ಪಾಕಿಸ್ತಾನ ಚುನಾವಣೆ: ಜನರ ಪ್ರಜಾಪ್ರಭುತ್ವ ಆಕಾಂಕ್ಷೆಗಳ ಪ್ರತಿಬಿಂಬ

ಪಾಕಿಸ್ತಾನದ ಚುನಾವಣಾ ಫಲಿತಾಂಶಗಳು ಆ ದೇಶದ ಪ್ರಜೆಗಳ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಜೈಲಿನಲ್ಲಿರುವ ಆ ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಚುನಾವಣಾ ಫಲಿತಾಂಶದ ನಂತರ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಮತ್ತು ಅವರ ಪಕ್ಷ ಚುನಾವಣಾ ಕಣಕ್ಕೆ ಬರದಂತೆ ತಡೆಯಲು ಸೇನೆ ಮಾಡದಿರುವ ಷಡ್ಯಂತ್ರಗಳಿಲ್ಲ. ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುವ ಬಹಳ ಹಿಂದಿನಿಂದಲೇ ಮೇ 2023 ರಿಂದಲೇ ಅವರು ಜೈಲಿನಲ್ಲಿದ್ದಾರೆ. ವಿವಿಧ ಬಗೆಯ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಇಂದಿಗೂ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಹೆಸರು, ಚಿಹ್ನೆ ಬ್ಯಾಟ್ ಅನ್ನು ಅವರು ಬಳಸದಂತೆ ನಿಷೇಧ ವಿಧಿಸಿದ್ದಾರೆ. ಸೇನೆ ತೆಗೆದುಕೊಂಡ ಕ್ರಮಕ್ಕೆ ಹೆದರಿ ಇಮ್ರಾನ್ ಪಕ್ಷದ ಹಲವು ಪ್ರಮುಖ ನಾಯಕರು ಪರಾರಿಯಾಗಿದ್ದಾರೆ. ಇನ್ನು ಕೆಲವರು ಜೈಲಿನಲ್ಲಿದ್ದಾರೆ. ಮತ್ತೊಂದೆಡೆ, ಒಂದು ಕಾಲದಲ್ಲಿ ಸೇನೆಗೆ ಶತ್ರುವಾಗಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ನಾಯಕ ನವಾಜ್ ಷರೀಫ್ ಈಗ ಅದೇ ಸೇನೆಯ ಬೆಂಬಲದೊಂದಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಕಣಕ್ಕೆ ಇಳಿಯುವುದೆಂದರೆ ಕತ್ತಿಯ ಮೇಲೆ ನಡೆದಂತೆ!

265 ಸ್ಥಾನಗಳಲ್ಲಿ 93 ರಲ್ಲಿ ಪಿಟಿಐ ಬೆಂಬಲಿಗರು ;

ಆ ಕೆಲಸವನ್ನು ಜೈಲಿನಿಂದಲೇ ಇಮ್ರಾನ್ ಮಾಡಿದರೆ, ಅಲ್ಲಿ ಸಾರ್ವಜನಿಕರು ಸ್ಪಂದಿಸಿದ ರೀತಿ ಅಭೂತಪೂರ್ವ! ಈ ತಿಂಗಳ ಎಂಟರಂದು ನಡೆದ ಚುನಾವಣೆಯಲ್ಲಿ ಪಾಕಿಸ್ತಾನದ ಒಟ್ಟು 12 ಕೋಟಿ ಮತದಾರರ ಪೈಕಿ ಅರ್ಧಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು 265 ಸ್ಥಾನಗಳಲ್ಲಿ 101 ಸ್ಥಾನಗಳನ್ನು ಸ್ವತಂತ್ರರು ಗೆದ್ದಿದ್ದಾರೆ. ಅವರಲ್ಲಿ 93 ಮಂದಿ ಇಮ್ರಾನ್ ಖಾನ್ ಅವರ ಪಿಟಿಐ ಬೆಂಬಲಿಗರು! ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಲು ಸಾಧ್ಯವಾಗದ ಕಾರಣ, ಅವರು ವಿವಿಧ ಚಿಹ್ನೆಗಳೊಂದಿಗೆ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು. ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಇತರ ಪಕ್ಷಗಳಂತೆ ಸಮಾನ ಅವಕಾಶಗಳು ಸಿಕ್ಕಿದ್ದರೆ ಏನಾಗುತ್ತಿತ್ತು ಎಂದು ಹೇಳಬೇಕಾಗಿಲ್ಲ. ಸೇನೆಯ ಬೆಂಬಲದೊಂದಿಗೆ ಚುನಾವಣಾ ಕಣಕ್ಕೆ ಇಳಿದ ಪಿಎಂಎಲ್-ಎನ್ 75, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಮತ್ತು ಕರಾಚಿ ಮೂಲದ ಮುತಾಹಿದಾ ಕ್ವಾಮಿ ಮೂವ್ ಮೆಂಟ್-ಪಾಕಿಸ್ತಾನ 17 ಸ್ಥಾನಗಳನ್ನು ಗೆದ್ದಿವೆ.

ಇದನ್ನು ಓದಿ : ಚುನಾವಣಾ ಬಾಂಡ್‌ಗಳು ರದ್ದು | ಯೋಜನೆ ಅಸಂವಿಧಾನಿಕ ಎಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಶೆಹಬಾಜ್ ನೂತನ ಪ್ರಧಾನಿ ಸ್ಥಾನಕ್ಕೆ ನಾಮನಿರ್ದೇಶನ ;

ಪಾಕಿಸ್ತಾನದ ಜನರ ತೀರ್ಪು ಏನು ಮತ್ತು ಅವರ ಆಶಯ ಏನು ಎಂಬುದು ಸ್ಪಷ್ಟವಾಗಿದ್ದರೂ ಅದನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ನವಾಜ್ ಷರೀಫ್ ಮತ್ತು ಭುಟ್ಟೋ ಅವರ ಪಕ್ಷಗಳು ಪರಸ್ಪರ ಸಹಕರಿಸುವಂತೆ ಸೇನೆಯು ಒತ್ತಡ ಹೇರುತ್ತಿದೆ ಎಂಬ ವರದಿಗಳಿವೆ. ಪಿಪಿಪಿ ನಾಯಕಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಅವರು ಪ್ರಧಾನಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಹೊಸ ಸರ್ಕಾರಕ್ಕೆ ಸೇರುವುದಿಲ್ಲ, ಹೊರಗಿನಿಂದ ಬೆಂಬಲಿಸುತ್ತೇನೆ ಎಂದಿದ್ದಾರೆ. ಈ ಘೋಷಣೆಯ ನಂತರ ನವಾಜ್ ಷರೀಫ್ ಅವರು ತಮ್ಮ 72 ವರ್ಷದ ಸಹೋದರ ಶೆಹಬಾಜ್ ಅವರನ್ನು ನೂತನ ಪ್ರಧಾನಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದರು. ಇದರೊಂದಿಗೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣ ತಿಳಿಯಬೇಕಿದೆ. ಮತ್ತೊಂದೆಡೆ, ಇಮ್ರಾನ್ ಖಾನ್ ಅವರು ಎಲ್ಲಾ ಸ್ವತಂತ್ರ ಅಭ್ಯರ್ಥಿಗಳನ್ನು ಸಮ್ಮಿಶ್ರವಾಗಿಸಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಆದರೆ, ಸೇನೆಯ ಕಣ್ಣೆದುರೇ ಎಲ್ಲವೂ ನಡೆಯಬೇಕಿರುವುದರಿಂದ ಆ ಪ್ರಯತ್ನಗಳು ಫಲ ನೀಡುವುದು ಅನುಮಾನ!

ಅಮೆರಿಕದ ಕೈವಾಡ!

ಇಮ್ರಾನ್ ಖಾನ್ ವಿರುದ್ಧ ಸೇನೆ ಕೈಗೊಂಡಿರುವ ಕ್ರಮಗಳ ಹಿಂದೆ ಅಮೆರಿಕದ ಕೈವಾಡವಿದೆ ಎನ್ನಲಾಗಿದೆ. ಉಕ್ರೇನ್ ಯುದ್ಧದ ವಿಷಯದಲ್ಲಿ ಅಮೆರಿಕ ಹಾಗೂ ರಷ್ಯಾ ಮತ್ತು ಚೀನಾದೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸಲು ತೆಗೆದುಕೊಂಡ ಇಮ್ರಾನ್ ಖಾನ್ ಧೋರಣೆಯೇ ಇದಕ್ಕೆ ಕಾರಣ. ಇಸ್ಲಾಮಾಬಾದ್‌ನಲ್ಲಿ ಯಾರೇ ಕುರ್ಚಿಯಲ್ಲಿದ್ದರೂ ಅವರ ಪಾದಸೇವೆಯಲ್ಲಿ ಇರಬೇಕೆಂದು ಅಮೆರಿಕ ಬಯಸುತ್ತದೆ ಎಂಬುದು ಬಹಿರಂಗ ರಹಸ್ಯ! ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಜನತೆಯ ಇಚ್ಛಾಶಕ್ತಿಯನ್ನು ಸ್ಪಷ್ಟಪಡಿಸಿದೆ.

ಇದನ್ನು ನೋಡಿ : ದೆಹಲಿ ಚಲೋ’ : ರೈತರ ಮೇಲೆ ಆಶ್ರುವಾಯು ಪ್ರಯೋಗ – ಫೆ 16 ರಂದು ದೇಶವ್ಯಾಪಿ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *