ಬೆಳಗಾವಿ: ಸುವರ್ಣಸೌಧದ ಬಳಿ ನಡೆದಿದ್ದ ಪಂಚಮಸಾಲಿ ಹೋರಾಟದ ವೇಳ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಇಂದು ರಾಜ್ಯದ ಎಲ್ಲಾ ಕಡೆ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ, ಚಿಕ್ಕೋಡಿ, ಧಾರವಾಡ, ವಿಜಯಪುರ ಸೇರಿದಂತೆ ಹಲವೆಡೆ ಇಂದು ಪ್ರತಿಭಟನೆ ನಡೆಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಲಾಯಿತು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಈ ವೇಳೆ ಆಕ್ರೋಶಗೊಂಡ ಹೋರಾಟಗಾರರು ಸಿಎಂ ಸಿದ್ದರಾಮಯ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕೃತಿಗೆ ಚಪ್ಪಲಿ ಹಾರ ಘೋಷಣೆ ಕೂಗಿದರು.
ಪಂಚಮಸಾಲಿ ಮೀಸಲಾತಿ ಬೇಡಿಕೆಯೇ ಸಂವಿಧಾನ ವಿರೋಧಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಸವ ಜಯ ಮೃತ್ಯುಂಜಯ ಸ್ವಾಮಿಜಿ ಕಿಡಿಕಾರಿದ್ರು. ಅತ್ತ ಧಾರವಾಡದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಸಿಎಂ ಹೇಳಿಕೆಯೇ ಸಂವಿಧಾನ ವಿರೋಧಿಯಾಗಿದೆ ಅಂತ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಪಂಚಮಸಾಲಿಗೆ ಯಾವುದೇ ಕಾರಣಕ್ಕೂ ಮೀಸಲಾತಿ ನೀಡಬೇಡಿ: ಸಿಎಂ ಗೆ ಮನವಿ
ನಮ್ಮ ಬೇಡಿಕೆ ಸಂವಿಧಾನ ಬದ್ಧವಾಗಿದೆ. ಆದರೂ ಸಿಎಂ ಹೀಗೆ ಹೇಳಿದ್ದಾರೆ. ಸಿಎಂ ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಹೋರಾಟದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ನಾವು ಸಹಿಸುವುದಿಲ್ಲ, ಮೀಸಲಾತಿ ಪಡೆದೇ ತೀರುತ್ತೇವೆ ಅಂತ ಸವಾಲು ಹಾಕಿದ್ದಾರೆ.
ಈಗ ಇವರು ಕೊಡದಿದ್ದರೇನಂತೆ? ಮುಂದೆ ಇನ್ನೊಬ್ಬ ಸಿಎಂ ಬರ್ತಾರೆ. ಅವರಿಂದಾನೇ ನಾವು ಮೀಸಲಾತಿ ಪಡೆಯುತ್ತೇವೆ ಅಂತ ಸ್ವಾಮೀಜಿ ಹೇಳಿದ್ದಾರೆ. ಸಂವಿಧಾನ ಬದ್ಧವಾಗಿ ನಮ್ಮ ಬೇಡಿಕೆ ಇದೆ. ಅಂಬೇಡ್ಕರ ಇವರ ಸ್ವತ್ತಲ್ಲ, ಅಂಬೇಡ್ಕರ್ ನಮಗೂ ಅನ್ವಯ ಆಗ್ತಾರೆ. ನಮ್ಮ ಹೋರಾಟ ನಿಲ್ಲದು ಅಂತ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಹೇಳಿಕೆಗೆ ಅತ್ತ ಧಾರವಾಡದಲ್ಲೂ ಆಕ್ರೋಶ ವ್ಯಕ್ತವಾಯಿತು. ಸಿಎಂ ಹೇಳಿಕೆ ಖಂಡಿಸಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಗರದ ಜುಬಿಲಿ ಸರ್ಕಲ್ ಬಂದ್ ಮಾಡಿ, ಹೋರಾಟಗಾರರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವಿಜಯಪುರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಿತು. ಚಡಚಣ, ಇಂಡಿ, ಮುದ್ದೇಬಿಹಾಳ, ಸಿಂದಗಿ ಪಟ್ಟಣ ಸೇರಿದಂತೆ ಹಲವೆಡೆ ಪಂಚಮಸಾಲಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ರು. ಚಡಚಣ, ಇಂಡಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು. ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ಅಮಾನತ್ತು ಮಾಡಿ, ಪಂಚಮಸಾಲಿ ಜಗದ್ಗುರುಗಳ ಬಳಿ ಸಿಎಂ ಕ್ಷಮೆ ಕೇಳುವಂತೆ ಆಗ್ರಹಿಸಲಾಯಿತು.
ಪ್ರತಿಭಟನಾಕಾರರು ತಾಳಿಕೋಟೆಯಿಂದ ಹೈದ್ರಾಬಾದ್‌ಗೆ ತೆರಳುತ್ತಿದ್ದ ಬಸ್ ಪಡೆದು ಪ್ರತಿಭಟಿಸಿದ್ರು. ರಸ್ತೆ ತಡೆ ವೇಳೆ ಬಸ್ ಚಾಲಕ ಹಾಗೂ ಪಂಚಮಸಾಲಿ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ಬಸ್ ತೆರಳಲು ದಾರಿ ಬಿಡಿ ಎಂದ ಚಾಲಕ ಹೇಳಿದ್ರೆ, ದಾರಿ ಬಿಡುವುದಿಲ್ಲ ಎಂದು ಪ್ರತಿಭಟನಾಕಾರ ಪಟ್ಟು ಹಿಡಿದ ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಬಸ್ ಮಾರ್ಗ ಬದಲಾವಣೆ ಮಾಡಿದರು.
ಇದನ್ನೂ ನೋಡಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡ: ಹಿಂದುಳಿದ ಜಾತಿಗಳ ಒಕ್ಕೂಟ ಮನವಿ Janashakthi Media