ಬೆಂಗಳೂರು: ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆಗೆ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ವಿಚಾರ ಕೈಬಿಟ್ಟಿದೆ.
ಕಸಾಪ ಮಹಾಕವಿ ಪಂಪ ರಸ್ತೆ ಹೆಸರು ಬದಲಾಯಿಸಿ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಅಂತಾ ಮರುನಾಮಕರಣಕ್ಕೆ ಮುಂದಾಗಿತ್ತು. ಈ ವಿಚಾರ ಕೇಳಿ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವಿರೋಧ ಕೇಳಿ ಬಂದಿತ್ತು. ಸಾಹಿತಿಗಳು, ಪ್ರಗತಿಪರ ಸಂಘಟನೆಗಳು, ಜೈನ ಸಮುದಾಯದಿಂದ ತೀವ್ರ ವಿರೋಧ ಬೆನ್ನಲೆ ಮಹಾಕವಿ ಪಂಪನ ಹೆಸರು ಬದಲಾಯಿಸುವ ಚಿಂತನೆಯನ್ನು ಕಸಾಪ ಕೈಬಿಟ್ಟಿದೆ.
ಇದನ್ನೂ ಓದಿ : “ಪಂಪ ಮಹಾಕವಿ ರಸ್ತೆ” ಹೆಸರು ಬದಲಿಸಲು ಮುಂದಾದ ಕಸಾಪ ! ಜೋಷಿ ನಡೆಗೆ ಸಾಹಿತಿಗಳ ವಿರೋಧ
ಈ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಹೆಸರಿಡುವ ಬಗ್ಗೆ ಸಲಹೆ ಬಂದಿತ್ತು. ನಾವು ಯಾವುದೇ ಕಾರಣಕ್ಕೆ ಪಂಪ ಮಹಾಕವಿ ರಸ್ತೆ ಹೆಸರು ಬದಲಾಯಿಸಲ್ಲ. ಮಹಾಕವಿ ಪಂಪನ ಹೆಸರೇ ಇರುತ್ತೆ ಎಂದು ತಿಳಿಸಿದರು.
ನಾವು ನಾಡೋಜ ಪಂಪ ಮಹಾಕವಿ ರಸ್ತೆ ಅಂತಾನೇ ಮುಂದುವರೆಸುತ್ತೇವೆ. ಕನ್ನಡಕ್ಕೆ ಜೈನ ಕವಿ ಪಂಪನ ಕೊಡುಗೆ ಅಪಾರವಾಗಿದೆ. ಮಹಾಕವಿ ಪಂಪ ರಸ್ತೆಯ ಹೆಸರು ಬದಲಾವಣೆ ಇಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.