“ಪಂಪ ಮಹಾಕವಿ ರಸ್ತೆ” ಹೆಸರು ಬದಲಿಸಲು ಮುಂದಾದ ಕಸಾಪ ! ಜೋಷಿ ನಡೆಗೆ ಸಾಹಿತಿಗಳ ವಿರೋಧ

ಬೆಂಗಳೂರು : ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ನ ಮುಂದಿರುವ ಪಂಪಾ ಮಹಾಕವಿ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸಲ ಕನ್ನಡ ಸಾಹಿತ್ಯ ಪರಿಷತ್‌ ಮುಂದಾಗಿದೆ. ಈ ಕುರಿತು ಬಿಬಿಎಂಪಿಗೆ ಕಸಾಪ ಪ್ರಸ್ತಾಪವನ್ನು ಸಲ್ಲಿಸಿದೆ. ಕಸಾಪ ನಡೆಗೆ ಕನ್ನಡ ಬೌದ್ಧಿಕ ವಲಯ ಆಕ್ರೋಶ ವ್ಯಕ್ತಪಡಿಸಿದ್ದು, ‘ಹೆಸರು ಬದಲಿಸುವುದು ಸರಿಯಾದ ನಿರ್ಧಾರವಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಾಮರಾಜಪೇಟೆಯ ಮಿಂಟೊ ಆಸ್ಪತ್ರೆ ಮತ್ತು ಮಕ್ಕಳ ಕೂಟ ಉದ್ಯಾನದ ನಡುವಣ ರಸ್ತೆಗೆ ‘ಸಾಹಿತ್ಯ ಪರಿಷತ್ ರಸ್ತೆ’ ಎಂದು ಹೊಸ ನಾಮಕರಣ ಮಾಡಬೇಕು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಜೋಷಿ ತಿಳಿಸಿದ್ದಾರೆ.

‘ಹೆಸರು ಬದಲಿಸುವ ಪ್ರಸ್ತಾವ ಕುರಿತು ಚರ್ಚಿಸಲು ಈ ರಸ್ತೆಯಲ್ಲಿರುವ ಇತರ ಸಂಘ ಸಂಸ್ಥೆಗಳು, ಕಚೇರಿಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿದ್ದೇವೆ. ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿವಿ, ಕನ್ನಡ ದಿನಪತ್ರಿಕೆ, ಕೆಲ ಬ್ಯಾಂಕ್​ಗಳು, ಉದ್ಯಾನವನ, ಮಿಂಟೊ ಕಣ್ಣಿನ ಅಸ್ಪತ್ರೆ ಸೇರಿದಂತೆ ಎಲ್ಲರ ಗಮನಕ್ಕೆ ತಂದಿದ್ದೇವೆ’ ಎಂದು ಮಹೇಶ್ ಜೋಶಿ ಹೇಳಿದ್ದಾರೆ.

ಹೆಸರು ಬದಲಾವಣೆಗೆ ಆಕ್ಷೇಪ : ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸುವ ಪ್ರಸ್ತಾವಕ್ಕೆ ಹಲವು ಸಾಹಿತಿಗಳು, ಜನಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

‘ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸ ನೂರಾರಿವೆ. ಕನ್ನಡದ ಮಕ್ಕಳಿಗೆ ಪಠ್ಯಪುಸ್ತಕ ರೂಪಿಸುವುದರಿಂದ ಹಿಡಿದು, ಇವತ್ತು ಸೊಗಸಾಗಿ ಬರೆಯುವ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ತನಕ ಸಾಹಿತ್ಯಕ್ಕೆ ಸಂಬಂಧಿಸಿದ ಎಷ್ಟೊಂದು ಕೆಲಸಗಳನ್ನು ಮಾಡಬಹುದು. ಕಮ್ಮಟಗಳನ್ನು ಏರ್ಪಡಿಸಬಹುದು, ಮುಖ್ಯ ಚರ್ಚೆಗಳು ಎದ್ದಾಗ ಆ ಕುರಿತು ಸಂಕಿರಣ ಇಟ್ಟುಕೊಳ್ಳಬಹುದು. ಅದು ಬಿಟ್ಟು ರಸ್ತೆ ನಿರ್ಮಾಣ, ಹೆಸರು ಬದಲಾವಣೆ ಎಂದು ಯೋಚಿಸುವುದು ಸಾಹಿತ್ಯ ಪರಿಷತ್ತಿನ ಕೆಲಸವಲ್ಲ ಎಂದು ಕಸಾಪದ ಕಿವಿ ಹಿಂಡುತ್ತಿದ್ದಾರೆ.

ಈ ಕುರಿತು ಜೋಗಿ ಗಿರೀಶ್ ರಾವ್ ಹತ್ವಾರ್ ತಮ್ಮ ಫೆಸ್ಬುಕ್ ಪೋಸ್ಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಜಿ.ಎಸ್. ಶಿವರುದ್ರಪ್ಪನವರಂಥ ಹಿರಿಯರು, ಹಾಮಾ ನಾಯಕರಂಥ ನಿಸ್ಪೃಹರು, ಜಿ. ನಾರಾಯಣ, ಜಿ. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ ಮುಂತಾದವರು ಮಾಡಿರುವ ಕೆಲಸವನ್ನು ನೋಡಿಯಾದರೂ ಸಾಹಿತ್ಯದ ಕೆಲಸ ಏನೆಂಬುದನ್ನು ತಿಳಿದುಕೊಳ್ಳಬಹುದು. ಅದು ಬಿಟ್ಟು ರಸ್ತೆ ಹೆಸರು ಬದಲಾಯಿಸಲು ಹೊರಡುವುದು ಶುದ್ಧ ಮೂರ್ಖತನ! ಅದಕ್ಕೂ ಮೊದಲು ದಾರಿ ತಪ್ಪಿರುವ ಸಾಹಿತ್ಯ ಪರಿಷತ್ತು, ಸರಿದಾರಿಯಲ್ಲಿ ಸಾಗಲಿ’ ಎಂದು ಜೋಗಿ ತಮ್ಮ ಫೇಸ್​ಬುಕ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ದೇಸೀ ಭಾಷೆಗಳಲ್ಲಿ ಮಹಾಭಾರತವನ್ನು ಸಮಗ್ರವಾಗಿ ಮೊದಲು ಬರೆದವನು ಪಂಪ. ಉಳಿದೆಲ್ಲಾ ಭಾಷೆಗಳಲ್ಲಿ ಆ ಮೇಲೆ ಬಂತು.‌ ಪಂಪನು ‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯಂ ಈಸಿದ’ ಮೊದಲಿಗ.
ಈ ಹೆಮ್ಮೆ ಕನ್ನಡಿಗರಿರಬೇಕು. ಅವನ ಹೆಸರು ರಸ್ತೆಯಲ್ಲೂ ಇರಲಿ, ಕನ್ನಡಿಗರ ಹೃದಯದಲ್ಲೂ ಇರಲಿ ಎಂದು ಚಿಂತಕ ಪುರುಷೋತ್ತಮ ಬಿಳಿಮಲೆ ಫೆಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಏನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೆ, ರಸ್ತೆ ಹೆಸರುಗಳನ್ನು ಬದಲಾಯಿಸುವ ಚಾಳಿ ಬಿಜೆಪಿಯಿಂದ ಇಲ್ಲಿಗೂ ತಂದಿರೇನು? ಕನ್ನಡದ ಕೆಲಸ ಅಂದರೇನು ಅಂತ ಸಾಮಾನ್ಯ ಪ್ರಜ್ಞೆಯಾದರೂ ಬೇಡವೆ? ಯಾವ ಕಾರಣಕ್ಕೂ ಪಂಪ ಮಹಾಕವಿ ಹೆಸರು ತೆಗೆಯಬಾರದು ಎಂದು ಸಾಹಿತಿ ಕೆ.ನೀಲಾ ಆಕ್ರೋಶ ಹೊರಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *