- ಮಂಗಳವಾರ ಸುರಿದ ಬಾರಿ ಮಳೆಗೆ ಇಬ್ಬರು ಕಾರ್ಮಿಕರ ಸಾವು
- ಕಾವೇರಿ ಐದನೇ ಹಂತದ ಕಾಮಗಾರಿನಡೆಯುವ ಸಂದರ್ಭದಲ್ಲಿ ದುರಂತ ನಡೆದಿದೆ
ಬೆಂಗಳೂರು: ಮಂಗಳವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಉಲ್ಲಾಳ ಉಪನಗರದ ಉಪಕಾರ್ ಲೇಔಟ್‌ನಲ್ಲಿ, ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೃತರಾದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್‌ರವರು ಮೂಲತ: ಬಿಹಾರ ಮೂಲದವರೆಂದು ಗುರುತಿಸಲಾಗಿದೆ.
ಕಾವೇರಿ ಐದನೇ ಹಂತದ ಕಾಮಗಾರಿಗಾಗಿ, ಬೃಹತ್ ಪೈಪ್‌ನ ಒಳಗೆ ಮೂವರು ಕಾರ್ಮಿಕರು ಇಳಿದಿದ್ದರು. ಮಳೆ ಬರುತ್ತಿದ್ದಂತೆ ಕಾಮಗಾರಿಗೆ ಅಳವಡಿಕೆ ಮಾಡಿದ್ದ ಪೈಪ್ ಗೆ ನೀರು ತುಂಬಿಕೊಂಡಿದೆ. ಹೀಗಾಗಿ ಕಾಮಾಗಾರಿಗೆ ಅಗೆಯಲಾಗಿದ್ದ ಹೊಂಡಕ್ಕೂ ನೀರು ತುಂಬಿದೆ. ಮೂವರಲ್ಲಿ ಓರ್ವ ನೀರು ತುಂಬುತ್ತಿದ್ದಂತೆ ಹೊರಕ್ಕೆ ಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ ನೀರಿನ ರಭಸಕ್ಕೆ ಇಬ್ಬರು ಕಾರ್ಮಿಕರು ಪೈಪ್ ಒಳಗೆಯೇ ಹಲವು ದೂರ ಕೊಚ್ಚಿ ಹೋಗಿದ್ದಾರೆ. ಹಾಗಾಗಿ ಉಸಿರು ಕಟ್ಟಿ ಇಬ್ಬರು ಸತ್ತಿದ್ದಾರೆ. ರಾತ್ರಿಯಿಡೀ ಪೈಪ್ ಲೈನ್‌ನಲ್ಲೇ ಮೃತದೇಹವಿದ್ದು ಇಂದು ಬೆಳಗ್ಗೆ ಹೊರತೆಗೆಯಲಾಯಿತು. ಇಬ್ಬರು ಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.