ಆಕ್ಸಿಜನ್‌ ಬೇಡಿಕೆ ತಗ್ಗಿಸಲು ವೆಂಟಿಲೇಟರ್‌ ಅಳವಡಿಕೆ: ಸುಧಾಕರ್

ಬೆಂಗಳೂರು: ಕೋವಿಡ್‌ ನಿವಾರಣೆಗಾಗಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ  ಆಕ್ಸಿಜನ್ ಬೇಡಿಕೆಯನ್ನು ತಗ್ಗಿಸಲು ಪರ್ಯಾಯವಾಗಿ ವೆಂಟಿಲೇಟರ್ ಅಳವಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಇಂದು ರಾಜ್ಯದ ಎಲ್ಲಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಭೆಯನ್ನು ನಡೆಸಿದ ನಂತರ ಮಾತನಾಡಿದ ಸಚಿವ ಸುಧಾಕರ್‌ ಅವರು ಮಧ್ಯಮ ಪ್ರಮಾಣದ ಲಕ್ಷಣಗಳಿರುವ ಕೋವಿಡ್ ಸೋಂಕಿತರಿಗೆ ನಿಮಿಷಕ್ಕೆ 20-60 ಲೀಟರ್ ಆಮ್ಲಜನಕ ಬೇಕಾಗುತ್ತದೆ. ಆಮ್ಲಜನಕದ ಕೊರತೆ ಇರುವುದರಿಂದ ಬೇರೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಎಚ್ ಎಫ್‍ಎನ್ ಒಗಿಂತ ಹೆಚ್ಚು ಪರಿಣಾಮಕಾರಿಯಾಗಿ ಎನ್‍ಐವಿ (ವೆಂಟಿಲೇಟರ್) ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಶೇ.80 ರಷ್ಟು ಆಕ್ಸಿಜನ್ ಬೇಡಿಕೆ ಕಡಿಮೆಯಾಗುತ್ತದೆ. ಎಚ್‍ಎಫ್‍ಎನ್ ಒ ಇರುವಲ್ಲಿ ಎನ್ ಐವಿ ವೆಂಟಿಲೇಟರ್ ಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.‌

ಇದನ್ನು ಓದಿ: ಲಸಿಕೆ ಲಸಿಕೆ ಲಸಿಕೆಗಾಗಿ ಶುರುವಾಗಿದೆ ಹಾಹಾಕಾರ, ಎರಡನೇ ಡೋಸ್‌ ಪಡೆಯಲು ಪರದಾಟ

ಕಳೆದ ಏಳೆಂಟು ತಿಂಗಳ ನಿರಂತರ ತಯಾರಿಯೊಂದಿಗೆ ಈಗಾಗಲೇ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೆಯೇ 6 ವೆಂಟಿಲೇಟರ್ ಅಳವಡಿಸಬೇಕೆಂದು ಕ್ರಮ ವಹಿಸಲಾಗಿದೆ. ಆದರೆ ಕೆಲ ಆಸ್ಪತ್ರೆಯಲ್ಲಿ ತಜ್ಞರು ಇಲ್ಲದೆ, ವೆಂಟಿಲೇಟರ್ ಇದ್ದರೂ ಆಕ್ಸಿಜನ್ ಮಾತ್ರ ಬಳಸಲಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಅರವಳಿಕೆ ತಜ್ಞರು, ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲು ಸೂಚಿಸಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಆದೇಶಿಸಲಾಗಿದೆ. ಒಂದು ವಾರದಲ್ಲಿ ಎಲ್ಲ ಕಡೆ ಅಳವಡಿಸಲು ಸೂಚನೆ ನೀಡಲಾಗಿದೆ. ಸಿಸಿಟಿವಿ ಅಳವಡಿಕೆಯಿಂದ ಬೆಡ್ ಗಳ ಸಮರ್ಪಕ ಬಳಕೆ ಬಗ್ಗೆ ಕೂಡ ನಿಗಾ ವಹಿಸಬಹುದು ಎಂದು ತಿಳಿಸಿದರು.

ಇದನ್ನು ಓದಿ: ಭಾರತೀಯರು ಕೊರೊನಾದಿಂದಷ್ಟೆ ಸಾಯುತ್ತಿಲ್ಲ – WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

ಪಾಸಿಟಿವ್ ಇಲ್ಲದಿದ್ದರೂ ರೋಗಲಕ್ಷಣ ಇದ್ದವರಿಗೆ ಕೋವಿಡ್ ಪಾಸಿಟಿವ್ ಎಂದೇ ಪರಿಗಣಿಸಿ ಚಿಕಿತ್ಸೆ ಕೊಡಲು ಸೂಚಿಸಲಾಗಿದೆ. ಮರಣ ಪ್ರಮಾಣ ಕೆಲ ಜಿಲ್ಲೆಗಳಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ತಿಳಿಯಬೇಕಿದೆ. ಪಾಸಿಟಿವ್ ಬಂದ ಕೂಡಲೇ ತಕ್ಷಣ ಚಿಕಿತ್ಸೆ ಆರಂಭಿಸಬೇಕಿದೆ. ರಾಜ್ಯದಲ್ಲಿ 33.09% ಪಾಸಿಟಿವಿಟಿ ದರ ಇದೆ. ಈ ದರವನ್ನು 5% ಕ್ಕೆ ಇಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಯ ಪರಿಸ್ಥಿತಿ ಹಾಗೂ ಮನೆಗಳಲ್ಲೆ ಆರೈಕೆ ಪಡೆಯುತ್ತಿರುವವರ ಬಗ್ಗೆ ಮತ್ತು ಮುಂತಾದ ಕೆಲವು ಮಹತ್ವ ವಿಚಾರಗಳ ಬಗ್ಗೆಯೂ ಸಭೆಯಲ್ಲಿ ಮಾಹಿತಿ ಪಡೆದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *