ಕಲಬುರಗಿ : ವಯಸ್ಸಿನ ಕುರಿತು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯೆ ಪ್ರಿಯಾಂಕಾ ಅಂಬರೀಶ ಬೋಯಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಈಚೆಗೆ ಜರುಗಿದ್ದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 24ರಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಸ್ಪರ್ಧೆ ಮಾಡಿ ವಿಜೇತರಾಗಿದ್ದರು. ನಾಮಪತ್ರ ಸಲ್ಲಿಸುವಾಗ ಚುನಾವಣೆ ಆಯೋಗಕ್ಕೆ ತಮಗೆ 21 ವರ್ಷ ವಯಸ್ಸಾಗಿದೆ ಎಂದು ತಿಳಿಸಿದ್ದರು. ಆಗ ಪ್ರತಿಸ್ಪರ್ಧಿ ತಕರಾರು ಮಾಡಿದ್ದರು, ಸೂಕ್ತ ದಾಖಲೆ ಇರಲಿಲ್ಲ. ಹೀಗಾಗಿ ನಾಮಪತ್ರವನ್ನು ಚುನಾವಣಾಧಿಕಾರಿಗಳು ಅಂಗೀಕರಿಸಿದ್ದರು.
ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಕೆಲವು ಮತಗಳಲ್ಲಿ ಸೋಲನುಭವಿಸಿದ್ದ ಸೈಯಿದಾ ನೂರ್ ಫಾತಿಮಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವೊಂದು ದಾಖಲೆಗಳನ್ನು ಸಂಗ್ರಹಿಸಿಕೊಂಡು, ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಿಯಾಂಕಾ ಅಂಬರೀಶ ಅವರಿಗೆ 21 ವರ್ಷ ಪೂರ್ಣಗೊಂಡಿಲ್ಲ ಹೀಗಾಗಿ ಅವರ ಸದಸ್ಯತ್ವ ಅನರ್ಹಗೊಳಿಸಿ, ಕೆಎಂಸಿ ಕಾಯ್ದೆಯಂತೆ ತಮ್ಮನ್ನು ಪಾಲಿಕೆ ಸದಸ್ಯರಾಗಿ ಆದೇಶಿಸಬೇಕು ಎಂದು ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಾಕ್ಷಿ ಹೇಳಿಕೆಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ, ಚುನಾವಣಾ ಆಯೋಗಕ್ಕೆ ವಯಸ್ಸಿನ ಕುರಿತು ಸುಳ್ಳು ಮಾಹಿತಿ ನೀಡಿರುವುದು ಸಾಬೀತಾಗಿದ್ದರಿಂದ ಅವರ ಸದಸ್ಯತ್ವ ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಕೆಎಂಸಿ ಸೆಕ್ಷನ್ 26(1) (ಜೆ) ಪ್ರಕಾರ ಅವರ ನಂತರದಲ್ಲಿ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದ ಸೈಯಿದಾ ನೂರ್ ಫಾತಿಮಾ ಅವರನ್ನು ಪಾಲಿಕೆ ಸದಸ್ಯೆ ಎಂದು ಪರಿಗಣಿಸುವಂತೆ ಆದೇಶಿಸಲಾಗಿದೆ.