ವಾಷಿಂಗ್ಟನ್ ಡಿಸಿ: ಇಸ್ರೇಲ್ ನಡೆಸುತ್ತಿರುವ ಪ್ಯಾಲೆಸ್ತೀನಿಯನ್ ಹತ್ಯಾಕಾಂಡವನ್ನು ವಿರೋಧಿಸಿ ”ಜಿವಿಶ್ ವಾಯ್ಸ್ ಫಾರ್ ಪೀಸ್” ಎಂಬ ಯಹೂದಿ ಸಂಘಟನೆ ಅಮೆರಿಕದ ಸಂಸತ್ತಿನ ಬಳಿ ಪ್ರತಿಭಟನೆ ನಡೆಸಿದ್ದು, ಸುಮಾರು 500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರತಿಭಟನಾಕಾರರು, “ನಮ್ಮ ಹೆಸರಿನಲ್ಲಿ ಹತ್ಯಾಕಾಂಡ ನಡೆಸದಿರಿ” ಎಂದು ಅರ್ಥ ಬರುವ ಬರಹಗಳನ್ನು ಹೊಂದಿರುವ ಟಿ ಶರ್ಟ್‌ಗಳನ್ನು ಧರಿಸಿದ್ದರು.
ಸಂಸತ್ತಿನ ಕ್ಯಾನನ್ ಕಟ್ಟಡದ ಒಳಗೆ ನೆಲದ ಮೇಲೆ ಕುಳಿತ ಯಹೂದಿ ಪ್ರತಿಭಟನಾಕಾರರು, “ಕದನ ವಿರಾಮ” ಎಂದು ಬರೆದಿದ್ದ ದೊಡ್ಡ ಬ್ಯಾನರ್ ಅನ್ನು ಪ್ರದರ್ಶಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಅಮೆರಿಕಾದ ರಾಜಧಾನಿಯ ಬೀದಿಗಳಲ್ಲಿ ಸಂಘಟನೆಯು ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರನ್ನು ಸೇರಿಸಿ ಮೆರವಣಿಗೆ ನಡೆಸಿದೆ ಎಂದು ಜಿವಿಶ್ ವಾಯ್ಸ್ ಫಾರ್ ಪೀಸ್ ಸಂಘಟನೆ ಹೇಳಿದೆ.
ಇದನ್ನೂ ಓದಿ: ಇಸ್ರೇಲ್‌ನಿಂದ ಆಸ್ಪತ್ರೆಗೆ ಬಾಂಬ್ | 500 ಕ್ಕೂ ಹೆಚ್ಚು ಜನರ ಕಗ್ಗೊಲೆ; ವಿಶ್ವದಾದ್ಯಂತ ಪ್ರತಿಭಟನೆ
“ಇಸ್ರೇಲ್ ಪ್ಯಾಲೆಸ್ತೀನಿಯನ್ನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಲ್ಲಿ ಅಮೆರಿಕದ ಕೈವಾಡವನ್ನು ವಿರೋಧಿಸಿ, ಸಾಮೂಹಿಕ ಗಮನವನ್ನು ಸೆಳೆಯಲು ನಾವು ಸದನವನ್ನು ಮುಚ್ಚಿದ್ದೇವೆ” ಎಂದು ಸಂಘಟನೆಯು ಟ್ವಿಟರ್‌ನಲ್ಲಿ ಹೇಳಿಕೊಂಡಿದೆ. ಆದರೆ ಬುಧವಾರ ಸಂಜೆ ವೇಳೆಗೆ ಪ್ರತಿಭಟನಾಕಾರರನ್ನು ಕಟ್ಟಡದಿಂದ ತೆರವುಗೊಳಿಸಿದ್ದೇವೆ ಎಂದು ಅಮೆರಿಕದ ಪೊಲೀಸರು ತಿಳಿಸಿದ್ದು, ಪ್ರತಿಭಟನಾಕಾರರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
Today, 500 Jews were arrested and 10k took to the streets to support and to demand a ceasefire and an end to Palestinian genocide.
We shut down congress to draw mass attention to the U.S. complicity in Israel's ongoing oppression of Palestinians. But our work isn't done. 🧵 pic.twitter.com/1aQf15Xx0D
— Jewish Voice for Peace (@jvplive) October 18, 2023
ಇದನ್ನೂ ಓದಿ: ಆಸ್ಪತ್ರೆಯ ಮೇಲೆ ಬಾಂಬ್ ಸುರಿಸಿ ಜನರ ಕಗ್ಗೊಲೆ ಮಾಡಿದ ಇಸ್ರೇಲ್ – ಪ್ರಧಾನಿ ಮೋದಿ ಖಂಡನೆ
“ರ‍್ಯಾಲಿಯಲ್ಲಿ ಭಾಗವಹಿಸುವುದರ ಮೂಲಕ ಹಿಟ್ಲರ್‌ನ ನಾಜಿ ಹತ್ಯಾಕಾಂಡದ ಸಂತ್ರಸ್ತರಾದ ನಮ್ಮ ಪೂರ್ವಜರ ಕುಟುಂಬದ ಇತಿಹಾಸವನ್ನು ಗೌರವಿಸುತ್ತಿದ್ದೇನೆ. ಯಹೂದಿಗಳು ಪ್ರಪಂಚದಾದ್ಯಂತದ ತುಳಿತಕ್ಕೊಳಗಾದ ಜನರ ಪರವಾಗಿ ನಿಲ್ಲುತ್ತಾರೆ. ಗಾಜಾದಲ್ಲಿ ಕದನ ವಿರಾಮಕ್ಕಾಗಿ ಮತ್ತು ಶಾಂತಿಗಾಗಿ ಹೋರಾಡುವುದಕ್ಕಿಂತ ಉತ್ತಮವಾದ ಮಾರ್ಗ ಬೇರೆ ನನಗೆ ಕಾಣುತ್ತಿಲ್ಲ” ಎಂದು ಯಹೂದಿ ಪ್ರತಿಭಟನಾಕಾರರೊಬ್ಬರು ಅಲ್ ಜಜೀರಾಗೆ ಹೇಳಿದ್ದಾರೆ.
“ಅಂತರಾಷ್ಟ್ರೀಯ ಸಮುದಾಯದಿಂದ ಸಾಕಷ್ಟು ಸಾಮೂಹಿಕ ಧ್ವನಿ ಎದ್ದಾಗ ಮಾತ್ರ ಬಾಂಬ್‌ಗಳು ನಿಲ್ಲುತ್ತವೆ ಎಂಬುದು ಪ್ಯಾಲೆಸ್ತೀನಿಯನ್ನರ ವಿರುದ್ಧ ಹಿಂದಿನ ಇಸ್ರೇಲಿ ಪ್ರಭುತ್ವದ ದೌರ್ಜನ್ಯಗಳಿಂದ ನಮಗೆ ತಿಳಿದಿರುವ ಸಂಗತಿಯಾಗಿದೆ. ಆದ್ದರಿಂದ ಅಂತಹ ಧ್ವನಿಯನ್ನು ಹುಟ್ಟುಹಾಕುವ ಕರ್ತವ್ಯ ನಮ್ಮ ಮೇಲಿದೆ. ಇದನ್ನುನಾವು ಸಾಧ್ಯವಾದಷ್ಟು ವೇಗವಾಗಿ ಮಾಡಬೇಕಿದೆ” ಎಂದು ಜಿವಿಶ್ ವಾಯ್ಸ್ ಫಾರ್ ಪೀಸ್ ಸಂಘಟನೆಯ ಎಲಿಜಾ ಕ್ಲೈನ್ ಹೇಳಿದ್ದಾರೆ.
ಅಮೆರಿಕ ಇಸ್ರೇಲ್‌ನ ದೃಢವಾದ ಜಾಗತಿಕ ಮಿತ್ರರಾಷ್ಟ್ರವಾಗಿದೆ. ಇಸ್ರೇಲ್‌ಗಾಗಿ ಅಮೆರಿಕ ಪ್ರತಿ ವರ್ಷ ಶತಕೋಟಿ ಡಾಲರ್‌ಗಳಷ್ಟು ಮಿಲಿಟರಿ ನೆರವು ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡುತ್ತದೆ. ಬುಧವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್‌ಗೆ ಭೇಟಿ ನೀಡಿದ್ದು, ಈ ವೇಳೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ಹಮಾಸ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಇಸ್ರೇಲ್‌ನ ಬೆನ್ನ ಹಿಂದಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್ – ಹಮಾಸ್ ಸಂಘರ್ಷ ಕೊನೆಗೊಳಿಸಿ, ನರಮೇಧ ನಿಲ್ಲಿಸಿ – ಸಿಪಿಐಎಂ ಒತ್ತಾಯ
ಪ್ಯಾಲೆಸ್ತೀನ್ ಪ್ರತಿರೋಧ ಪಡೆಯಾದ ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ಧ ನಡೆಸಿದ ದಾಳಿಯ ನಂತರ ಇಸ್ರೇಲ್ ಗಾಜಾ ಪಟ್ಟಿಯನ್ನು “ಸಂಪೂರ್ಣ ಮುತ್ತಿಗೆ” ಮಾಡಿದ್ದು ಪ್ರದೇಶವನ್ನು ನಿರ್ಬಂಧಿಸಿದೆ. ಅಲ್ಲಿ ವಾಸಿಸುವ 23 ಲಕ್ಷ ನಿವಾಸಿಗಳಿಗೆ ಆಹಾರ, ನೀರು, ವಿದ್ಯುತ್ ಮತ್ತು ವೈದ್ಯಕೀಯ ಸರಬರಾಜುಗಳ ಪ್ರವೇಶವನ್ನು ಕೂಡಾ ಇಸ್ರೇಲ್ ನಿರ್ಬಂಧಿಸಿದ್ದು, ವಾಯು ದಾಳಿ ಮುಂದುವರೆಸಿ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ಹಮಾಸ್ ದಾಳಿಯಲ್ಲಿ ಕನಿಷ್ಠ 1,400 ನಾಗರಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿದ್ದು, 199 ಜನರನ್ನು ಅಪಹರಿಸಲಾಗಿದೆ ಎಂದು ಅದು ತಿಳಿಸಿದೆ.
ಹಮಾಸ್ ದಾಳಿಯ ನಂತರ, ಇಸ್ರೇಲ್ ವಿಧ್ವಂಸಕ ಕಾರ್ಯಾಚರಣೆಗೆ ಇಳಿದಿದ್ದು, ನಿರಂತರ ವಾಯು ದಾಳಿ ನಡೆಸಿ ಗಾಜಾವನ್ನು ನೆಲಸಮಗೊಳಿಸಿದೆ. ಬಾಂಬ್ ದಾಳಿಯ ಮೂಲಕ ಇಸ್ರೇಲ್ ಈ ವರೆಗೆ 3,400 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದು, ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮಕ್ಕಳು ಎಂದು ಪ್ಯಾಲೇಸ್ತೀನಿಯನ್ ಅಧಿಕಾರಿಗಳು ಹೇಳಿದ್ದಾರೆ.
ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಮುತ್ತಿಗೆ ಯುದ್ಧಾಪರಾಧವಾಗಿದ್ದು, ಸಾಮೂಹಿಕ ಶಿಕ್ಷೆಯ ಒಂದು ರೂಪವೆಂದು ಟೀಕಿಸಲಾಗಿದೆ. ಇಸ್ರೇಲ್‌ನ ಈ ನಡೆಯನ್ನು ವಿರೋಧಿಸಿ ಪ್ರಪಂಚದಾದ್ಯಂತ ಆಕ್ರೋಶ ಹುಟ್ಟು ಹಾಕಿದ್ದು, ತೀವ್ರ ಪ್ರತಿಭಟನೆ ನಡೆಯುತ್ತಿದೆ.
ವಿಡಿಯೊ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media