ವಿಎಸ್ ಅಚ್ಯುತಾನಂದನ್ ಇದ್ದಿದ್ದರೆ “ಪದ್ಮ ವಿಭೂಷಣ”ವನ್ನು ಕಿರು ಬೆರಳಿನಲ್ಲೂ ಮುಟ್ಟುತ್ತಿರಲಿಲ್ಲ

ದಿನೇಶ್‌ ಅಮೀನ್ ಮಟ್ಟು‌ ಅವರು, ಅಚ್ಯುತಾನಂದನ್ ರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆಯ‌ ಹಿನ್ನಲೆಯಲ್ಲಿ ಫೇಸ್ ಬುಕ್ ನಲ್ಲಿ ಬರೆದಿರುವ ಬರಹ ತೀರಾ ಕೆಟ್ಟದಾಗಿದೆ. ಕಮ್ಯುನಿಸ್ಟರ ಕುರಿತು ಇವರಿಗೆ ಈ ಮಟ್ಟಿಗಿನ‌‌ ದ್ವೇಷ ಯಾಕೆ ಅಂತ ಅರ್ಥ ಆಗಲಿಲ್ಲ. ವಿಎಸ್

 

ಮುನೀರ್ ಕಾಟಿಪಳ್ಳ

ಇದು ದಿನೇಶ್ ಅಮೀನ್ ಮಟ್ಟು ಅವರ ಈ ದಿನಗಳ ಸಾಧನೆ. ಪದ್ಮ ಪ್ರಶಸ್ತಿಗಳನ್ನು  ಅಚ್ಯುತಾನಂದನ್ ಸಹಿತ ಕೇರಳಕ್ಕೆ ದೊಡ್ಡ ಪ್ರಮಾಣದಲ್ಲಿ ಘೋಷಿಸಿರುವುದರ ಹಿಂದಿನ (ಕೆಟ್ಟ) ರಾಜಕಾರಣವನ್ನು ಪ್ರಬುದ್ದವಾಗಿ ವಿಶ್ಲೇಷಿಸುವ ಬದಲಿಗೆ ಸಿಪಿಐಎಂ ವಿರುದ್ದ ಬಾಲಿಷವಾಗಿ ದ್ವೇಷ ಕಾರಿರುವುದು ಫ್ಯಾಸಿಸ್ಟ್ ಶಕ್ತಿಗಳನ್ನಲ್ಲದೆ ಇನ್ಯಾರಿಗೂ ಖುಷಿ ಪಡಿಸಲು ಸಾಧ್ಯ ಇಲ್ಲ.

ಮಟ್ಟು ಅವರ ಪೋಸ್ಟ್ ಅನ್ನು ಕೋಮುವಾದಿಗಳ ಪಿತಾಮಹ ಕಲ್ಲಡ್ಕ ಭಟ್, ಬಲಪಂಥೀಯ ಪತ್ರಿಕೋದ್ಯಮದ ರಿಂಗ್ ಮಾಸ್ಟರ್ ವಿಶ್ವೇಶ್ವರ ಭಟ್ ಗಳ ಶಿಷ್ಯ, ಕೋಮುವಾದಿ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಹಂಚಿಕೊಂಡು ಸಂಭ್ರಮಿಸುತ್ತಿರುವುದು ಇದಕ್ಕೆ ಸ್ಪಷ್ಟವಾದ ಉದಾಹರಣೆ. (ಮಟ್ಟು ತೃಪ್ತರಾಗಲಿ ಬಿಡಿ)

ಅಚ್ಯುತಾನಂದನ್ ಸಿಪಿಐಎಂ ಪಕ್ಷದ ಮೇರು ನಾಯಕರಾಗಿದ್ದವರು. ಪಕ್ಷದ ಅತ್ಯುನ್ನತ ವೇದಿಕೆ ಪಾಲಿಟ್ ಬ್ಯೂರೋ ದಲ್ಲಿ ದೀರ್ಘ ಕಾಲ ಇದ್ದವರು, ಮುಖ್ಯಮಂತ್ರಿ ಸ್ಥಾನವೂ ದೊರಕಿತ್ತು. ಹೀಗಿರುತ್ತಾ ಅನ್ಯಾಯ ಆಗಿದ್ದು ಎಲ್ಲಿಂದ ! ನಾಲ್ಕನೇ ತರಗತಿ ವರಗೆ ಓದಿದ್ದ, ನಾರು ಕಾರ್ಮಿಕನ ಮಗನೋರ್ವನಿಗೆ ಹಣಕಾಸು ಬಂಡವಾಳದ, ಜಾತಿ ಸಂಘಗಳ ಬೆಂಬಲ ಇಲ್ಲದೆ ಇಷ್ಟು ಅವಕಾಶ ದೊರಕಿದ್ದು ತಮಾಷೆಯ ಮಾತೇನಲ್ಲ. ಕಮ್ಯುನಿಸ್ಟ್ ಪಕ್ಷಗಳಲ್ಲದೆ ಇನ್ನು ಯಾವ ಪಕ್ಷದಿಂದಲೂ ಇದು ಸಾಧ್ಯವೂ ಅಲ್ಲ.

ಇಂತಹ ಮೇರು ನಾಯಕ ಅಚ್ಯುತಾನಂದನ್ ರವರನ್ನು ಆದರ್ಶವಾಗಿ, ಪ್ರೇರಣೆಯಾಗಿ ಇಟ್ಟುಕೊಂಡು (ಎಡ) ರಾಜಕಾರಣಕ್ಕೆ ಬಂದವರು ನಾವು‌. ಪ್ರಶಸ್ತಿಗಳ ಆಕರ್ಷಣೆ ನಮ್ಮನ್ನು ಅರೆ ಕ್ಷಣವೂ ವಿಚಲಿತಗೊಳಿಸುವುದಿಲ್ಲ. ಜೀವಂತ ಇದ್ದಿದ್ದರೆ ಇಂತಹ (ಫ್ಯಾಸಿಸ್ಟ್) ಪ್ರಭುತ್ವ ಪ್ರೇರಿತ ಪ್ರಶಸ್ತಿಯನ್ನು ಕಾಮ್ರೇಡ್ ವಿ ಎಸ್ ಕಿರು ಬೆರಳಿನಲ್ಲೂ ಮುಟ್ಟುತ್ತಿರಲಿಲ್ಲ. ವಿ ಎಸ್ ಬದುಕಿದ್ದರೆ ತಿರಸ್ಕರಿಸುತ್ತಿದ್ದ ಪ್ತಶಸ್ತಿಯನ್ನು ಅವರ ಮರಣಾನಂತರ ಘೋಷಿಸಿರುವಾಗ ಅದನ್ನು ಅವರ ಕುಟುಂಬ ತಿರಸ್ಕರಿಸಬೇಕು ಎಂದು ಬಯಸುವ ನೈತಿಕತೆ ಅವರ ರಾಜಕೀಯ ವಾರೀಸುದಾರರರಾದ ನನಗೆ (ನಮಗೆ) ಖಂಡಿತಾ ಇದೆ.

ಯಾಕೆಂದರೆ, ಪದ್ಮ ವಿಭೂಷಣ ಪ್ರಶಸ್ತಿ ವಿ ಎಸ್ ಗೆ ಘೋಷಿಸಿರುವುದು ಕಲಾವಿದ, ಸಾಹಿತಿ,ಪತ್ರಕರ್ತ, ಅಂಕಣಕಾರ, ಭಾಷಣ ಬರಹಗಾರ ಸಾಧನೆಯ ಕಾರಣಕ್ಕೆ ಅಲ್ಲ. ಅವರ ರಾಜಕೀಯ ಬದುಕಿನ ಸಾಧನೆಗಾಗಿ. ಆ ಸಾಧನೆ ಸಾಧ್ಯವಾಗಿಸಿರುವುದು‌ ಕಮ್ಯುನಿಸ್ಟ್ ಪಕ್ಷ. ಕಮ್ಯುನಿಸ್ಟ್ ಪಕ್ಷ ಆ ಸಾಧನೆಯ ನೈಜ‌ ವಾರೀಸುದಾರ ಎಂಬುದು‌ ನಿರ್ವಿವಾದ ಸತ್ಯ. ಪಕ್ಷಕ್ಕೆ ಆ ಕುರಿತು ನಿಲುವು ವ್ಯಕ್ತ ಪಡಿಸುವ ಅಧಿಕಾರ ಇದೆ.

ಈ ಪದ್ಮ ಪ್ರಶಸ್ತಿಗಳು ಅದೇನೊ ಮಹಾನ್ ಅಲ್ಲ.ಅದು ವಿರೇಂದ್ರ ಹೆಗ್ಗಡೆಗೂ ಸಿಕ್ಕಿದೆ, ಶತಾವಧಾನಿ, ವೆಲ್ಲಪಲ್ಲಿಗೂ ಸಿಕ್ಕಿದೆ. ತನ್ನ ಬೆಲೆಯನ್ನು ಯಾವತ್ತೋ ಕಳೆದುಕೊಂಡಿದೆ. ಅದು ಕಮ್ಯುನಿಸ್ಟರ ಮಟ್ಟಿಗೆ ಮಹತ್ವದ ವಿಷಯವೇ ಅಲ್ಲ.

ಇದನ್ನೂ ಓದಿ : ಚುನಾವಣೆ ಮೇಲೆ ಕಣ್ಣು : “ಪದ್ಮ ಪ್ರಶಸ್ತಿ ಹೆಸರಲ್ಲಿ” ರಾಜಕೀಯ ವಿಎಸ್

ದಿನೇಶ್ ಅಮೀನ್ ಮಟ್ಟು ಬರಹ ಕೆಳಗಿನಂತಿದೆ…

ದಿವಂಗತ ವಿ.ಎಸ್. ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿರುವುದನ್ನು ಅವರ ಕುಟುಂಬ ತಿರಸ್ಕರಿಸಬೇಕು ಎನ್ನುವ ಕೂಗು ಕೇಳತೊಡಗಿದೆ.

ಅಚ್ಯುತಾನಂದನ್ ಬದುಕಿದ್ದರೆ ಮೊದಲಿಗೆ ಅವರಿಗೆ ಈ ಪ್ರಶಸ್ತಿಯನ್ನೇ ಕೊಡುತ್ತಿರಲಿಲ್ಲ, ಕೊಟ್ಟಿದ್ದರೂ ಅವರು ತಿರಸ್ಕರಿಸುತ್ತಿದ್ದರು ಎನ್ನುವುದು ನಿಜ. ಕಮ್ಯುನಿಸ್ಟ್ ಪಕ್ಷದಿಂದ ಮುಖ್ಯಮಂತ್ರಿಗಳಾಗಿದ್ದ ಇ.ಎಂ.ಎಸ್ ನಂಬೂದಿರಿಪಾಡ್ ಮತ್ತು ಬುದ್ದದೇವ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿ ಪಡೆಯಲು ನಿರಾಕರಿಸಿದ್ದರು.

ಮಾಧ್ಯಮಗಳ ವರದಿ ಪ್ರಕಾರ ಅಚ್ಯುತಾನಂದನ್ ಕುಟುಂಬ ಪ್ರಶಸ್ತಿಯನ್ನು ಸ್ವಾಗತಿಸಿದೆ. ಒಂದೊಮ್ಮೆ ಅವರು ಸ್ವಾಗತಿಸಿರುವುದು ನಿಜವೆಂದಾದರೆ ಆ ನಿಲುವು ತೆಗೆದುಕೊಳ್ಳುವುದಕ್ಕೆ ಆ ಕುಟುಂಬಕ್ಕೆ ಖಂಡಿತ ಹಕ್ಕು ಇದೆ ಮತ್ತು ಅದನ್ನು ಪ್ರಶ್ನಿಸುವ ಅಧಿಕಾರ ಸಿಪಿಎಂ ಗೆ ಇಲ್ಲ. ವಿ.ಎಸ್.ಅಚ್ಯುತಾನಂದನ್ ಅವರಿಗೆ ರಾಜಕೀಯವಾಗಿ ಬಹಳ ದೊಡ್ಡ ಅನ್ಯಾಯ ಮಾಡಿರುವುದು ಸಿಪಿಎಂ ಆಗಿರುವ ಕಾರಣ ಆ ಪಕ್ಷದ ಮಾತನ್ನು ಯಾಕೆ ಕೇಳಬೇಕು ಎಂದು ಅವರ ಕುಟುಂಬ ನಿರ್ಧರಿಸಿದರೆ ಅದಕ್ಕೆ ಖಂಡಿತ ಸಮರ್ಥನೆ ಇದೆ.

ತನ್ನ 26ನೇ ವಯಸ್ಸಿನಲ್ಲಿ ಸಿಪಿಐ ಸೇರಿದ್ದ ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿದ್ದು ತನ್ನ 83ನೇ ವಯಸ್ಸಿನಲ್ಲಿ. ಕೇರಳದಲ್ಲಿ ಶೇಕಡಾ 30ರಷ್ಟು ಇರುವ ಈಳವರು ಸಿಪಿಎಂನ ದೊಡ್ಡ ಮತಬ್ಯಾಂಕ್ ಅಗಿದ್ದರೂ ಈ ಸಮುದಾಯ ರಾಜಕೀಯವಾಗಿ ನಿರಂತರವಾಗಿ ಅನ್ಯಾಯಕ್ಕೆ ಒಳಗಾಗಿರುವುದು ಇದೇ ಪಕ್ಷದಿಂದ ಎನ್ನುವುದಕ್ಕೆ ಇತಿಹಾಸ ಸಾಕ್ಷಿ.

ಕಮ್ಯುನಿಸ್ಟ್ ಪಕ್ಷದಿಂದ 1957ರಿಂದ 2006ರ ವರೆಗೆ ಮುಖ್ಯಮಂತ್ರಿಗಳಾಗಿದ್ದವರೆಲ್ಲರೂ (ಇಎಂಎಸ್ ನಂಬೂದಿರಿಪಾಡ್, ಅಚ್ಯುತಮೆನನ್ ವಾಸುದೇವ ನಾಯರ್. ಇ.ಕೆ.ನಾಯರ್) ಮೇಲ್ಜಾತಿಗೆ ಸೇರಿರುವ ನಂಬೂದಿರಿ ಮತ್ತು ನಾಯರ್ ಸಮುದಾಯದವರು.

ಅಚ್ಯುತಾನಂದನ್ ಅವರಿಗಿಂತಲೂ ಹಿರಿಯ ಕಮ್ಯುನಿಸ್ಟ್ ನಾಯಕಿ ಈಳವ ಸಮುದಾಯಕ್ಕೆ ಸೇರಿದ್ದ ಕೆ.ಆರ್.ಗೌರಿ. ಸ್ವಾತಂತ್ರ್ಯಹೋರಾಟಗಾರ್ತಿಯಾಗಿದ್ದ ಗೌರಿ 1948ರಲ್ಲಿಯೇ ಸಿಪಿಐ ಸೇರಿದ್ದವರು. 1952-54ರಲ್ಲಿ ತ್ರಿವಾಂಕೂರು-ಕೊಚ್ಚಿ ವಿಧಾನಸಭಾದ ಸದಸ್ಯರಾಗಿದ್ದವರು. ನಿರಂತರವಾಗಿ ವಿಧಾನಸಭೆಗೆ ಆಯ್ಕೆಯಾಗಿ ಬರುತ್ತಿದ್ದ ಗೌರಿ ಅವರನ್ನು 1987ರಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಸಿಪಿಐ(ಎಂ) ಚುನಾವಣೆಯನ್ನು ಎದುರಿಸಿತು. ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿಯಾದದ್ದು ಇ.ಕೆ.ನಯನಾರ್. ಈ ಅನ್ಯಾಯದಿಂದ ನೊಂದ ಗೌರಿಯಮ್ಮ ಸಿಪಿಎಂ ತೊರೆದು ತಮ್ಮದೇ ಪಕ್ಷ ಸ್ಥಾಪಿಸಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಚಿವರಾಗಿದ್ದರು.

ಇದನ್ನೆಲ್ಲ ನೋಡುತ್ತಾ ಬೆಳೆದಿರುವ ಪಿಣರಾಯ್ ವಿಜಯನ್ ಹೊರಗಿನ ಮತ್ತು ಒಳಗಿನ ಶತ್ರುಗಳನ್ನು ಮಣಿಸಲು ಅಗತ್ಯವಿರುವ ತಂತ್ರಗಳನ್ನೆಲ್ಲ ಕರಗತ ಮಾಡಿಕೊಂಡು ಸದ್ಯಕ್ಕೆ ಕೇರಳ ಸಿಪಿಎಂ ನ ಏಕಮೇವಾದ್ವಿತಿಯ ನಾಯಕ. ಪೈಪೋಟಿಯಲ್ಲಿ ಸಮೀಪಕ್ಕೆ ಬಂದಿದ್ದ ಶೈಲಜಾ ಟೀಚರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿ.ಎಸ್. ಅಚ್ಯುತಾನಂದನ್ ಕುಟುಂಬ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವಾಗತಿಸಿದರೆ ಅದನ್ನು ವಿರೋಧಿಸುವ ನೈತಿಕತೆ ಸಿಪಿಎಂಗೆ ಇಲ್ಲ.

ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕೇರಳದ ಕಮ್ಯುನಿಸ್ಟರಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವೇ ವಾಸಿ. ಈಳವ ಸಮುದಾಯಕ್ಕೆ ಸೇರಿದ್ದ ಮತ್ತು ನಾರಾಯಣ ಗುರು ಚಳುವಳಿಯಲ್ಲಿಯೂ ಸಕ್ರಿಯವಾಗಿದ್ದ ಆರ್ .ಶಂಕರ್ 1962ರಲ್ಲಿ ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗಳಾಗಿದ್ದರು. ಅವರಲ್ಲದೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದ ಎ.ಕೆ.ಆ್ಯಂಟನಿ ಮತ್ತು ಉಮನ್ ಚಾಂಡಿ ಅವರೂ ಮುಖ್ಯಮಂತ್ರಿಗಳಾಗಿದ್ದರು.ಅಲ್ಲಿ ಶೇಕಡಾ 27ರಷ್ಟು ಮುಸ್ಲಿಮರು ಮತ್ತು , ಶೇಕಡಾ 18ರಷ್ಟು ಕ್ರಿಶ‍್ಚಿಯನರಿದ್ದರೂ ಈ ಸಮುದಾಯದಿಂದ ಯಾರೊಬ್ಬರು ಕಮ್ಯುನಿಸ್ಟ ಪಕ್ಷದಿಂದ ಮುಖ್ಯಮಂತ್ರಿಯಾಗಿಲ್ಲ.

ಅಚ್ಯುತಾನಂದನ್ ಜೊತೆಯಲ್ಲಿ ಇನ್ನೊಬ್ಬ ಈಳವ ನಾಯಕ ವೆಲ್ಲಪಳ್ಳಿ ನಟೇಶನ್ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನಾರಾಯಣ ಗುರುಗಳು ಸ್ಥಾಪಿಸಿದ್ದ ಶ್ರೀನಾರಾಯಣ ಗುರು ಪರಿಪಾಲನಾ ಯೋಗಂನ ನಾಯಕರಾಗಿದ್ದ ವೆಲ್ಲಪಳ‍್ಳಿ 2016ರಲ್ಲಿ ತಮ್ಮದೇ ಭಾರತ ಧರ್ಮ ಜನಸೇನಾ ಎಂಬ ರಾಜಕೀಯ ಪಕ್ಷ ಸ್ಥಾಪಿಸಿ ಎನ್ ಡಿಎ ಜೊತೆ ಮೈತ್ರಿಮಾಡಿಕೊಂಡು ವಿಧಾನಸಭಾ ಚುನಾವಣೆ ಎದುರಿಸಿದ್ದರು. ಎಲ್ಲ ಕ್ಷೇತ್ರಗಳ್ಲಲಿ ಅವರ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ನಟೇಶನ್ ಮಗ ತುಷಾರ್ ಅಧ್ಯಕ್ಷತೆಯ ಆ ಪಕ್ಷ ಈಗಲೂ ಎನ್ ಡಿಎ ಜೊತೆ ಮೈತ್ರಿಯಲ್ಲಿದೆ.

ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಈಳವರನ್ನು ಓಲೈಸಲು ನಡೆಸಲಾಗುತ್ತಿರುವ ಕಸರತ್ತುಗಳ ಭಾಗವಾಗಿಯೇ ಶಿವಗಿರಿಯ ಸ್ವಾಮಿಗಳನ್ನು ಕಾಂಗ್ರೆಸ್ ಪಕ್ಷ ಮಂಗಳೂರಿಗೆ ಕರೆತಂದು ಮೆರೆಸಲಾಗುತ್ತಿದೆ, ಬಿಜೆಪಿ ಈಳವನಾಯಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.

ಸಮಾಧಾನಕರ ಸಂಗತಿ ಎಂದರೆ ಕೇರಳ ಚುನಾವಣೆಯ ಪೋಸ್ಟರ್ ಬಾಯ್ ರಾಮ, ಜಗನ್ನಾಥ ಅಲ್ಲ, ಅದು ನಾರಾಯಣ ಗುರು.

ಇದನ್ನೂ ನೋಡಿ : ಗಣರಾಜ್ಯೋತ್ಸವ 2026 | ಒಕ್ಕೂಟ ವ್ಯವಸ್ಥೆ ಗಂಡಾಂತರದಲ್ಲಿದೆ – ಡಾ. ಎಂ. ಚಂದ್ರ ಪೂಜಾರಿ Janashakthi Media

 

Donate Janashakthi Media

Leave a Reply

Your email address will not be published. Required fields are marked *