ಮಡಿಕೇರಿ: ರಾಜ್ಯದ ಇತರೆ ಜಿಲ್ಲೆಗಳಲ್ಲಿ ರೈತರ ಹೊಲಗಳ ಪಂಪ್ಸೆಟ್ಗಳಿಗೆ 10 ಎಚ್ಪಿವರೆಗಿನ ಉಚಿತ ವಿದ್ಯುತ್ ನೀಡುತ್ತಿರುವಂತೆ ಕೊಡಗಿನಲ್ಲಿಯೂ ಉಚಿತ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ನೂರಾರು ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದು ರಾಜ್ಯ ಸರ್ಕಾರ ಮತ್ತು ಚೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿ ಮೈಸೂರು ಮತ್ತು ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ್ದರಿಂದ ನೂರಾರು ವಾಹನಗಳ ಸವಾರರು ಪರದಾಡಬೇಕಾಯಿತು.
ಈ ಸಂದರ್ಭ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಇತರೆ ಜಿಲ್ಲೆಗಳಲ್ಲಿ 10 ಎಚ್ಪಿ ವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಕೊಡಗಿನ ರೈತರಿಗೆ ಮೋಸ ಮಾಡಲಾಗುತ್ತಿದೆ. ಕಾಫಿ, ಏಲಕ್ಕಿ ಭತ್ತ ಅಂತ ಯಾವುದೇ ಭೇದ ಭಾವವಿಲ್ಲದೆ ಎಲ್ಲಾ ರೈತರಿಗೂ ಉಚಿತ ವಿದ್ಯುತ್ ನೀಡಬೇಕು. 10 ಎಚ್ಪಿ ಮೇಲ್ಪಟ್ಟ ಪಂಪ್ಸೆಟ್ಗಳ ಬಾಕಿ ಮೇಲೆ ಹಾಕಿರುವ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಟ್ರಾನ್ಸ್ಫಾರ್ಮ್ಗಳನ್ನು ದುರಸ್ಥಿಗೊಳಿಸಬೇಕು. ಸರಿಯಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ನಮ್ಮ ಪ್ರತಿಭಟನೆಯನ್ನು ಗಮನಿಸಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ರಾಜ್ಯ ರಾಜಧಾನಿ ಬೆಂಗಳೂರು ನಗರದ ವಿಧಾನಸೌಧದ ಮುಂಭಾಗಕ್ಕೆ ವಿಸ್ತರಿಸಲಾಗುವುದು ಎಂದರು.
ಜನರಲ್ ತಿಮ್ಮಯ್ಯ ವೃತ್ತದಿಂದ ಬಳಿಕ ಕೆಇಬಿ ಕಚೇರಿವರೆಗೆ ಮೆರವಣಿಗೆ ಸಾಗಿದ ರೈತರು ಕೆಲ ಸಮಯ ಅಲ್ಲಿಯೂ ಪ್ರತಿಭಟನೆ ನಡೆಸಿ ಚೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.