ಭಾವೈಕ್ಯತೆಯ ಕೊಂಡಿ, ಆಧುನಿಕ ಕಬೀರ ಇಬ್ರಾಹಿಂ ಸುತಾರ್ ಇನ್ನಿಲ್ಲ

ಬಾಗಲಕೋಟೆ: ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ-ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ನಾಡಿನ ಕಬೀರ, ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ ಗಾಯಕ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಇನ್ನಿಲ್ಲ.

ಇಂದು ಬೆಳಗ್ಗೆ ಅವರು ಹೃದಯಾಘಾತದಿಂದ ನಿಧನರಾಗಿದ್ದು ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ್ ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು.  ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬಡ ಕುಟುಂಬದಲ್ಲಿ ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ಇವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ.

ಬಾಲ್ಯದಲ್ಲಿ ಮಸೀದಿಗೆ ಹೋಗಿ ಅಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಪ್ರಾರ್ಥನೆ ಕಲಿತು ಕುರಾನ್ ಅಧ್ಯಯನ ಮಾಡಿದರು. ಈ ವೇಳೆ ಬೇರೆ ಧರ್ಮಗಳ ಸಾರ ಅರಿಯುವ ಆಶಯ ಮೊಳಕೆಯೊಡೆಯಿತು. ಅದಕ್ಕೆ ಊರಿನ ಸಾಧುನ ಗುಡಿಯಲ್ಲಿದ್ದ ಭಜನಾ ಸಂಘ ಒತ್ತಾಸೆ ನೀಡಿತು. ಅಲ್ಲಿನ ಧಾರ್ಮಿಕರ ಸಾಂಗತ್ಯದಲ್ಲಿ ತತ್ವಪದ, ವಚನಗಳನ್ನು ಕಲಿತರು. ಉಪನಿಷತ್ತಿನ ಸಾರ ಅರಿತುಕೊಂಡರು. ರಮ್ಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡ ಅವರು, ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು

‘ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರೂ ಸತ್ಯ ಒಂದೇ ಎಂಬ ಸಂಗತಿ ಅರಿವಿಗೆ ಬಂದಿತು. ಜೊತೆಗೆ ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ಭವದ ಅರಿವು ವಿಸ್ತಾರಗೊಳಿಸಿತು’ ಎಂದು ವಿನಮ್ರವಾಗಿ ಹೇಳುತ್ತಿದ್ದರು.

‘1970ರಲ್ಲಿ ಸಾಧುನ ಗುಡಿಯಲ್ಲಿಯೇ ಸಮಾನ ಮನಸ್ಕ ಗೆಳೆಯರು ಸೇರಿ ‘ಭಾವೈಕ್ಯದ ಜನಪದ ಸಂಗೀತ ಮೇಳ’ ಆರಂಭಿಸಿದ್ದರು. ಅದರ ಮೂಲಕ ಭಜನೆ, ತತ್ವಪದಗಳ ಹಾಡುತ್ತಾ ಜನಸಾಮಾನ್ಯರಿಗೆ ಧರ್ಮದ ಸಾರ ಮನವರಿಕೆ ಮಾಡತೊಡಗಿದರು. ಕುರಾನ್​ ಅಧ್ಯಯನ ಮಾಡಿದ ಅವರು, ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದರು. ಭಾವೈಕ್ಯತೆ ಹರಡುವ ಪ್ರವಚನ ಮಾಡುತ್ತಿದ್ದ ಇಬ್ರಾಹಿಂ ಸುತಾರ್ ಅವರ ಭಾಷಣಗಳನ್ನು ಕೇಳಲು ಭಾರೀ ಸಂಖ್ಯೆಯ ಜನ ಸೇರುತ್ತಿದ್ದರು. ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಇಬ್ರಾಹಿಂ ಸುತಾರ್ ಅವರು ಮಾಡಿದ ಭಾಷಣದ ತುಣುಕು ಬಹಳ ವೈರಲ್ ಆಗಿತ್ತು.

1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಇಬ್ರಾಹಿಂ ಸುತಾರ್ ಅವರಿಗೆ, 2018ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ನಿಧನಕ್ಕೆ ರಾಜ್ಯ, ದೇಶ, ವಿದೇಶದಿಂದ ಗಣ್ಯರು ಸಂತಾಪ ಸೂಚಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *