ವಸಂತರಾಜ ಎನ್.ಕೆ.
‘ಮೂರು ಅನವಶ್ಯಕ ಯುದ್ಧಗಳನ್ನು ಹೂಡಿದ್ದೇವೆ, ನಮ್ಮ ತಪ್ಪು ಅರಿವಾಗಿದೆ. ಶಾಂತಿ ಮಾತುಕತೆಗೆ ನಾವು ತಯಾರು’ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದು ಭಾರತದಲ್ಲಿ ಸುದ್ದಿಯಾಯಿತು. ಪಾಕಿಸ್ತಾನದ ಇತ್ತೀಚಿನ ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲವರು ಇದಕ್ಕೆ ಹಿಗ್ಗಿದರೆ, ಕೆಲವರು ‘ಯಾವುದೇ ಮಾತುಕತೆಗಳಿಗೆ ಹೋಗಬಾರದು’ ಎಂದರು. ಪಾಕಿಸ್ತಾನದ ನೆರವಿಗೆ ಒಂದು ಸಮ್ಮೇಳನ ಕರೆಯಲಾಯಿತು. ಆದರೆ ಈ ಸಮ್ಮೇಳನ ಘೋಷಿಸಿರುವ ‘ನೆರವು’ (ನಿಜವಾಗಿಯೂ ಸಾಲ) ಹವಾಮಾನ ತಾಳಿಕೆಯ ಪಾಕಿಸ್ತಾನ’ದ ಪರಿಹಾರ, ಪುನರ್ವಸತಿ ಮತ್ತು ಪುನರ್ರಚನೆಯ ಹೆಸರಿನಲ್ಲಿ ಪಾಕಿಸ್ತಾನವನ್ನು ಇನ್ನಷ್ಟು ಸಾಲದ ಕೂಪಕ್ಕೆ ತಳ್ಳುವುದು. ಇದು ಪಾಕಿಸ್ತಾನದ ವಿಶೇಷ ಪ್ರಕರಣವಲ್ಲ. ವಿಪರೀತ ಸಾಲದ ಹೊರೆ ಎದುರಿಸುತ್ತಿರುವ 54 ದೇಶಗಳಲ್ಲಿ 28 ದೇಶಗಳು ಜಗತ್ತಿನ ಅತಿ ಹೆಚ್ಚು ‘ಹವಾಮಾನ ಬದಲಾವಣೆಗೆ ತುತ್ತಾಗಬಹುದಾದ’ 50 ದೇಶಗಳ ಪಟ್ಟಿಯಲ್ಲಿವೆ.
ಪಾಕಿಸ್ತಾನವು ಹಲವು ಆಯಾಮಗಳ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಡೆ ಹವಾಮಾನ ಬದಲಾವಣೆಯ ಪರಿಣಾಮವಾದ ಅಭೂತಪೂರ್ವ ನೆರೆ ಮತ್ತು ಆಹಾರ ಬೆಳೆಗಳ ನಾಶ. ಇನ್ನೊಂದು ಕಡೆ ಈಗಾಗಲೇ ಸಾಲದ ಭಾರದಿಂದ ನಲುಗುತ್ತಿದ್ದ ಮತ್ತು ನೆರೆ-ಪರಿಹಾರದ ಹೊರೆ, ಆಹಾರವಸ್ತುಗಳ ಕೊರತೆ ಮತ್ತು ಬೆಲೆಏರಿಕೆಗಳಿಂದ ಇನ್ನಷ್ಟು ದುರ್ಭರವಾದ ಆರ್ಥಿಕ ಪರಿಸ್ಥಿತಿ. ಮತ್ತೊಂದು ಕಡೆ, ಆಳುವ ಪಕ್ಷಗಳು ಮತ್ತು ವಿರೋಧ ಪಕ್ಷಗಳ ನಡುವೆ, ಭಯೋತ್ಪಾದಕರು ಹಾಗೂ ಸರಕಾರದ ನಡುವೆ ಸಂಘರ್ಷಗಳು; ನೆರೆ, ಆಹಾರ ವಸ್ತುಗಳ ಬೆಲೆಏರಿಕೆ ಮತ್ತು ಕೊರತೆಗಳಿಂದ ಜನರ ಹೆಚ್ಚುತ್ತಿರುವ ಆಕ್ರೋಶ – ಇವೆಲ್ಲವನ್ನು ಒಳಗೊಂಡ ರಾಜಕೀಯ ಬಿಕ್ಕಟ್ಟು.
ನೆರೆ ಮತ್ತು ಅದರ ಪರಿಣಾಮಗಳು
ಆರು ತಿಂಗಳ ಹಿಂದೆ ಉಂಟಾದ ಆಘಾತಕಾರಿ ನೆರೆ ದುರಂತದಲ್ಲಿ ದೇಶದ ಮೂರನೇ ಒಂದು ಭಾಗ (ಪ್ರಮುಖವಾಗಿ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ) ಭೂಮಿ ನೀರಿನಡಿ ಮುಳುಗಿತ್ತು. ಇನ್ನೂ ಹಲವು ಜಿಲ್ಲೆಗಳು ನೀರಿನಡಿಯಲ್ಲಿವೆ. 1700 ಜನ ಸತ್ತರು. ಹತ್ತು ಲಕ್ಷಕ್ಕೂ ಹೆಚ್ಚು ಜನ ಇನ್ನೂ ನಿರ್ವಸಿತರಾಗಿದ್ದಾರೆ. 40 ಲಕ್ಷಕ್ಕೂ ಹೆಚ್ಚು ಮಕ್ಕಳು ಮಲಿನವಾದ ಮತ್ತು ಸ್ಥಗಿತವಾದ ನೀರಿನ ಬಳಿ ರೋಗಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ನೆರೆ ಪರಿಹಾರ ಮತ್ತು ಪುನರ್ರಚನೆ ವೆಚ್ಚ 16.3 ಶತಕೋಟಿ ಡಾಲರುಗಳೆಂದು ಅಂದಾಜು ಮಾಡಲಾಗಿದೆ. ನೆರೆಯಿಂದಾಗಿ ಪಾಕಿಸ್ತಾನದ ಆರ್ಥಿಕತೆಗೆ 30-40 ಶತಕೋಟಿ ಡಾಲರುಗಳಷ್ಟು ನಷ್ಟವಾಗಿದೆ.
ಇದನ್ನು ಓದಿ: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: 1000ಕ್ಕೂ ಹೆಚ್ಚು ಸಾವು-ನಿರಾಶ್ರಿತಗೊಂಡ ಲಕ್ಷಾಂತರ ಮಂದಿ
ನೆರೆಯ ಪರಿಣಾಮವಾಗಿ ಹಿಟ್ಟು ಕೊರತೆ ಕಂಡುಬಂದಿದೆ. ಗೋದಿ ಹಿಟ್ಟು (ಶೇ.62) ಸಕ್ಕರೆ (ಶೇ.27), ಯಂತಹ ಆಹಾರವಸ್ತುಗಳ ಬೆಲೆಗಳು ರೇಷನ್ ಅಂಗಡಿಗಳಲ್ಲೇ ಶೇ.25ರಿಂದ 62ರಷ್ಟು ಏರಿವೆ. ನೆರೆಯ ನಂತರ ಆಹಾರವಸ್ತುಗಳ ಬೆಲೆಏರಿಕೆ ತಿಂಗಳಿಂದ ತಿಂಗಳಿಗೆ – ಅಗಸ್ಟ್ ನಲ್ಲಿ ಶೇ.30ರಿಂದ, ಡಿಸೆಂಬರ್ ನಲ್ಲಿ ಶೇ.37.9ಕ್ಕೆ – ಏರುತ್ತಾ ಹೆಚ್ಚಾಗುತ್ತಲೇ ಇದೆ.
ಸಾಲದ ಹೊರೆ ಮತ್ತು ನೆರೆಯ ಬರೆ
ನೆರೆಗಿಂತ ಮೊದಲೇ, 2023ರ ಹೊತ್ತಿಗೆ ಪಾಕಿಸ್ತಾನದ ಸಾಲದ ಹೊರೆ 22.5 ಶತಕೋಟಿ ಡಾಲರು (ಇದು ಸರಕಾರದ ಆದಾಯದ ಶೇ.47 ಭಾಗ) ಮುಟ್ಟುವುದೆಂದು ಐ.ಎಂ.ಎಫ್ ಅಂದಾಜು ಮಾಡಿತ್ತು. ಜನವರಿ-ಮಾರ್ಚ್ ತಿಂಗಳುಗಳಲ್ಲೇ ಪಾಕಿಸ್ತಾನ 8.3 ಶತಕೋಟಿ ಡಾಲರಿನಷ್ಟು ಸಾಲ ಮರುಪಾವತಿ ಮಾಡಬೇಕಾಗಿದೆ. ದೇಶದ ವಿದೇಶಿ ವಿನಿಮಯ ದಾಸ್ತಾನು 4.3 ಶತಕೋಟಿ ಡಾಲರಿಗೆ ಅಂದರೆ ಕೇವಲ 3 ವಾರಗಳ ಅತ್ಯವಶ್ಯಕ ಆಮದಿಗೆ ಮಾತ್ರ ಸಾಕಾಗುತ್ತದೆ. ಯು.ಎ.ಇ ಬ್ಯಾಂಕುಗಳ ಇತ್ತೀಚಿನ ಸಾಲ ಪಾವತಿಯ ನಂತರ ಈ ಸ್ಥಿತಿ ಬಂದಿದೆ. ಒಂದು ಡಾಲರಿಗೆ ಪಾಕಿಸ್ತಾನದ ರೂಪಾಯಿಯ ವಿನಿಮಯ ದರ ಜನವರಿ 17ರಂದು 230.9 (ಜನವರಿ 27ರಂದು) ಆಗಿತ್ತು. ಇದರ ಪರಿಣಾಮವೆಂದರೆ ನೆರೆಯಿಂದಾಗಿ 2022ರಲ್ಲಿ 3.3 ಕೋಟಿ ಹೆಚ್ಚು ಜನ ಬಡತನದ ರೇಖೆಯ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಈ ವರ್ಷ ಇನ್ನೂ 90 ಲಕ್ಷ ಜನ ಬಡತನದ ರೇಖೆಯ ಕೆಳಗೆ ತಳ್ಳಲ್ಪಡುವ ಅಪಾಯವಿದೆ.
ಇದನ್ನು ಓದಿ: ಪಾಕಿಸ್ತಾನದ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ
ಹಣದುಬ್ಬರ ಡಿಸೆಬರ್ 2022 ಹೊತ್ತಿಗೆ 24.5% ಆಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಅದು ಇನ್ನೂ ಹೆಚ್ಚು (ಶೇ. 29) ಆಗಿತ್ತು. ಹಣದುಬ್ಬರ ಶೇ.70ಕ್ಕೆ ಏರಬಹುದು. ಹೊಸ ನೆರವು, ಅನುದಾನ ಬಂದರೂ ಹಣದುಬ್ಬರ ಶೇ.35ಕ್ಕೆ ಏರಲಿದೆ ಎನ್ನಲಾಗಿದೆ. ಇದರ
ಹೊಸ ಅಂತರ್ರಾಷ್ಟ್ರೀಯ ನೆರವು, ಅನುದಾನ ಗಳಿಲ್ಲದೆ ಪಾಕಿಸ್ತಾನ ಸಾಲ ಮರುಪಾವತಿ ಮಾಡಲಾಗದೆ ಇರುವ ಪರಿಸ್ಥಿತಿ ಸದ್ಯಕ್ಕೆ ಉದ್ಭವಿಸುವ ಸಾಧ್ಯತೆಯಿದೆ.
ಪಾಕಿಸ್ತಾನ ನೆರೆ ಪರಿಹಾರಕ್ಕೆ ಅಂತರ್ರಾಷ್ಟ್ರೀಯ ನಿಧಿ
ನೆರೆ ಪರಿಹಾರ ಮತ್ತು ಪುನರ್ರಚನೆ ವೆಚ್ಚವಾದ 16.3 ಶತಕೋಟಿ ಡಾಲರುಗಳನ್ನು ಹೊಂಚಲು ಪಾಕಿಸ್ತಾನ ನೆರೆ ಪರಿಹಾರಕ್ಕೆ ಅಂತರ್ರಾಷ್ಟ್ರೀಯ ನಿಧಿಗೆ ಮೊರೆ ಹೋಗಲು ಪಾಕಿಸ್ತಾನ ಸರಕಾರ ನಿರ್ಧರಿಸಿದೆ. ಜನವರಿ 9ರಂದು ಜಿನೀವಾದಲ್ಲಿ ನಡೆದ “ಹವಾಮಾನ ಬದಲಾವಣೆ ತಾಳಿಕೆಯ ಪಾಕಿಸ್ತಾನಕ್ಕಾಗಿ ಅಂತರ್ರಾಷ್ಟ್ರೀಯ ಸಮ್ಮೇಳನ” ಸೇರಿತ್ತು. ಈ ಸಮ್ಮೇಳನದಲ್ಲಿ 40 ದೇಶಗಳು ಮತ್ತು ಅಂತರ್ರಾಷ್ಟ್ರೀಯ ಸಂಘಟನೆಗಳು ಭಾಗವಹಿಸಿದ್ದವು.
ಇದನ್ನು ಓದಿ: ಬಹುಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಸಮ್ಮೇಳನದಲ್ಲಿ ಈ ದೇಶಗಳು, ಸಂಘಟನೆಗಳು ಘೋಷಣೆಗಳನ್ನು ಮಾಡಿದವು. ಇಸ್ಲಾಮಿಕ್ ಡೆವಲೆಪ್ ಮೆಂಟ್ ಬ್ಯಾಂಕ್ 4,2, ವಿಶ್ವಬ್ಯಾಂಕ್ 2, ಏಶ್ಯನ್ ಡೆವಲೆಪ್ ಮೆಂಟ್ ಬ್ಯಾಂಕ್ 1.5, ಸೌದಿ ಅರೇಬಿಯ 1, ಯು.ಎಸ್ 0.1, ಚೀನಾ 0.1 ಶತಕೋಟಿ ಡಾಲರುಗಳ ಘೋಷಣೆ ಮಾಡಿವೆ. ಇತರ ದೇಶ ಸಂಘಟನೆಗಳೂ ಘೋಷಣೆ ಮಾಡಿವೆ. ಒಟ್ಟು ಘೋಷಣೆಗಳು 10 ಶತಕೋಟಿ ಡಾಲರುಗಳನ್ನು ದಾಟಿದ್ದು ತೃಪ್ತಿಕರವೆನಿಸಬಹುದು. ಆದರೆ ವಿವರಗಳಿಗೆ ಇಳಿದರೆ ಗಂಭೀರ ಆತಂಕಗಳು ಪಾಕಿಸ್ತಾನದ ಸರಕಾರ ಮತ್ತು ಜನತೆಯನ್ನು ಕಾಡುತ್ತಿವೆ.
ಆತಂಕಗಳೇನು?
ಮೊದಲನೆಯದಾಗಿ ಪಾಕಿಸ್ತಾನದ ಅರ್ಥಮಂತ್ರಿ ಹೇಳಿದಂತೆ ಸುಮಾರು 8.7 ಶತಕೋಟಿ ಡಾಲರುಗಳು (ಒಟ್ಟು ಘೋಷಣೆಗಳ ಶೇ.90) ಪ್ರಾಜೆಕ್ಟ್ ಸಾಲ, ನೆರವು/ಅನುದಾನಗಳಲ್ಲ. ಅಂದರೆ ಪ್ರಾಜೆಕ್ಟ್ ಗಳನ್ನು ತಯಾರಿಸಿ ಅವರನ್ನು ಒಪ್ಪಿಸಿದರೆ ಮಾತ್ರ ಸಿಗುತ್ತವೆ, ಅದೂ ಸಾಲವಾಗಿ. ಇಲ್ಲದಿದ್ದರೆ ಇವು ಬರಿಯ ಘೋಷಣೆಗಳಾಗಿ ಉಳಿಯುವ ಅಪಾಯವಿದೆ. ಬಡ ದೇಶಗಳಲ್ಲಿ ಹವಾಮಾನ ಬದಲಾವಣೆಯಿಂದಾಗುವ ಪ್ರಕೋಪಗಳ ಪರಿಹಾರ-ಪುನರ್ರಚನೆಗಳಿಗೆ ವಿಶ್ವಸಂಸ್ಥೆ ಕರೆ ಕೊಟ್ಟಾಗ ಈ ವರೆಗೆ ಶ್ರೀಮಂತ ದೇಶಗಳ ಪ್ರತಿಕ್ರಿಯೆ ನೋಡಿದರೆ ಇಂತಹ ಅಪಾಯ ಇಲ್ಲದಿಲ್ಲ. ಪಾಕಿಸ್ತಾನದ ಭೀಕರ ನೆರೆಯ ನಂತರ ವಿಶ್ವಸಂಸ್ಥೆ ಪರಿಹಾರ ನಿಧಿಗೆ ಕರೆಯಿತ್ತಾಗ ಘೋಷಣೆಯಾದ್ದು 0.82 ಶತಕೋಟಿ ಡಾಲರು. ಇದು ಒಟ್ಟು ಅವಶ್ಯಕತೆಗೆ ಹೋಲಿಸಿದರೆ ಅತ್ಯಲ್ಪ. ಆದರೆ ಅದರ ಅರ್ಧದಷ್ಟು ನಿಧಿ ಸಹ ಈ ವರೆಗೆ ಬಂದಿಲ್ಲ.
ಮಾತ್ರವಲ್ಲ, ಎಲ್ಲ ಘೋಷಣೆಗಳು ಹೊಸವಲ್ಲ. ಉದಾಹರಣೆಗೆ ವಿಶ್ವಬ್ಯಾಂಕ್ ಘೋಷಿಸಿದ 2 ಶತಕೋಟಿ ಡಾಲರುಗಳಲ್ಲಿ 0.62 ಶತಕೋಟಿ ಡಾಲರುಗಳಷ್ಟು ಈಗಾಗಲೇ ಕೆಲವು ಪ್ರಾಜೆಕ್ಟ್ ಗಳಲ್ಲಿ ವಿಳಂಬದಿಂದಾಗಿ ಕೊಟ್ಟಿರುವ ಸಾಲವನ್ನು ನೆರೆಪರಿಹಾರಕ್ಕೆ ಮರುಹಂಚಿಕೆ ಮಾಡಲಾಗಿದೆಯಷ್ಟೇ. ಉಳಿದ 1.3 ಶತಕೋಟಿ ಡಾಲರು ಸಹ ಡಿಸೆಂಬರ್ 2022ರಲ್ಲೇ ಮಂಜೂರಾಗಿತ್ತು.
ಹೆಚ್ಚಿನ ಘೋಷಣೆಗಳೂ ಈಗಾಗಲೇ ಹೇಳಿದ ಹಾಗೆ ಸಾಲಗಳಾಗಿದ್ದು ಅದರ ಷರತ್ತುಗಳು ಏನೆಂದು ಬಹಿರಂಗವಾಗಿಲ್ಲ. ಹಿಂದಿನ ಅನುಭವ ನೋಡಿದರೆ ಈ ಷರತ್ತುಗಳು ಬಡವರ ಸಬ್ಸಿಡಿಯಲ್ಲಿ ಕಡಿತ, ಸಾರ್ವಜನಿಕ ಸೇವೆಗಳಲ್ಲಿ ಕಡಿತ, ಕಲ್ಯಾಣ ಯೋಜನೆಯಲ್ಲಿ ಕಡಿತ, ಸರಕಾರಿ ಉದ್ಯೋಗಗಳಲ್ಲಿ ಕಡಿತ, ಖಾಸಗೀಕರಣ – ಇತ್ಯಾದಿ ಷರತ್ತುಗಳನ್ನು ಹೊಂದಿರುತ್ತದೆ. ಈ ಷರತ್ತುಗಳೇ ಜನತೆಯ ಮೇಲಿನ ಭೀಕರ ನೆರೆಯ ಗಾಯದ ಮೇಲೆ ಬರೆ ಎಳೆಯುತ್ತವೆ.
ಇದನ್ನು ಓದಿ: ಕ್ರಿಕೆಟ್ ಎಂದರೆ ಬರೀ ಆಟವಲ್ಲ; ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಭಾರೀ ಲಾಭ ಯಾರಿಗೆ?
ಜಿನೇವಾ ಸಮ್ಮೇಳನದಲ್ಲಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಪಾಕಿಸ್ತಾನ “ಹವಾಮಾನ ಅವ್ಯವಸ್ಥೆಯ” ಮತ್ತು “ನೈತಿಕವಾಗಿ ದೀವಾಳಿಯಾದ ಜಾಗತಿಕ ಅರ್ಥ ವ್ಯವಸ್ಥೆ‘’ಗಳ ಎರಡು ರೀತಿಯಲ್ಲಿ ಬಲಿಪಶುವಾಗಿದೆ’ ಎಂದಿದ್ದಾರೆ. ಇದನ್ನು “ಶ್ರೀಮಂತ ದೇಶಗಳ ಗುಂಪೊಂದು ತಮ್ಮ ಹಿತಾಸಕ್ತಿಗಾಗಿ ರೂಪಿಸಿವೆ’ ಎಂದು ಹೇಳಿದ್ದು ನಿಜವಾದ ವಿಶ್ಲೇಷಣೆ. ಈ ದುರಂತದ ನಡುವೆಯೂ ಶ್ರೀಮಂತ ದೇಶಗಳು ತಮ್ಮ ಸಂಕುಚಿತ ಹಿತಾಸಕ್ತಿಯಾಚೆಗೆ ಯೋಚಿಸಲು ತಯಾರಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ಆರ್ಥಿಕ ಮತ್ತು ಹವಾಮಾನ ನ್ಯಾಯ ಆಧಾರಿತ ಪುನಶ್ಚೇತನ
ಈ ಎಲ್ಲದರ ಒಟ್ಟು ಪರಿಣಾಮವೆಂದರೆ ಹವಾಮಾನ ತಾಳಿಕೆಯ ಪಾಕಿಸ್ತಾನ’ದ ಪರಿಹಾರ, ಪುನರ್ವಸತಿ ಮತ್ತು ಪುನರ್ರಚನೆಯ ಹೆಸರಿನಲ್ಲಿ ಪಾಕಿಸ್ತಾನವನ್ನು ಇನ್ನಷ್ಟು ಸಾಲದ ಕೂಪಕ್ಕೆ ತಳ್ಳುವುದು. ಇದು ಬರಿಯ ಕಲ್ಪನೆಯಲ್ಲ. ‘ಸಾಲದಲ್ಲಿ ನ್ಯಾಯ’ ಎಂಬ ಸಂಘಟನೆಯ ಅಧ್ಯಯನದ ಪ್ರಕಾರ, 2010ರ ನೆರೆಯ ನಂತರ ಪಾಕಿಸ್ತಾನ 20ರಿಂದ 40 ಶತಕೋಟಿ ಡಾಲರ್ ಹೆಚ್ಚು ಸಾಲ ಮಾಡಬೇಕಾಯಿತು. ಆ ನಂತರದ ಒಂದು ದಶಕದಲ್ಲಿ ಸಾಲ ಮತ್ತು ಬಡ್ಡಿ ಮರುಪಾವತಿಯ ಮೊತ್ತ 36ರಿಂದ 71 ಶತಕೋಟಿ ಡಾಲರಿನಷ್ಟು ಆಗಿದೆ. ಇದು ಪಾಕಿಸ್ತಾನದ ವಿಶೇಷ ಪ್ರಕರಣವಲ್ಲ. ವಿಪರೀತ ಸಾಲದ ಹೊರೆ ಎದುರಿಸುತ್ತಿರುವ 54 ದೇಶಗಳಲ್ಲಿ 28 ದೇಶಗಳು ಜಗತ್ತಿನ ಅತಿ ಹೆಚ್ಚು ‘ಹವಾಮಾನ ಬದಲಾವಣೆಗೆ ತುತ್ತಾಗಬಹುದಾದ’ 50 ದೇಶಗಳ ಪಟ್ಟಿಯಲ್ಲಿವೆ.
ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಶ್ರೀಮಂತ ದೇಶಗಳ ಕೈಗಾರಿಕಾ ಅಭಿವೃದ್ಧಿಯ ಚಾರಿತ್ರಿಕ ಸೂಸುವಿಕೆಯ ಕಾರಣದಿಂದ ಆದವುಗಳು. ದುಷ್ಪರಿಣಾಮಗಳು ಆಗುತ್ತಿರುವುದು ಬಡದೇಶಗಳ ಮೇಲೆ. ಆದ್ದರಿಂದ ಅದರ ಪರಿಹಾರ, ಪುನರ್ವಸತಿ, ಪುನರ್ರಚನೆಯ ವೆಚ್ಚವನ್ನು ಶ್ರೀಮಂತ ದೇಶಗಳು ಹೊರುವುದು “ಹವಾಮಾನ ನ್ಯಾಯ”. ಇವನ್ನು ಸಾಲದ ರೂಪದಲ್ಲಿ ಕೊಡುವುದು ಅತ್ಯಂತ ಅನ್ಯಾಯಯುತ ಕ್ರಮ. ನೆರವು ಅನುದಾನದ ರೂಪದಲ್ಲಿ ಇರಬೇಕು. ಅದೇ ರೀತಿ ಬಡ ದೇಶಗಳು ಬಡವಾಗಿರುವುದು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಶೋ಼ಷಣೆಯಿಂದ. ಹಾಗಾಗಿ ಅಭಿವೃದ್ಧಿ ನೆರವು ಸಹ ಅನುದಾನದ ರೂಪದಲ್ಲಿ ಇರಬೇಕು. ಸಾಲದ ರೂಪದಲ್ಲಿ ಅಲ್ಲ. ಇದು “ಆರ್ಥಿಕ ನ್ಯಾಯ’. ಬಡದೇಶಗಳ ಆರ್ಥಿಕದ ಪುನಶ್ಚೇತನ ಆಗಬೇಕಾಗಿರುವುದು ಆರ್ಥಿಕ ಮತ್ತು ಹವಾಮಾನ ನ್ಯಾಯ ಆಧಾರಿತವಾಗಿ. ಇದು ಪಾಕಿಸ್ತಾನದ ಬಿಕ್ಕಟ್ಟಿನಿಂದ ಎಲ್ಲ ಬಡದೇಶಗಳು (ಭಾರತ ಸೇರಿದಂತೆ) ಕಲಿಯಬೇಕಾದ ಪಾಠ.
ಇದನ್ನು ಓದಿ: ಅಫ್ಘಾನಿಸ್ತಾನ ನಿರಾಶ್ರಿತರಿಗೆ ಪಾಕಿಸ್ತಾನ ಆಶ್ರಯ ನೀಡಬೇಕು-ಮಹಿಳೆಯರು, ಬಾಲಕಿಯರ ಸುರಕ್ಷತೆಯ ಅಗತ್ಯವಿದೆ: ಮಲಾಲಾ
ರಾಜಕೀಯ ಬಿಕ್ಕಟ್ಟು
ಮೇಲೆ ಹೇಳಿದ ಹಾಗೆ ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಸಹ ತೀವ್ರಗೊಳ್ಳುತ್ತಿದೆ. ಪಾಕಿಸ್ತಾನದ ಆಳುವ ವರ್ಗಗಳ ಪಕ್ಷಗಳು “ಆರ್ಥಿಕ ಮತ್ತು ಹವಾಮಾನ ನ್ಯಾಯ ಆಧಾರಿತ ಪುನಶ್ಚೇತನ” ದ ಸುತ್ತ ಸಹಮತ ರೂಪಿಸಿ ಅದನ್ನು ಜಾರಿಗೆ ಪ್ರಯತ್ನಿಸುವ ಬದಲು ಪರಸ್ಪರ ಪೈಪೋಟಿ, ಸಂಘರ್ಷದಲ್ಲಿ ತೊಡಗಿವೆ. ಹಿಂದಿನ ಆಳುವ ಪಕ್ಷ ಮತ್ತು ಈಗಿನ ಪ್ರಮುಖ ವಿರೋಧ ಪಕ್ಷವಾದ ಇಮ್ರಾನ್ ಖಾನ್ ನಾಯಕತ್ವದ ಪಿಟಿಐ, ತನಗೆ ಬಹುಮತವಿರುವ ಎರಡು ರಾಜ್ಯಗಳಲ್ಲಿ ಪ್ರಾಂತೀಯ ವಿಧಾನಸಭೆ ವಿಸರ್ಜಿಸಿ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಪಿಟಿಐ ಸದಸ್ಯರು ರಾಜೀನಾಮೆ ಕೊಡುವ ಮೂಲಕ ಸಂವಿಧಾನಿಕ ಬಿಕ್ಕಟ್ಟು ಸೃ಼ಷ್ಟಿಸಲು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನದ ಗಡಿಗಳಲ್ಲಿ ಮತ್ತು ಇತರ ಪ್ರಾಂತ್ಯಗಳಲ್ಲೂ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ ಜನತೆ ಅವಾಮಿ ವರ್ಕರ್ಸ್ ಪಾರ್ಟಿ ನಾಯಕತ್ವದ ಎಡ-ಪ್ರಜಾಸತ್ತಾತ್ಮಕ ರಂಗದ ನಾಯಕತ್ವದಲ್ಲಿ ಬೆಲೆಏರಿಕೆ, ನೆರೆ ಪರಿಹಾರ, ಪುನರ್ವಸತಿ ಗಳಿಗೆ ಒತ್ತಾಯಿಸಿ ತೀವ್ರ ಪ್ರತಿಭಟನೆಗಳಲ್ಲಿ ತೊಡಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ