ಡಣ್ ಡಣ್ ಡಣ್…..!!! ಪಿ ಕೃಷ್ಣಪಿಳ್ಳೆ ಅವರಿಂದ ಗುರುವಾಯೂರು ದೇವಸ್ಥಾನದ ಗಂಟೆಯ ಸದ್ದು

ಗುರುವಾಯೂರಿನ ಗಂಟೆಯ ದನಿ ಅಲ್ಲಿ ನೆರೆದಿದ್ದವರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಕೇಳಿಸುತ್ತಿತ್ತು. ಝಮೋರಿನ್ ರಾಜನ ನಾಯರ್ ಗಾರ್ಡುಗಳು ಇನ್ನೂ ಇಪ್ಪತ್ತೈದು ವರ್ಷ ತುಂಬಿರದ ಯುವಕನೊಬ್ಬನಿಗೆ ಬಾರಿಸುತ್ತಿದ್ದ ಕೊರಡೆ ಏಟುಗಳು ಆ ಕಂಚಿನ ಗಂಟೆಯ ದನಿಯನ್ನೂ  ಮೀರಿಸುತ್ತಿತ್ತು.

ಒಂದು ಕೈಯಲ್ಲಿ ಘಂಟೆಯನ್ನು ಭದ್ರವಾಗಿ ಹಿಡಿದು ಸೆಟೆದು ನಿಂತಿದ್ದ ಆ ಕಪ್ಪುವರ್ಣದ ಯುವಕ ನೆರೆದಿದ್ದವರತ್ತ ನೋಡಿ ಘರ್ಜಿಸುತ್ತಿದ್ದ…. “ದಿಟ್ಟ ಆತ್ಮಾಭಿಮಾನಿ ನಾಯರ್ ಗಂಟೆ ಬಾರಿಸುತ್ತಿದ್ದಾನೆ… ರಾಜನ ತಂಗಳನ್ನದ ಚೂರುಗಳನ್ನು ಹುಡುಕುವ  ಅಂಜುಬುರುಕ ಗುಲಾಮ ನಾಯರುಗಳು ಅವನ ಬೆನ್ನನ್ನು ಬಾರಿಸುತ್ತಿದ್ದಾರೆ”

ಪೂರ್ತಿ ಕೇರಳವೇ ಜಾತಿ ತಾರತಮ್ಯದ ಕೊಳಚೆಯಲ್ಲಿ ಕೊಳೆಯುತ್ತಿದ್ದ ಕಾಲ ಅದು. ಕೆಳವರ್ಗದ ಹಿಂದೂ ಬಾಂಧವರಿಗೆ ದೇವಸ್ಥಾನ ಪ್ರವೇಶವಿರಲಿ, ದೇವಸ್ಥಾನದ ನೆರಳು ಬೀಳುವಲ್ಲಿ ಸುಳಿದಾಡುವ ಕನಸೂ ಕಾಣುವಂತಿರಲಿಲ್ಲ.

ರಾಜಮನೆತನ ಬೆಚ್ಚಿಬಿದ್ದಿತ್ತು… ಪುರೋಹಿತವರ್ಗ ತತ್ತರಿಸಿಹೋಯಿತು… ಪುರಾತನ ಕಾಲದಿಂದಲೂ ಬ್ರಾಹ್ಮಣರು ಹಾಗು ಮೇಲ್ಜಾತಿಯ ನಾಯರುಗಳಿಗಷ್ಟೇ ಇತಿಹಾಸಪ್ರಸಿದ್ಧ ಗುರುವಾಯೂರು ದೇವಸ್ಥಾನದ ಘಂಟೆಯನ್ನು ಬಾರಿಸುವ “ಭಾಗ್ಯ”ವಿತ್ತು.

ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದ ಸನಾತನ ಹಕ್ಕನ್ನು ಕೆಳಜಾತಿಯ ನಾಯರ್, ಮೇಲಾಗಿ ಕಮ್ಯುನಿಷ್ಟನೊಬ್ಬ ಮುರಿದು ಹಾಕಿದ್ದ.

ಇದರಿಂದ ಪ್ರೇರಿತರಾಗಿ ಮುಂದೆ ಕೇರಳದ ಮೂಲೆ ಮೂಲೆಗಳಲ್ಲಿ ಈ ರೀತಿಯ ದನಿಗಳು ಮಾರ್ದನಿಸತೊಡಗಿದವು… ಜನರ ಗೌರವದ ಹಕ್ಕುಗಳನ್ನು ಪ್ರತಿಷ್ಠಾಪಿಸುತ್ತಾ, ಅನಾಗರೀಕ ಜಾತಿವಾದವನ್ನು ನಿರ್ಮೂಲನೆ ಮಾಡುತ್ತಾ, ಬಡ ಕೃಷಿಕರ ಮೇಲಿನ ದೌರ್ಜನ್ಯಗಳನ್ನು ಹಿಮ್ಮೆಟ್ಟಿಸುತ್ತಾ ಹೊಸ ಕೇರಳವನ್ನು ಪುನರುಜ್ಜೀವಗೊಳಿಸುವ ಮಹಾಯಜ್ನಕ್ಕೆ ಆ ಘಟನೆ ಒಂದು ಕಿಡಿಯಾಯಿತು.

ತನ್ನ ಅಲ್ಪಾಯುಷ್ಯದ ಜೀವನದಲ್ಲಿ ಬಹುಶಃ ಯಾರೂ ಸಾಧಿಸದ ಸಾಧನೆಗಳನ್ನು ವ್ಯಾಪಕವಾಗಿ ಮಾಡಿ  ಬಿರುಗಾಳಿಯಂತೆ ದೇಶ , ರಾಜ್ಯವನ್ನು ಸುತ್ತುತ್ತಾ ಸಮಾಜವಾದದ ಬೇರುಗಳನ್ನು ಕೇರಳದ ಮಣ್ಣಿನಲ್ಲಿ ಭದ್ರವಾಗಿ ಬೇರೂರಿಸಿದ ಆ ವಿಸ್ಮಯ ವ್ಯಕ್ತಿತ್ವದ ಹೆಸರು “ಪಿ.ಕೃಷ್ಣ ಪಿಳ್ಳೈ”

ಗುರುವಾಯೂರ್ ದೇವಸ್ಥಾನದಲ್ಲಿ ಪವಿತ್ರ ಘಂಟೆಯನ್ನು ಬಾರಿಸಿದ ಮೊದಲ ಬ್ರಾಹ್ಮಣೇತರರು, ದೇವಸ್ಥಾನ ಕಾವಲುಗಾರರ ಶಿಕ್ಷೆಯ ಹೊಡೆತಗಳನ್ನು ಎದುರಿಸಲು ಧೈರ್ಯ ಮಾಡಿದರು. ಆಗ ಅವರು ದೇವಾಲಯ ಪ್ರವೇಶ ಚಳವಳಿಯ ಸ್ವಯಂಸೇವಕರಾಗಿದ್ದು, ಹಿಂದೂ ಸಮುದಾಯದ ಜಾತಿ ಭೇದವಿಲ್ಲದೆ ಎಲ್ಲರಿಗೂ ದೇವಾಲಯಕ್ಕೆ ಪ್ರವೇಶಿಸಬೇಕೆಂದು ಒತ್ತಾಯಿಸಿದರು.

1906ರಲ್ಲಿ ಆಗಿನ ತಿರುವಾಂಕೂರು ಸಂಸ್ಥಾನದ ವೈಕಂ ಬಡ ನಾಯರ್ ಕುಟುಂಬದಲ್ಲಿ ಜನಿಸಿದ ಕೃಷ್ಣ ಪಿಳ್ಳೈ ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡರು. ತುತ್ತಿನ ಅನ್ನಕ್ಕಾಗಿ ದೇಶವಿಡೀ ಸುತ್ತಾಡಿದ ಪಿಳ್ಳೈ ಅವರಿಗೆ ಅಗಾಧ ಜ್ಞಾನ ಹಾಗು ಜನರನ್ನು ಸಂಘಟಿಸುವ ಅದ್ವಿತೀಯ ಗುಣ ಲಭ್ಯವಾದದ್ದು ಅವರ ಪರ್ಯಟನೆಗಳಿಂದ. 1920ರ ದಶಕದ ಅಂತ್ಯದ ಕಾಲಘಟ್ಟಗಳಲ್ಲಿ ಅಲಹಾಬಾದಿನ ತೀವ್ರಗಾಮಿ ಕಾರ್ಮಿಕ ನಾಯಕರ ಹೋರಾಟಗಳು, ಅದೇ ಕಾಲದಲ್ಲಿ ನಡೆದ ರಷಿಯಾದ ಅಕ್ಟೋಬರ್ ಕ್ರಾಂತಿ, ಕಾನ್ಪುರದಲ್ಲಿ 1925ರಲ್ಲಿ ನಡೆದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಮೊಟ್ಟಮೊದಲ ಅಧಿವೇಶನಗಳು ಕೃಷ್ಣ ಪಿಳ್ಳೈ ಅವರಲ್ಲಿ ಸಮಾಜವಾದ ಸಿದ್ದಾಂತದ ಆಸಕ್ತಿಯನ್ನು ಹುಟ್ಟುಹಾಕಿದವು.

ತನ್ನ ರಾಜ್ಯಕ್ಕೆ ಮರಳಿದ ಪಿಳ್ಳೈ ಹಿಂದಿ ಪ್ರಚಾರಕ ಹುದ್ದೆಯನ್ನು ತ್ಯಜಿಸಿ ಕೋಯಿಕ್ಕೋಡಿನಿಂದ ಪಯ್ಯನ್ನೂರಿನವರೆಗೆ ನಡೆದ ಉಪ್ಪಿನ ಸತ್ಯಾಗ್ರಹದ ಯಾತ್ರೆಯಲ್ಲಿ ಪಾಲ್ಗೊಂಡರು. ಆಕರ್ಷಕ ಮಾತುಗಾರರಾಗಿದ್ದ ಪಿಳ್ಳೈ ತನ್ನ ಅಗಾಧ ಲೋಕಜ್ಞಾನದಿಂದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಜನನಾಯಕ.

ಅವರು 1934ರಲ್ಲಿ ರಚನೆಯಾದ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು (ಸಿಎಸ್‌ಪಿ) ಸೇರಿಕೊಂಡರು, ಕೇರಳದಲ್ಲಿ ಅದರ ಘಟಕದ ಮೊದಲ ಕಾರ್ಯದರ್ಶಿಯಾದರು. ಜವಳಿ, ಟೈಲ್ ಮತ್ತು ಹುರಿಹಗ್ಗ ಕೆಲಸಗಾರರನ್ನು ಸಂಘಟಿಸಿದ ಅವರು ಕೇರಳದಲ್ಲಿ ಆರಂಭಿಕ ಕಾರ್ಮಿಕ ವರ್ಗದ ಹೋರಾಟಗಳನ್ನು ಮುನ್ನಡೆಸಿದರು. ವರ್ಗ ಹೋರಾಟದ ಅನುಭವವು ಅವನನ್ನು ಕಮ್ಯುನಿಸಂಗೆ ನಿರಂತರವಾಗಿ ಕರೆದೊಯ್ಯಿತು. 1937ರಲ್ಲಿ ಸಿಪಿಐನ ಮೊದಲ ಘಟಕ ರಚನೆಯಾದಾಗ, ಕೃಷ್ಣ ಪಿಳ್ಳೈ ಇಎಂಎಸ್ ನಂಬೂದಿರಿಪಾಡ್, ಕೆ.ದಾಮೋದರನ್ ಮತ್ತು ಎನ್.ಸಿ.ಶೇಖರ್ ಅವರೊಂದಿಗೆ ನಾಲ್ಕು ಸದಸ್ಯರಲ್ಲಿ ಒಬ್ಬರಾಗಿದ್ದರು.

‘ಸಖಾವು’ (ಒಡನಾಡಿ) ಎಂದು ಸರಳವಾಗಿ ಜನಸಾಮಾನ್ಯರಿಗೆ ತಿಳಿದಿರುವ ಕೃಷ್ಣ ಪಿಳ್ಳೈ ಅವರು 1938ರಲ್ಲಿ ಆಲಪ್ಪುಳದಲ್ಲಿ ನಡೆದ ನಾಲ್ಕು ವಾರಗಳ ಸುದೀರ್ಘ ಸಾರ್ವತ್ರಿಕ ಮುಷ್ಕರದ ಮುಖ್ಯ ಸಂಘಟಕರಾಗಿದ್ದರು, ಇದನ್ನು ತಿರುವಾಂಕೂರಿನಲ್ಲಿ ಜವಾಬ್ದಾರಿಯುತ ಸರ್ಕಾರಕ್ಕಾಗಿ ಹೋರಾಟದ ಭಾಗವಾಗಿ ಆಯೋಜಿಸಲಾಯಿತು. ದಿವಾನ್ ಧಿಕ್ಕರಿಸಿದ ಕಾರ್ಮಿಕರ ಮೇಲೆ ಭಯೋತ್ಪಾದನೆಯ ಆಳ್ವಿಕೆಯನ್ನು ಬಿಚ್ಚಿಟ್ಟನು. ಕೃಷ್ಣ ಪಿಳ್ಳೈ ಅವರು ಜನಸಾಮಾನ್ಯರ ನಿಜವಾದ ನಾಯಕರಾಗಿ ಹೋರಾಟದಿಂದ ಹೊರಹೊಮ್ಮಿದರು ಮತ್ತು ಎಂಟು ವರ್ಷಗಳ ನಂತರ ಪುನ್ನಾಪ್ರ-ವಯಾಲಾರ್ ಸಶಸ್ತ್ರ ಹೋರಾಟದ ಹಿಂದಿನ ಪ್ರೇರಣೆ ಮತ್ತು ಶಕ್ತಿ ಈ ಆಂದೋಲನವು ಸಾಬೀತಾಯಿತು. ಇದು ತಿರುವಾಂಕೂರಿನಲ್ಲಿ ರಾಜಪ್ರಭುತ್ವದ ಅಂತ್ಯ ಮತ್ತು ಮುಂಬರುವಿಕೆಯನ್ನು ಸೂಚಿಸುತ್ತದೆ ಸ್ವಾತಂತ್ರ್ಯ. 1939ರಲ್ಲಿ ಸಿಎಸ್‌ಪಿಯ ಕೇರಳ ಘಟಕವು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿತು ಮತ್ತು ಕೃಷ್ಣ ಪಿಳ್ಳೈ ಅವರು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಂದಿನಿಂದಲೂ ವ್ಯಾಪಕವಾಗಿ ಗುರುತಿಸಲ್ಪಟ್ಟಂತೆ, ಇಎಂಎಸ್ ಸೈದ್ಧಾಂತಿಕ ಮತ್ತು ಮಾರ್ಗದರ್ಶಿಯಾಗಿದ್ದಾಗ, ಎ.ಕೆ. ಗೋಪಾಲನ್ (ಎಕೆಜಿ) ಜನಸಾಮಾನ್ಯ ವ್ಯಕ್ತಿ, ಮತ್ತು ಕೃಷ್ಣ ಪಿಳ್ಳೈ ಅವರು ಪಕ್ಷದ ಸಂಘಟಕರಾಗಿದ್ದರು.

ಎಳವೆಯಿಂದಲೇ ಅಪ್ಪಟ ಯಾತ್ರಿಯಾಗಿದ್ದ ಪಿಳ್ಳೈ ಕೇರಳದುದ್ದಕ್ಕೂ ಎಡೆಬಿಡದೆ ಸಂಚರಿಸುತ್ತಾ ಅತ್ಯಲ್ಪ ಕಾಲದಲ್ಲೇ ರಾಜ್ಯದುದ್ದಕ್ಕೂ ಕಾರ್ಮಿಕ ಸಂಘಟನೆಗಳನ್ನು ಕಟ್ಟಿದರು. ಯಾವ ಕಡೆಯಲ್ಲಿಯೂ ಒಂದು ರಾತ್ರಿಗಿಂತ ಹೆಚ್ಚು ತಂಗದ ಅವರು ಬರುವ ದಿನ ಯಾವ ಊರಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಅವರ ಅತ್ಯಾಪ್ತರಿಗೂ ತಿಳಿದಿರುತ್ತಿರಲಿಲ್ಲ. ಕಾಲಿಗೆ ಚಕ್ರವನ್ನು ಕಟ್ಟಿಕೊಂಡಂತೆ ತಿರುಗಾಡುತ್ತಿದ್ದ ಪಿಳ್ಳೈ ಕೇರಳದ ಗ್ರಾಮ ಗ್ರಾಮಗಳಲ್ಲಿ ಸಮಾಜವಾದದ ಸಿದ್ದಾಂತವನ್ನು ಪಸರಿಸಿದರು. ಭಾರತೀಯ ಕಮ್ಯುನಿಸ್ಟ್ ಪಕ್ಷ ಕೇರಳದ ಜನಮಾನಸದಲ್ಲಿ ಭದ್ರವಾಗಿ ಬೇರೂರಲು ಕೃಷ್ಣ ಪಿಳ್ಳೈ ಅವರು ಅತ್ಯಂತ ಮುಖ್ಯ ಕಾರಣ. ರಾಜ್ಯದಾದ್ಯಂತ ಅನೇಕ ಕಾರ್ಮಿಕ ಆಂದೋಲನಗಳಲ್ಲಿ ಸಮರ್ಥವಾಗಿ ಸಂಘಟಿಸಿದ ಪಿಳ್ಳೈ ರಾಜ್ಯದ ಅತ್ಯಂತ ಪ್ರಭಾವಿ ನಾಯಕರಾಗಿ ಬೆಳೆದರು. ಕೇರಳದ ಸಮಾಜದ ದೃಷ್ಟಿಕೋನವನ್ನೇ ಬದಲಾಯಿಸಿದರು. ಜನರ ಮಧ್ಯೆಯೇ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದ ಪಿಳ್ಳೈ ಹಗಲಿಡೀ ಸಂಚರಿಸುತ್ತಾ ರಾತ್ರಿ ಸಾಮಾನ್ಯ ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದರು.

1948 ರ ಆಗಸ್ಟ್ 19ರ ಇಂತಹುದೇ ಒಂದು ದಿನದಂದು ಆಲಪ್ಪುಝದ ಕುಗ್ರಾಮವೊಂದರ ತೆಂಗಿನ ಹುರಿಹಗ್ಗ ತಯಾರಿಸುವ ಬಡಕಾರ್ಮಿಕನ ಮನೆಯಲ್ಲಿ ಅವರು ಉಳಿದುಕೊಂಡಿದ್ದರು. ಪತ್ರವೊಂದನ್ನು ಬರೆಯುವುದರಲ್ಲಿ ತಲ್ಲೀನರಾಗಿದ್ದ ಅವರ ಕಾಲಿಗೆ ವಿಷಸರ್ಪವೊಂದು ಕಡಿಯಿತು.

ಸಕಾಲದಲ್ಲಿ ಚಿಕಿತ್ಸೆ ದೊರೆಯಲಾಗದೆ ವಿಷವೇರಿ ಅರ್ಧ ಘಂಟೆಯಲ್ಲಿಯೇ ಅವರ ದೇಹಾಂತ್ಯವಾಯಿತು.

ಬಹುಶಃ ಸಾಧಾರಣ ಮನುಷ್ಯನೊಬ್ಬ ತನ್ನ ಪೂರ್ತಿ ಜೀವಿತಕಾಲದಲ್ಲಿ ಮಾಡಲಾಗದಷ್ಟು  ಸಾಧನೆ ಮಾಡಿದ ಕೃಷ್ಣ ಪಿಳ್ಳೈ ತನ್ನ ಪಯಣವನ್ನು ಕೊನೆಗೊಳಿಸಿದಾಗ ಅವರ ಪ್ರಾಯ ಕೇವಲ 41 …!!!

ಕಡೆಯ ಕ್ಷಣದವರೆಗೂ ಬರೆಯುತ್ತಿದ್ದ ಪಿಳ್ಳೈ ಅವರ ಕೊನೆಯ ವಾಕ್ಯಗಳು…

“ನನ್ನ ಕಣ್ಣುಗಳು ಮಂಜಾಗುತ್ತಿವೆ. ಆಯಾಸ ಹಾಗು ನಿಶ್ಯಕ್ತಿ ಆವರಿಸುತ್ತಿದೆ… ಏನಾಗಲಿದೆ ಎಂಬುದರ ಅರಿವಿದೆ. ಕಾಮ್ರೆಡ್ಸ್… ಮುನ್ನಡೆಯಿರಿ… ವಂದನೆಗಳು“

ಅಲ್ಪಕಾಲದಲ್ಲೇ ಸಾಮಾಜಿಕ ಹಾಗು ರಾಜಕೀಯ ಕ್ರಾಂತಿಯ ಬಿರುಗಾಳಿಯೆಬ್ಬಿಸಿದ ಮಹಾನ್ ಜನನಾಯಕ ಕೃಷ್ಣ ಪಿಳ್ಳೈ ಅವರ ಜನ್ಮ ಹಾಗು ಮರಣದ ದಿನ ಇಂದು…

ಕಶನ್ ಹೆಗ್ಡೆ

Donate Janashakthi Media

Leave a Reply

Your email address will not be published. Required fields are marked *