ನಾಲ್ಕು ವರ್ಷದ ಪದವಿ ವ್ಯಾಸಂಗ ಬೇಡ: ವಿದ್ಯಾರ್ಥಿ ಸಂಘಟನೆಗಳ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಆತುರಾತುರವಾಗಿ ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಭಾಗವಾಗಿ, ಪದವಿ ವ್ಯಾಸಂಗವನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು ಒತ್ತಾಯ ಮಾಡಿದೆ.

ಅದೇ ರೀತಿಯಲ್ಲಿ ಮೂರು ವರ್ಷಗಳ ಪದವಿ ವ್ಯಾಸಂಗದ ಸಂದರ್ಭದಲ್ಲಿದ್ದ ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಭಾಷಾ ವ್ಯಾಸಂಗವನ್ನು ಎರಡು ಸೆಮಿಸ್ಟರ್‌ಗಳಿಗೆ ಮೊಟಕುಗೊಳಿಸಲಾಗಿದೆ. ರಾಜ್ಯ ಸರಕಾರದ ಈ ಎರಡು ಕ್ರಮಗಳು ವಿದ್ಯಾರ್ಥಿ ಹಾಗೂ ಕನ್ನಡ ವಿರೋಧಿ ಮತ್ತು ರಾಜ್ಯದ ಅಭಿವೃದ್ದಿ ವಿರೋಧಿ ಕ್ರಮಗಳಾಗಿವೆ ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿಗಳು ಈ ಎರಡು ಜನ ವಿರೋಧಿ ಶಿಕ್ಷಣ ಕ್ರಮಗಳನ್ನು ವಾಪಾಸು ಪಡೆಯುವಂತೆ ಒಕ್ಕೂಟವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ʻʻಪದವಿ ವ್ಯಾಸಂಗವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದು ಕೇವಲ  ಮೂರು ವರ್ಷಗಳಲ್ಲೇ ಪದವಿ ವ್ಯಾಸಂಗ ಮುಗಿಸಿ, ನಿರುದ್ಯೋಗ ಸೈನ್ಯ ಸೇರುವವರನ್ನು ಕನಿಷ್ಠ ಒಂದು ವರ್ಷ ನಿಯಂತ್ರಿಸುವ ದುಷ್ಟ ಯೋಚನೆಯಾಗಿದೆ ಮತ್ತು ವಿದ್ಯಾರ್ಥಿ ಹಾಗೂ ಆತನ ಪೋಷಕರು ಮತ್ತೊಂದು ವರ್ಷದ ವ್ಯಾಸಂಗಕ್ಕೆ ದುಬಾರಿ ಶುಲ್ಕ ಮತ್ತಿತರೇ ವೆಚ್ಚ ಭರಿಸುವ ಹೊರೆಯನ್ನು ಹೇರುವ ಮತ್ತು ಆ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಲೂಟಿಯ ಹರಿವನ್ನು ವಿಸ್ತರಿಸುವ ಸಂಚಾಗಿದೆʼʼ ಎಡ ವಿದ್ಯಾರ್ಥಿ ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.

ಅದೇ ರೀತಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಕಲಿಯುವ ಅವಕಾಶವನ್ನು ನಾಲ್ಕು ಸೆಮಿಸ್ಟರ್‌ಗಳ ಅವಧಿಗಳಿಂದ ಎರಡು ಸೆಮಿಸ್ಟರ್‌ಗಳ ಅವಧಿಗೆ ಮೊಟಕು ಮಾಡಿರುವುದು ಮತ್ತು ಆ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವನ್ನು ಮೊಟಕು ಮಾಡಿದಂತಾಗಿದೆ. ಇದು ಕನ್ನಡ ವಿರೋಧಿಯಾಗಿದೆ ಆದ್ದರಿಂದ, ಈ ಎರಡು ಜನವಿರೋಧಿ ಶಿಕ್ಷಣ ಕ್ರಮಗಳನ್ನು ರಾಜ್ಯ ಸರಕಾರ ಕೂಡಲೇ ವಾಪಾಸು ಪಡೆದು ಈ ಹಿಂದಿನಂತೆ ಮುಂದುವರೆಸಲು ರಾಜ್ಯ ಸರಕಾರವನ್ನು ಎಐಎಸ್ಎಫ್, ಎಸ್ಎಫ್ಐ, ಎಐಡಿಎಸ್ಓ, ಎಐಎಸ್ಎಫ್, ಕೆವಿಎಸ್ ಒಳಗೊಂಡ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿದೆ.

ಇದನ್ನು ಓದಿ: ನೂತನ ಶಿಕ್ಷಣ ನೀತಿ 2020: ಸದಾಶಯಗಳು ಮತ್ತು ಹುನ್ನಾರಗಳು

ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸಂಘಟನೆಯ ವಾಸುದೇವರೆಡ್ಡಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಓ) ಸೀತಾರಾ ಎಚ್.ಎಂ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಐಎಸ್‌ಎಫ್‌) ಸಂಘಟನೆಯ ರಮೇಶ್‌ ನಾಯಕ್‌, ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) ಸರೋವರ ಬೆಂಕೆಕೆರೆ, ಅಖಿಲ ಭಾರತ ವಿದ್ಯಾರ್ಥಿ ಅಸೋಶಿಯೇಷನ್‌ (ಎಐಎಸ್‌ಎ) ನ ಕಿಶನ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *