ಕೊವಿಡ್-19ರ ಎರಡನೇ ಅಲೆ ‘ಬಿರುಗಾಳಿಯಾಗಿ ಅಪ್ಪಳಿಸಿರುವಾಗ’ ಕೇಳಬರುತ್ತಿರುವ ಒಂದು ಪ್ರಧಾನ ಕೂಗು ಎಂದರೆ ಆಕ್ಸಿಜನ್ ಕೊರತೆ, ಅಂದರೆ ವೈದ್ಯಕೀಯ ಆಮ್ಲಜನಕದ ತೀವ್ರ ಅಭಾವ.
ಕೊವಿಡ್ ಸೋಂಕು ಹೆಚ್ಚಾಗಿ ಶ್ವಾಸಕೋಶಕ್ಕೆ ತಗಲುತ್ತದೆ. ಇದರಿಂದ ಸೋಂಕಿತರಲ್ಲಿ ಉಸಿರಾಟದ ಸಮಸ್ಯೆಗಳು ಉಂಟಾಗುತ್ತದೆ. ಇಂತಹ ಸಮಯದಲ್ಲಿ ಆಮ್ಲಜನಕದ ಕೃತಕ ಪೂರೈಕೆ ಈ ಸಮಸ್ಯೆಗಳನ್ನು ಎದುರಿಸಲು ನೆರವಾಗುತ್ತವೆ. ಇಲ್ಲಿಯೇ ಕೃತಕ ಆಕ್ಸಿಜನ್ ಪೂರೈಕೆ ಬಹಳ ಮಹತ್ವ ಪಡೆದಿರುವುದು.
ಇದನ್ನು ಓದಿ: ಜನ ಸಾಯುತ್ತಿದ್ದರೂ ನಿಮಗೆ ಅನುಕಂಪವಿಲ್ಲವೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್ ಅಸಮಾಧಾನ
ದಿಲ್ಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕವೂ ಸೇರಿದಂತೆ ಈ ಎರಡನೇ ಅಲೆಯಲ್ಲಿ ಬಹಳಷ್ಟು ಸಾವುಗಳು ಆಕ್ಸಿಜನ್ ಕೊರತೆಯಿಂದಾಗಿಯೆ ಸಂಭವಿಸಿರುವಂತೆ ಕಾಣುತ್ತದೆ.
ಇವುಗಳ ನಡುವೆ, ಕೇರಳ ರಾಜ್ಯದಲ್ಲಿ ಮಾತ್ರವೇ ಆಕ್ಸಿಜನ್ ನ ಮಿಗುತೆ ಪೂರೈಕೆ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹಲವರ ಗಮನ ಸೆಳೆದಿದೆ. ಆ ರಾಜ್ಯದ ಸ್ವಂತ ಅಗತ್ಯಗಳನ್ನು ಪೂರೈಸುವುದಲ್ಲದೇ ಕಳೆದ ವಾರ ಗೋವ, ಕರ್ನಾಟಕ ಮತ್ತು ತಮಿಳುನಾಢಿಗೆ ಅಲ್ಲಿಂದ ವೈದ್ಯಕೀಯ ಆಕ್ಸಿಜನ್ ಟ್ಯಾಂಕರುಗಳು ಹೋಗಿವೆ ಎಂದು ವರದಿಯಾಗಿದೆ.
ಲಭ್ಯ ಮಾಹಿತಿಗಳ ಪ್ರಕಾರ ಎಪ್ರಿಲ್ 15 ರವರೆಗೆ ಕೇರಳದಲ್ಲಿ ಪ್ರತಿದಿನ ಒಟ್ಟು ಆಕ್ಸಿಜನ್ ಆವಶ್ಯಕತೆ 83 ಟನ್, ಇವುಗಳಲ್ಲಿ 35 ಟನ್ ಕೊವಿಡ್ ರೋಗಿಗಳಿಗೆ ಮತ್ತು ಉಳಿದ 48 ಟನ್ ಇತರ ರೋಗಿಗಳಿಗೆ. ಎಪ್ರಿಲ್ 30 ರ ವರೆಗೆ ಕೇರಳಕ್ಕೆ ಪ್ರತಿದಿನ 100 ಟನ್ ಪೂರೈಕೆ ಬೇಕಾಗಬಹುದು ಎಂದು ಸರಕಾರ ಅಂದಾಜು ಮಾಡಿದೆ. ಇದಕ್ಕೆ ಪ್ರತಿಯಾಗಿ ಉತ್ಪಾದನೆ 246.1 ಟನ್‍ಗಳಷ್ಟು ಇದೆ. ಅಲ್ಲದೆ ಹಲವು ರಾಜ್ಯಗಳಲ್ಲಿ ಇರುವಂತೆ ದಾಸ್ತಾನು ಮತ್ತು ಬಾಟ್ಲಿಂಗ್ (ದ್ರವ ಆಮ್ಲಜನಕವನ್ನು ಸಿಲಿಂಡರ್ ಗಳಿಗೆ ತುಂಬುವುದು) ಕೊರತೆಯೂ ಇಲ್ಲ. ಪ್ರತಿದಿನ 155.5 ಟನ್‍ಗಳಷ್ಟು ದಾಸ್ತಾನು ಮಾಢುವ, ಮತ್ತು 90.6 ಟನ್‍ಗಳಷ್ನ್ನು ತುಂಬುವ ಸಾಮರ್ಥ್ಯವೂ ಇದೆ.
ಇದನ್ನು ಓದಿ: ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು
ಇದಕ್ಕೆ ಕಾರಣ ಇಲ್ಲಿ ಪ್ರತಿಯೊಬ್ಬ ರೋಗಿಯ ಆಕ್ಸಿಜನ್ ಆವಶ್ಯಕತೆಯನ್ನು ಲೆಕ್ಕ ಹಾಕಿ ಹೆಚ್ಚೆಂದರೆ ಎಷ್ಟು ಪೂರೈಕೆಯ ಅಗತ್ಯವಿದೆ ಎಂಬುದನ್ನು ಕರಾರುವಾಕ್ಕಾಗಿ ಗುರುತಿಸಲು ಸಾಧ್ಯವಾಗಿದೆ. ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆಯನ್ನು ಕರಾರುವಾಕ್ಕಾಗಿ ನಡೆಸುತ್ತಿರುವಂತೆ ಕಾಣುತ್ತಿಲ್ಲ ಎಂದು ಆಕ್ಸಿಜನ್ ಪೂರೈಕೆಯ ಮೇಲೆ ನಿಗಾ ಇಡುವ ‘ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಘಟನೆ’(ಪಿ.ಇ.ಎಸ್.ಒ.) ಯ ಕೇರಳ ಮತ್ತು ಲಕ್ಷದ್ವೀಪ ಘಟಕದ ಉಪ ಮುಖ್ಯ ನಿಯಂತ್ರಕರಾದ ಆರ್.ವೇಣುಗೋಪಾಲ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯದ ಕೊಚಿ ಆವೃತ್ತಿ ವರದಿ ಮಾಡಿದೆ(ಟಿ.ರಾಮವರ್ಮನ್, ಟಿಎನ್‍ಎನ್, ಎಫ್ರಿಲ್ 18).
ಕೇರಳ ರಾಜ್ಯ ಆರೋಗ್ಯ ಇಲಾಖೆ, ಪಿ.ಇ.ಎಸ್.ಒ. ಸಹಕಾರದೊಂದಿಗೆ ಮಾರ್ಚ್ 1, 2020ರಿಂದ ಸತತವಾಗಿ ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್‍ನ ಪೂರೈಕೆಯ ಮೇಲೆ ನಿಗಾ ಇಡುತ್ತಿದೆ ಎಂದು ದಿ ನ್ಯೂಸ್‍ಮಿನಿಟ್(ಟಿಎನ್‍ಎಂ, ಎಪ್ರಿಲ್ 21 ) ಕೂಡ ವರದಿ ಮಾಡಿದೆ. ಕೊವಿಡ್ ಮೊದಲನೇ ಅಲೆ ಇಳಿಮುಖವಾದಾಗಲೂ ಇದನ್ನು ಸಡಿಲಗೊಳಿಸಲಿಲ್ಲ. ದ್ರವ ಆಕ್ಸಿಜನ್ ಉತ್ಪಾದನೆಯಲ್ಲಿ ಒಂದು ಗಮನಾರ್ಹ ಭಾಗವನ್ನು ಕೈಗಾರಿಕಾ ಬಳಕೆಯಿಂದ ವೈದ್ಯಕೀಯ ಬಳಕೆಯತ್ತ ತಿರುಗಿಸಿ ಆಸ್ಪತ್ರೆಗಳಿಗೆ ಪೂರೈಸಿ ವೈದ್ಯಕೀಯ ಆಕ್ಸಿಜನ್ ನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂಧು ಈ ವರದಿ ಹೇಳುತ್ತದೆ.
ಇದನ್ನು ಓದಿ: ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ
ರಾಜ್ಯದ ಕಾಂಜಿಕೊಡ್ ನಲ್ಲಿರುವ ಐನೊಕ್ಸ್ ಏರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿ. ಈಗ ಕೇರಳದಲ್ಲಿ ವೈದ್ಯಕೀಯ ಆಕ್ಸಿಜನ್ ನ ಅತಿ ದೊಡ್ಡ ಪೂರೈಕೆದಾರ ಕಂಪನಿ. ಮಾರ್ಚ್ 2020ರ ಮೊದಲು ಇಲ್ಲಿಯ ಉತ್ಪಾದನೆಯಲ್ಲಿ 40% ಉದ್ದಿಮೆಗಳಿಗೆ , 60% ವೈದ್ಯಕೀಯ ಬಳಕೆಗೆ ಹೋಗುತ್ತಿದ್ದವು. ಈಗ ಸಂಪೂರ್ಣವಾಗಿ ಆಸ್ಪತ್ರೆಗಳಿಗೇ ಪೂರೈಸುತ್ತಿದೆ. ರಾಜ್ಯದಲ್ಲಿ ಇನ್ನೂ ಕೆಲವು ಆಕ್ಸಿಜನ್ ತಯಾರಕಾ ಕಂಪನಿಗಳಿದ್ದು, ಅವೆಲ್ಲವೂ ಈಗ ತಮ್ಮ ಉತ್ಪಾದನೆಯನ್ನು ಆಸ್ಪತ್ರೆಗಳಿಗೇ ಪೂರೈಸುತ್ತಿವೆ.
ಮೊದಲ ಕೊವಿಡ್ ಅಲೆಯ ನಿರ್ವಹಣೆಯ ಸಮಯದಲ್ಲಿ ರಾಜ್ಯ ಸರಕಾರ ಮಾಡಿದ ಇನ್ನೊಂದು ಪ್ರಮುಖ ಕೆಲಸವೆಂದರೆ, ಸಾರ್ವಜನಿಕ ವಲಯದ ಒಂದು ಉದ್ದಿಮೆಯಾದ ಕೇರಳ ಮೆಟಲ್ಸ್ ಅಂಡ್ ಮಿನರಲ್ಸ್(ಕೆಎಂಎಂಎಲ್) ನಲ್ಲಿನ ಅನಿಲ ತ್ಯಾಜ್ಯವನ್ನು ವೈದ್ಯಕೀಯ ಉಪಯೋಗಕ್ಕೆ ಬಳಸಬಹುದಾದ ದ್ರವ ಆಕ್ಸಿಜನ್ ಉತ್ಪಾದನೆಗೆ ತಿರುಗಿಸುವ ಒಂದು ಆಮ್ಲಜನಕ ಸ್ಥಾವರವನ್ನು 58 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ್ದು. ಅಕ್ಟೋಬರ್ 2020ರಿಂದ ಕಾರ್ಯಾರಂಭ ಮಾಡಿರುವ ಇದು ಈಗ ಪ್ರತಿದಿನ 70 ಟನ್ ವೈದ್ಯಕೀಯ ಆಕ್ಸಿಜನ್ ಅನ್ನು ಪೂರೈಸುತ್ತಿದೆ.
ಇದನ್ನು ಓದಿ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯದಿಂದ 22 ಮಂದಿ ಸಾವು
ತದ್ವಿರುದ್ಧವಾಗಿ, ಉತ್ತರಪ್ರದೇಶದಲ್ಲಿ ಸರಕಾರ ಕೆಲವು ದಿನಗಳ ಹಿಂದೆಯಷ್ಟೇ ಒಂದು ಆಕ್ಸಿಜನ್ ಸ್ಥಾವರವನ್ನು ಆರಂಭಿಸಿದೆ. ಇದನ್ನು ಮೊದಲೇ ಮಾಡಿದ್ದರೆ ..ಎಂದು ‘ಭಾರತ್ ಸಮಾಚಾರ್’ ಟಿವಿ ವಾಹಿನಿಯ ವರದಿಗಾರ ಅಭಿಷೇಕ್ ಪಾಂಡೆ ಹಲುಬುತ್ತಾರೆ. ದೇಶದಲ್ಲಿ ಲಸಿಕೆ ಉತ್ಪಾದನೆ ಆರಂಭವಾಗುತ್ತಿದ್ದಂತೆಯೇ ಆರೋಗ್ಯ ಮೂಲರಚನೆಯನ್ನು ಬಲಗೊಳಿಸುವ ಕೆಲಸ ಈ ರಾಜ್ಯ ಸರಕಾರದ ಅಜೆಂಡಾದಿಂದಲೇ ಜಾರಿ ಹೋಯಿತು ಎನ್ನುತ್ತಾರೆ ಲಕ್ನೌನಿಂದ ಮಹಾಸೋಂಕಿನ ಬಗ್ಗೆ ಕಳೆದ ಒಂದು ವರ್ಷದಿಂದ ಸತವಾಗಿ ವರದಿ ಮಾಡುತ್ತಿರುವ ಅಭಿಷೇಕ್. ಅಲಹಾಬಾದ್ ಹೈಕೋರ್ಟ್ ನಗರದಲ್ಲಿ ಲಾಕ್ ಡೌನ್ ಹಾಕಬೇಕು ಎಂದು ನಿರ್ದೇಶನ ಕೊಡುವಂತಹ ಪರಿಸ್ಥಿತಿ ಇಲ್ಲಿ ಉಂಟಾಗಿದ್ದು ಅದಕ್ಕೆ ‘ವ್ಯವಸ್ಥೆಯ ವಿಫಲತೆ’ ಯೇ ಕಾರಣ ಎಂದು ಅವರಿಗೆ ಅನಿಸಿದೆ( ನ್ಯೂಸ್ ಲಾಂಡ್ರಿ, ಎಪ್ರಿಲ್ 21).
ಬಿಜೆಪಿ ಆಳ್ವಿಕೆಯ ಒಂದು ಪ್ರಮುಖ ರಾಜ್ಯದ ಈ ಪರಿಸ್ಥಿತಿ ಇಡೀ ದೇಶವನ್ನು ಈಗ ಆವರಿಸುತ್ತಿರುವಂತೆ ಕಾಣುತ್ತಿರುವ ಆರೋಗ್ಯ ತುರ್ತು ಪರಿಸ್ಥಿತಿಯ ಒಂದು ಚಿತ್ರವಷ್ಟೇ. ಇದಕ್ಕೆ ಹೋಲಿಸಿದಾಗ ಕೇರಳದಲ್ಲಿ ಆಕ್ಸಿಜನ್ ನ ಹೆಚ್ಚುವರಿ ಪೂರೈಕೆ ಕೆಲವಾದರೂ ಪತ್ರಿಕೆಗಳ ಗಮನವನ್ನು ಸೆಳೆದಿದೆ.
ಅಲ್ಲದೆ ವೈದ್ಯಕೀಯ ಆಕ್ಸಿಜನ್ ಅವಲಂಬನೆಯ ಪ್ರಮಾಣವೂ ಕೇರಳದ ಸೋಂಕಿತರಲ್ಲಿ ಬೇರೆಡೆಗಳಿಗೆ ಹೋಲಿಸಿದರೆ ಕಡಿಮೆ ಎಂದೂ ಪಿ.ಇ.ಎಸ್.ಒ. ಉಪ ಮುಖ್ಯ ನಿಯಂತ್ರಕರು ಹೇಳಿರುವುದು ಕೂಡ ಗಮನಾರ್ಹ.
ಇದು ಕೂಡ ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆಗಳ ವ್ಯಾಪಕತೆ ಮತ್ತು ದಕ್ಷತೆಯ ಪರಿಣಾಮ ಎಂದು ಪರಿಣಿತರು ಹೇಳುತ್ತಾರೆ.