎಳೆದಿದೆ.

ಭಾರತದ ಉದ್ಯಮಿ ಅನಿಲ್‌ ಅಂಬಾನಿ, ಬಾಲಿವುಡ್‌ ನಟ ಜಾಕಿಶ್ರಾಫ್, ‌ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌,  ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಪತಿ ಜಾನ್‌ ಶಾ, ಗಾಂಧಿ ಕುಟುಂಬದ ನಿಕಟವರ್ತಿ ಕ್ಯಾಪ್ಟನ್‌ ಸತೀಶ್‌ ಶರ್ಮಾ, ಇಕ್ಬಾಲ್‌ ಮಿರ್ಚಿ ಸೇರಿದಂತೆ 300 ಮಂದಿ ಭಾರತದ ಉದ್ಯಮಿಗಳು, ಆರು ಪ್ರಮುಖ ರಾಜಕೀಯ ವ್ಯಕ್ತಿಗಳು ಇಂಥ ಹೂಡಿಕೆಗಳನ್ನು ಮಾಡಿದ್ದಾರೆಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಕುರಿತು ತನಿಖೆ ನಡೆಸುವುದಾಗಿ ಕೇಂದ್ರ ಸರಕಾರ ಸೋಮವಾರ ತಿಳಿಸಿದೆ.

ಇಷ್ಟೇ ಅಲ್ಲ, ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಸಂಬಂಧಿಕರು, ಸಚಿವ ಸಂಪುಟದಲ್ಲಿರುವ ಕೆಲವು ಸಚಿವರು ಸೇರಿದಂತೆ 700 ಮಂದಿ ಆ ದೇಶದ ಪ್ರಜೆಗಳ ಹೆಸರುಗಳ ವಿವರಗಳೂ ಇವೆ. ಮೊನ್ಯಾಕೋದಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ ತಮ್ಮ ಗರ್ಲ್ಫ್ರೆಂಡ್‌ ಹೆಸರಲ್ಲಿ ಮಾಡಿರುವ 743 ಕೋಟಿ ರೂ. ಆಸ್ತಿ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಪ್ರಮುಖ ಭಾರತೀಯರ ಹೆಸರುಗಳು : ಅನಿಲ್‌ ಅಂಬಾನಿ, ಇಕ್ಬಾಲ್‌ ಮಿರ್ಚಿ, ಜಾಕಿಶ್ರಾಫ್, ವಿನೋದ್‌ ಅದಾನಿ, ಜಾನ್‌ ಶಾ ನೀರಾ ರಾಡಿಯಾ, ಸಮೀರ್‌ ಥಾಪರ್‌, ಅಜಿತ್‌ ಕೇರ್ಕರ್‌, ಪೂರ್ವಿ ಮೋದಿ, ಕ್ಯಾ|ಸತೀಶ್‌ ಶರ್ಮಾ, ಸಚಿನ್‌ ತೆಂಡೂಲ್ಕರ್‌ ಹೆಸರುಗಳಿವೆ.

ಏನಿದು ‘ಪಂಡೋರಾ ಪೇಪರ್ಸ್‌’? ತೆಂಡೂಲ್ಕರ್‌, ಕಿರಣ್‌ ಷಾ ಪತಿ, ಉದ್ಯಮಿ ಅನಿಲ್‌ ಅಂಬಾನಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಭಾರತೀಯರು, 700ಕ್ಕೂ ಹೆಚ್ಚು ಪಾಕಿ​ಸ್ತಾ​ನಿ​ಗಳು ಹಾಗೂ ಪಾಶ್ಚಿ​ಮಾತ್ಯ ದೇಶ​ಗಳ ಗಣ್ಯ​ರು ತೆರಿಗೆ ಸ್ವರ್ಗ ದೇಶಗಳಲ್ಲಿ ಕಂಪನಿಗಳನ್ನು ಹುಟ್ಟುಹಾಕಿ ಅಕ್ರಮವಾಗಿ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ದಾಖಲೆಗಳನ್ನು ಬಿಡುಗಡೆ ಮಾಡಿದೆ. 2016ರಲ್ಲಿ ಇದೇ ಸಂಸ್ಥೆ ಪನಾಮಾ ಪೇಪರ್ಸ್‌ ಹೆಸರಿನಲ್ಲಿ ಈ ಮಾದರಿಯ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈಗ ಬಿಡುಗಡೆ ಮಾಡಿರುವ ದಾಖಲೆಗಳು ಪನಾಮಾ ಪೇಪರ್ಸ್‌ನ ಮುಂದುವರೆದ ಭಾಗವಾಗಿದ್ದು, ಇದಕ್ಕೆ ಪಂಡೋರಾ ಪೇಪರ್ಸ್‌ ಎಂದು ಕರೆಯಲಾಗಿದೆ. ಭಾರ​ತ​ದಲ್ಲಿ ಐಸಿ​ಐ​ಜೆ ಜತೆ ‘ಇಂಡಿ​ಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ಸಹ​ಭಾ​ಗಿತ್ವ ಹೊಂದಿ​ದೆ.

ತೆರಿಗೆ ವಂಚಕರ ಕುರಿತು 2016ರಲ್ಲಿ ಬಿಡುಗಡೆಯಾಗಿದ್ದ ಪನಾಮಾ ಪೇಪ​ರ್ಸ್ (Panama Papers) ರೀತಿಯಲ್ಲಿ ಇದೀಗ 1.2 ಕೋಟಿ ಫೈಲ್‌ಗಳನ್ನು ಒಳಗೊಂಡ ‘ಪಂಡೋರಾ ಪೇಪ​ರ್ಸ್’ (Pandora Papers) ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಇದರಲ್ಲಿ 300 ಭಾರತೀಯರೂ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಶ್ರೀಮಂತರು ‘ತೆರಿಗೆ ವಂಚ​ಕರ ಸ್ವರ್ಗ’ ಎನ್ನಿಸಿಕೊಂಡ ದೇಶಗಳಲ್ಲಿ ಹೇಗೆ ಕಂಪನಿಗಳನ್ನು ಆರಂಭಿಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಬೆಳಕು ಚೆಲ್ಲಲಾ​ಗಿ​ದೆ.

ಅನಿಲ್‌ ಹೆಸರಲ್ಲಿ 9,600 ಕೋ.ರೂ. ಆಸ್ತಿ!: 2020ರಲ್ಲಿ ಫೆಬ್ರವರಿಯಲ್ಲಿ ಚೀನಾದ ನಿಯಂತ್ರಣದ ಮೂರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ವಿಚಾರಣೆ ವೇಳೆ ತಮ್ಮ ಬಳಿ ಬಿಡಿ​ಗಾಸೂ ಇಲ್ಲ ಲಂಡನ್‌ ನ್ಯಾಯಾಲಯಕ್ಕೆ ಉದ್ಯಮಿ ಅನಿಲ್‌ ಅಂಬಾನಿ(Anil Ambani) ತಿಳಿಸಿದ್ದರು. ಇದಾಗಿ ಮೂರು ತಿಂಗಳ ಬಳಿಕ 5300 ಕೋಟಿ ರು. ಅನ್ನು ಬ್ಯಾಂಕ್‌ಗಳಿಗೆ ಪಾವತಿಸುವಂತೆ ಅನಿಲ್‌ ಅಂಬಾನಿಗೆ ಆದೇಶಿಸಲಾಗಿತ್ತು. ಆದರೆ ದಿವಾಳಿಯಾಗಿರುವ ತನ್ನಿಂದ ಈ ಹಣ ಕಟ್ಟಲು ಸಾಧ್ಯವಿಲ್ಲ ಎಂದು ಅಂಗಲಾಚಿದ್ದರು. ಆದರೆ ಅನಿಲ್‌ ಅಂಬಾನಿ ಮತ್ತು ಆವರ ಪ್ರತಿನಿಧಿಗಳು ತೆರಿಗೆ ಸ್ವರ್ಗ ರಾಷ್ಟ್ರಗಳಾದ ಜೆರ್ಸಿ, ಬ್ರಿಟಿಷ್‌ ಐಲ್ಯಾಂಡ್‌ ಮತ್ತು ಸೈಪ್ರಸ್‌ಗಳಲ್ಲಿ 18 ಕಂಪನಿಗಳನ್ನು ಹೊಂದಿದ್ದಾರೆ ಎಂಬುದು ಭಾರತದಲ್ಲಿ ಪಂಡೋರಾ ಪೇಪರ್ಸ್ಸ್‌ ಬಿಡುಗಡೆ ಮಾಡಿದ ಇಂಡಿಯನ್‌ ಎಕ್ಸ್‌ಪ್ರೆಸ್‌ ತಿಳಿಸಿದೆ. ಈ ಆಸ್ತಿಯ ಮೊತ್ತ ಅಂದಾಜು 9,600 ಕೋಟಿ ರೂ.ಗಳಷ್ಟಿದೆ. ಈ ವಿವರಗಳನ್ನು ಅವರು ಈವರೆಗೆ ಎಲ್ಲೂ ಘೋಷಿಸಿಕೊಂಡಿಲ್ಲ ಎಂದು ಪಂಡೋರಾ ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ. 2007ರಿಂದ 2010ರ ವೇಳೆಗೆ ಸ್ಥಾಪಿಸಲಾದ ಈ ಕಂಪನಿಗಳಲ್ಲಿ ಅನಿಲ್‌ 1.3 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ಗೆ ವಂಚಿಸಿದ ನೀರವ್‌ ಮೋದಿಯ ಸಹೋದರಿ ಪೂರ್ವಿ ಮೋದಿ, ದೇಶ ಬಿಟ್ಟು ಪರಾರಿಯಾಗುವ ಮುನ್ನ ಒಂದು ಟ್ರಸ್ಟ್‌ ರಚಿಸಿದ್ದಳು ಎಂದೂ ಹೇಳಲಾಗಿದೆ.

ತೆಂಡೂಲ್ಕರ್‌ ಗೌಪ್ಯ ಕಂಪೆನಿ: ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌,  ಪತ್ನಿ ಅಂಜಲಿ ತೆಂಡೂಲ್ಕರ್‌, ಮಾವ ಆನಂದ್‌ ಮೆಹ್ರಾ ಹೆಸರಿನಲ್ಲಿ ಬ್ರಿಟಿಷ್‌ ವರ್ಜಿನ್‌ ದ್ವೀಪಗಳಲ್ಲಿ 2016ರಲ್ಲಿ ಸಾಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಎಂಬ ಕಂಪೆನಿ ಶುರು ಮಾಡಿದ್ದರು. ನಂತರ ಅದನ್ನು ದಿವಾಳಿ ಎಂದು ಘೋಷಿಸಿಕೊಳ್ಳಲಾಯಿತು. ಫೆಬ್ರವರಿಯಲ್ಲಿ ನಿಧನರಾಗಿದ್ದ ಕೇಂದ್ರದ ಮಾಜಿ ಸಚಿವ, ಗಾಂಧಿ ಕುಟುಂಬದ ನಿಕಟವರ್ತಿ ಕ್ಯಾ| ಸತೀಶ್‌ ಶರ್ಮಾ ಮತ್ತು ಅವರ ಕುಟುಂಬದ ಹತ್ತು ಮಂದಿ ಸದಸ್ಯರು ಜಾನೆ ಝೆಗರ್ಸ್‌ ಟ್ರಸ್ಟ್‌ ರಚಿಸಿದ್ದರು ಎಂದು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *