ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ನಾನು ಇಬ್ಬರೇ ನಡೆಯಲು ಸಿದ್ಧ: ಡಿ ಕೆ ಶಿವಕುಮಾರ್‌

ಬೆಂಗಳೂರು: ನಾವು ಕಾನೂನು ಚೌಕಟ್ಟಿನಲ್ಲಿ ನಿಯಮ ಪಾಲಿಸಿ ನೀರಿಗಾಗಿ ನಡಿಗೆ ಮಾಡುತ್ತೇವೆ. ಒಂದು ವೇಳೆ ಸರ್ಕಾರದವರು ನಡಿಗೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶ ಮಾಡಿಕೊಡದಿದ್ದರೆ, ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ನೀರಿಗಾಗಿ ನಡೆಯಬೇಕು ಎಂದು ಜನವರಿ 9ರಿಂದ 19 ರವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.

ಪಕ್ಷಬೇಧ ಮರೆತು, ಎಲ್ಲ ಪಕ್ಷದ ನಾಯಕರು, ಸಂಘಟನೆಗಳಿಗೆ ಆಹ್ವಾನ ನೀಡಿದ್ದು, ಜನರು ಕೂಡ ಪಕ್ಷಾತೀತವಾಗಿ ಬೆಂಬಲಿಸಲು ಕರೆ ನೀಡಲಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರ ಹಾಗೂ ಕೆಲವು ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನೀರಿಗಾಗಿ ನಡಿಗೆಗೆ ಜನ ತೋರುತ್ತಿರುವ ಉತ್ಸಾಹ ನೋಡಿ ಇದನ್ನು ತಡೆಯಲು ದೊಡ್ಡ ಪಿತೂರಿ ರೂಪಿಸಿ, ಕೋವಿಡ್ ನೆಪದಲ್ಲಿ ನಿರ್ಬಂಧ ಹಾಕಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಆರೂವರೆ ಕೋಟಿ ಜನರಲ್ಲಿ 3 ಸಾವಿರ ಪ್ರಕರಣ ದಾಖಲಾಗಿದೆ ಎಂದು ಯಾವುದೇ ಕಾರ್ಯಕ್ರಮ, ಪ್ರತಿಭಟನೆ ನಡೆಯಬಾರದು ಎಂದು ನಿರ್ಬಂಧ ಹಾಕಿದ್ದಾರೆ. ಅವರು ಜ. 19 ರಂದು ಬೆಳಗೆ 5 ರವರೆಗೂ ಕರ್ಫ್ಯೂ ಹಾಕಿದ್ದಾರೆ. ಆ ಮೂಲಕ 19 ರ ಸಾರ್ವಜನಿಕ ಸಭೆಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲಿಯವರೆಗೂ ವಾರಾಂತ್ಯ ಕರ್ಫ್ಯೂ ಹಾಗೂ ನಿರ್ಬಂಧ ಹಾಕಿದ್ದಾರೆ.

ಪಕ್ಷದಲ್ಲಿ ನಾವೆಲ್ಲ ಚರ್ಚಿಸಿದ್ದು, ಈ ನಡಿಗೆ ರಾಜ್ಯದ ಹಿತಕ್ಕಾಗಿಯೇ ಹೊರತು ರಾಜಕಾರಣಕ್ಕೆ ಅಲ್ಲ. ರಾಜ್ಯದ ಹಿತಕ್ಕಾಗಿ ನೀರಿಗಾಗಿ ನಡಿಗೆ ಕಾರ್ಯಕ್ರಮವನ್ನು ಕಾನೂನು ಹಾಗೂ ಕೋವಿಡ್ ನಿಯಮದಂತೆ ಮುಂದುವರಿಸುತ್ತೇವೆ.

ಜನವರಿ 9 ರಂದು ಬೆಳಗ್ಗೆ ಈ ಕಾರ್ಯಕ್ರಮ ಆರಂಭಿಸಿ, 19 ರಂದು ಬಹಿರಂಗ ಸಭೆ ಮೂಲಕ ಮುಕ್ತಾಯ ಮಾಡುತ್ತೇವೆ. ಹರಿಯೋ ನೀರು, ಬೀಸೋ ಗಾಳಿ, ಉದಯಿಸುವ ಸೂರ್ಯನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ ಎಂದು ಬಿಜೆಪಿ ನಾಯಕರು ಗಮನದಲ್ಲಿಟ್ಟುಕೊಳ್ಳಲಿ. ಹೀಗಾಗಿ ನಾವು ಘೋಷಿಸಿರುವಂತೆ ನೀರಿಗಾಗಿ ನಡಿಗೆಗೆ ನಮ್ಮ ಮಾತಿಗೆ ಬದ್ಧರಾಗಿದ್ದೇವೆ ಎಂದರು.

ಸರ್ಕಾರದ ಈ ನಿರ್ಬಂಧಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ಸ್ಥಿತಿ ನೋಡಿದರೆ ನಮ್ಮ ಹೊಟ್ಟೆ ಉರಿಯುತ್ತಿದೆ. ಕ್ಯಾಬ್ ಚಾಲಕರು, ಬೀದಿಬದಿ ವ್ಯಾಪಾರಿಗಳು, ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಬದುಕಿಸುವ ಕೆಲಸ ಮಾಡಲಿ. ಇವರ ರಾಜಕೀಯಕ್ಕೆ ಸೋಂಕಿನ ಸಂಖ್ಯೆ ಹೆಚ್ಚಿಸಿ ನಿರ್ಬಂಧ ಹಾಕಿದ್ದಾರೆ. ರಾಜಕೀಯ ಬಿಟ್ಟು, ಜನರಿಗೆ ನೆರವಾಗಲಿ ಎಂದರು.

ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಚಿವರ ಎಚ್ಚರಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು 100 ನಾಟೌಟ್ ಮಾಡಿದಾಗ ಕೇಸ್ ಹಾಕಿದ್ದಾರೆ. 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಎಂಬ ನಿರ್ಬಂಧ ಇರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಸಾವಿರಾರು ಜನ ಸೇರಿದ್ದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ ನಿಯಮ ಉಲ್ಲಂಘಿಸಿದ್ದರು. ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡಿದಾಗ ನಿಯಮ ಉಲ್ಲಂಘನೆಯಾಗಲಿಲ್ಲವೇ? ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ? ನಾವು ತಪ್ಪು ಮಾಡಲು ಹೊರಟಿಲ್ಲ. ಆ ತಪ್ಪಿನ ಬಗ್ಗೆ ನೀವು ಅವರನ್ನು ಪ್ರಶ್ನಿಸಿ’ ಎಂದರು.

ಸಿದ್ದರಾಮಯ್ಯ ಹೇಳಿಕೆ

ಚಿತ್ರದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ‘ಕೋವಿಡ್ ಮಾರ್ಗಸೂಚಿ ಪಾಲಿಸಿಯೇ ಪಾದಯಾತ್ರೆ ಮಾಡಲಾಗುವುದು. ಕೋವಿಡ್ ಹರಡದೇ ಇರುವಂತೆ ಮಾಸ್ಕ್ ಧರಿಸಿ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು. ನಿಷೇಧಾಜ್ಞೆ ಹೇರಿ ಜನರು ಬಾರದಂತೆ ತಡೆದರೆ ನಾನು ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ’ ಎಂದು  ಹೇಳಿದರು.

ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ನೆಲೆಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿವೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *