ಲಕ್ನೋ : ಸಾಮಾಜಿಕ ಮಾಧ್ಯಮಗಳಲ್ಲಿ ಆಮ್ಲಜನಕ ಪೂರೈಸಬೇಕೆಮದು ಅಂಗಲಾಚುತ್ತಿರುವ ಸುದ್ದಿಗಳು ವೈರಲ್ ಆಗುತ್ತಿವೆ. ಬಡ ಜನರು ತಮ್ಮ ಆತ್ಮೀಯರ ಪ್ರಾಣ ಉಳಿಸಿಕೊಳ್ಳಲು ಪಡುತ್ತಿರುವ ಹೃದಯ ವಿದ್ರಾವಕ ಸನ್ನಿವೇಶಗಳು ಸಂಭವಿಸುತ್ತಿವೆ. ಆಸ್ಪತ್ರೆಗಳಿಗೆ ಆಮ್ಲಜನಕ ಕೊರತೆ ಎದುರಾಗಿ ಕೋವಿಡ್ ರೋಗಿಗಳು ಸಾವನ್ನಪ್ಪುತ್ತಿರುವುದು ಅಪರಾಧ ಕೃತ್ಯವಾಗಿದ್ದು ಇದು ನರಮೇಧಕ್ಕಿಂತ ಕಡಿಮೆ ಏನಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಮೇ 04ರಂದು ವಿಚಾರಣೆ ಕೈಗೊಂಡ ನ್ಯಾಯಾಲಯವು ಉತ್ತರ ಪ್ರದೇಶ ಸರಕಾರ ಹಾಗೂ ಅಧಿಕಾರಿಗಳ ಮೇಲೆ ತೀವ್ರವಾದ ಆರೋಪ ಮಾಡಿದೆ. ಉತ್ತರ ಪ್ರದೇಶದಲ್ಲಿ ಕೋವಿಡ್ ಬಿಕ್ಕಟ್ಟಿನ ಕುರಿತಂತೆ ಕಳೆದ ತಿಂಗಳುಗಳ ಹಿಂದೆ ದಾಖಲಾಗಿದ್ದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ವೇಳೆ ಈ ಆದೇಶವನ್ನು ನ್ಯಾಯಾಲಯ ನೀಡಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಅಧಿಕಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಆಕ್ಸಿಜನ್ ಕೊರತೆಯೂ ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತಿರುವ ಸಂದರ್ಭದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಕುರಿತು ಬೇಸರ ವ್ಯಕ್ತಪಡಿಸಿದೆ.
ತಮ್ಮವರ ಜೀವವನ್ನು ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್ ಗಳಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಆಕ್ಸಿಜನ್ ಕೇಳಲು ಬಂದ ಬಡ ಜನರಿಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಹಲವು ವಿಡಿಯೋಗಳು ವೈರಲ್ ಆಗಿವೆ ಎಂದು ನ್ಯಾಯಾಲಯ ಕಿಡಿಕಾರಿದೆ.
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿ ಅತೀವ ನೋವಿನೊಂದ ಜನ ಸಾಯುತ್ತಿರುವುದನ್ನು ಕಂಡು ತುಂಬಾ ಬೇಸರ ತರಿಸಿದೆ. ಆಕ್ಸಿಜನ್ ನಿರಂತರ ಸಂಗ್ರಹಣೆ ಹಾಗೂ ಪೂರೈಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮೇಲೆ ಹೊಣೆ ಹೊರಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಅಜಿತ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿದೆ.