ತುಮಕೂರು: ಕೋವಿಡ್ ಸಂಕಷ್ಟದ ಕಾರಣ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಎಎವೈ ಮತ್ತು ಬಿ.ಪಿ.ಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಮೇ ಮಾಹೆಗಾಗಿ 5 ಕೆ ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2021ನೇ ಮೇ ಮಾಹೆಯಲ್ಲಿ ಚಾಲ್ತಿಯಲ್ಲಿರುವ 49,391 ಎಎವೈ, 61,2174 ಪಿ.ಹೆಚ್.ಹೆಚ್. (ಬಿಪಿಎಲ್), 24,205 ಎನ್.ಪಿ.ಹೆಚ್.ಹೆಚ್- ಕಾರ್ಡುಗಳಿಗೆ 1,62,096.95 ಕ್ವಿಂಟಲ್ ಅಕ್ಕಿ, 71,585.11 ಕ್ವಿಂಟಲ್ ರಾಗಿ, 12243.48 ಕ್ವಿಂಟಲ್ ಗೋಧಿ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ: ಕೋವಿಡ್ ಬಿಕ್ಕಟ್ಟು: ದೇಶದಲ್ಲಿ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ
ಹೊಸದಾಗಿ ಬಿ.ಪಿ.ಎಲ್ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಅರ್ಜಿದಾರರಿಗೆ ತಲಾ 10 ಕೆ ಜಿ ಯಂತೆ ಉಚಿತವಾಗಿ ಅಕ್ಕಿ ವಿತರಿಸಲಾಗುವುದು. ಬೇರೆ ಯಾವುದೇ ಪಡಿತರ ಚೀಟಿಯಲ್ಲಿ ಅರ್ಜಿದಾರರ ಹೆಸರು ಇಲ್ಲದವರಿಗೂ ಪಡಿತರ ವಿತರಿಸಲಾಗುವುದು. ಯಾರಿಗೆ ಪಡಿತರ ಇಲ್ಲವೋ ಅವರು ಅಂತಹ ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಅಂತ್ಯೋದಯ ಪಡಿತರ ಚೀಟಿ(ಎಎವೈ)ದಾರರಿಗೆ ಎನ್ಎಫ್ಎಸ್ಎ ಅಡಿ ಪ್ರತಿ ಪಡಿತರ ಚೀಟಿಗೆ 15 ಕೆ ಜಿ ಅಕ್ಕಿ ಹಾಗೂ 20ಕೆ ಜಿರಾಗಿ, ಪಿಎಂಜಿಕೆಎವೈ ಅಡಿ ಪ್ರತಿ ಸದಸ್ಯರಿಗೆ 5 ಕೆ ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು.
ಇದನ್ನು ಓದಿ: ಮನರೇಗಾ ಕೆಲಸ ಕಡಿತ: ಪರಿಹಾರಕ್ಕೆ ಆಗ್ರಹಿಸಿ ಹಕ್ಕೊತ್ತಾಯ
ಬಿ.ಪಿ.ಎಲ್ ಪಡಿತರ ಚೀಟಿ (ಪಿಎಚ್ಎಚ್)ದಾರರಿಗೆ ಎನ್ಎಫ್ಎಸ್ಎ ಅಡಿ ಪ್ರತಿ ಸದಸ್ಯರಿಗೆ 2 ಕೆ.ಜಿ. ಅಕ್ಕಿ, 3ಕೆ.ಜಿ.ರಾಗಿ ಹಾಗೂ ಪ್ರತಿ ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಮತ್ತು ಪಿಎಂಜಿಕೆಎವೈ ಅಡಿ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು.
ಎ.ಪಿ.ಎಲ್ (ಎನ್ ಪಿಎಚ್ ಎಚ್) ಏಕ ಸದಸ್ಯ ಪಡಿತರ ಚೀಟಿಗೆ 5ಕೆ.ಜಿ.ಅಕ್ಕಿ ಹಾಗೂ ಎರಡಕ್ಕಿಂತ ಹೆಚ್ಚಿಗೆ ಸದಸ್ಯರಿರುವ ಪಡಿತರ ಚೀಟಿಗೆ 10ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15ರೂ.ನಂತೆ ವಿತರಣೆ ಮಾಡಲಾಗುವುದು.
ಎನ್ ಪಿಎಚ್ ಎಚ್ (ಬಿಪಿಎಲ್) ಪಡಿತರ ಚೀಟಿ ಪ್ರತಿ ಅರ್ಜಿದಾರರಿಗೆ(ವಿಲ್ಲಿಂಗ್ ನೆಸ್ ನೀಡಿರುವ ಕಾರ್ಡುದಾರರಿಗೆ ಮಾತ್ರ) 10ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 15 ರೂ.ನಂತೆ ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಅಂತರ್ ರಾಜ್ಯ/ಅಂತರ್ ಜಿಲ್ಲಾ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ: ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಕನ್ನಡಿಗರು ಪ್ರಶ್ನೆ ಮಾಡಬೇಕು: ಕುಮಾರಸ್ವಾಮಿ
ಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು “2021ರ ಮೇ ಮಾಹೆಯ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಓ.ಟಿ.ಪಿ ಮೂಲಕ ವಿತರಿಸಬೇಕು. ಪಡಿತರ ಚೀಟಿದಾರರನ್ನು ಬಯೋ ದೃಢೀಕರಣಕ್ಕಾಗಿ ಒತ್ತಾಯಿಸುವಂತಿಲ್ಲ. ಸರ್ಕಾರ ನಿಗಧಿಪಡಿಸಿದ ಪ್ರಮಾಣದಲ್ಲಿಯೇ ವಿತರಣೆ ಮಾಡಬೇಕು.
ನ್ಯಾಯಬೆಲೆ ಅಂಗಡಿ ಹತ್ತಿರ ಕಾರ್ಡುದಾರರು ಕಡ್ಡಾಯವಾಗಿ “ಮಾಸ್ಕ್ ಧರಿಸುವುದು ” ಮತ್ತು “ಸಾಮಾಜಿಕ ಅಂತರ” ಕಾಯ್ದುಕೊಂಡು ಪಡಿತರ ಪಡೆಯುವ ವ್ಯವಸ್ಥೆ ಮಾಡಬೇಕು. ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿದಾರರಿಗೆ ಮಾತ್ರ ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಬೇಕು.
ಪಡಿತರ ವಿತರಣೆ ಬಗ್ಗೆ ಸಮಸ್ಯೆ ದೂರುಗಳು ಇದ್ದಲ್ಲಿ ಆಯಾ ತಾಲ್ಲೂಕಿನ ತಹಶೀಲ್ದಾರ್ / ಆಹಾರ ಶಿರಸ್ತೇದಾರ್ / ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.