ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಿಕಾ ಟೆಲಿಕಾಂ ಕಂಪನಿ ಶಿವೋಮಿ ಘಟಕದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದ್ದು, ಬರೋಬ್ಬರಿ ₹5,551 ಕೋಟಿ ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆದಿದ್ದು, 1999ರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಶಿವೋಮಿಯ ನಾಲ್ಕು ಬ್ಯಾಂಕ್ಗಳ ಖಾತೆಯಲ್ಲಿದ್ದ ₹ 5,551ರಷ್ಟು ಮೊತ್ತದ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ ಕಳೆದ ಒಂದು ತಿಂಗಳ ಕಾಲ ಸುದೀರ್ಘ ತನಿಖೆ ನಡೆಸಿದ್ದು, ಇದೀಗ ಭಾರೀ ಮೊತ್ತದ ಹಣ ವಶಪಡಿಸಿಕೊಂಡಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಟಾಪ್ ಮೊಬೈಲ್ ಫೋನ್ ಬ್ರ್ಯಾಂಡ್ಗಳಲ್ಲಿ ಶಿವೋಮಿ ಕೂಡ ಒಂದಾಗಿದ್ದು, ಭಾರತದಲ್ಲಿ ಇದು ವಾರ್ಷಿಕ ₹34,000 ಕೋಟಿ ವಹಿವಾಟು ನಡೆಸುತ್ತಿದೆ.
ದಾಳಿ ಬಳಿಕ ಮಾತನಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಹೆಚ್ಚಿನ ಹಣವನ್ನ ಕಂಪನಿ ಈಗಾಗಲೇ ಚೀನಾದಲ್ಲಿರುವ ತನ್ನ ಸಮೂಹ ಸಂಸ್ಥೆಗಳಿಗೆ ರವಾನೆ ಮಾಡಿದೆ. ಸದ್ಯ ₹5,551 ಕೋಟಿ ಮೊತ್ತವು ಹೆಚ್‌ಎಸ್‌ಬಿಸಿ, ಸಿಟಿ ಬ್ಯಾಂಕ್, ಐಡಿಬಿಐ ಬ್ಯಾಂಕ್ನಿಂದ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ.
ಚೀನಾ ಮೂಲದ ಶವೋಮಿ ಭಾರತದಲ್ಲಿ 2014ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ನಿಂಬಧನೆಗಳು ಮುರಿದಿರುವುದಾಗಿ ತಿಳಿದು ಬಂದಿದೆ.
ಈ ಕಂಪನಿ ₹5551.27 ಕೋಟಿಗಳಷ್ಟು ಹಣವನ್ನು ರಾಯಧನದ ರೂಪದಲ್ಲಿ ಶಿಯಾಮಿ ಗ್ರೂಪ್ ಸೇರಿ ಒಟ್ಟು ಮೂರು ವಿದೇಶಿ ಮೂಲದ ಘಟಕಗಳಿಗೆ ರವಾನೆ ಮಾಡಿದೆ ಎಂದು ಹೇಳಲಾಗಿದೆ. ಚೀನಾದಲ್ಲಿರುವ ಮಾತೃಸಂಸ್ಥೆಯ ಸೂಚನೆಯ ಮೇರೆಗೇ ಈ ಹಣವರ್ಗಾವಣೆಯಾಗಿದೆ ಎನ್ನಲಾಗಿದೆ.
ಶಿಯೋಮಿ ಇಂಡಿಯಾವು ಭಾರತದಲ್ಲಿ ಎಂಐ ಎಂಬ ಹೆಸರಿನಲ್ಲಿ ಮೊಬೈಲ್ ಫೋನ್ಗಳ ವ್ಯಾಪಾರ, ವಿತರಣೆ ಮಾಡುತ್ತಿದೆ. ಇದು ಭಾರತದ ಉತ್ಪಾದನಾ ಘಟಕಗಳೇ ತಯಾರಿಸಿದ ಮೊಬೈಲ್ ಸೆಟ್ ಮತ್ತು ಅದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಖರೀದಿಸುತ್ತಿತ್ತು. ಶಿಯೋಮಿ ಇಂಡಿಯಾ ಯಾವ ಮೂರು ವಿದೇಶಿ ಘಟಕಗಳಿಗೆ ಹಣ ವರ್ಗಾವಣೆ ಮಾಡಿದೆಯೋ, ಅವುಗಳಿಂದ ಯಾವುದೇ ಸೇವೆಯನ್ನೂ ಪಡೆದಿಲ್ಲ, ಏನನ್ನೂ ಖರೀದಿ ಮಾಡಿಲ್ಲ ಎಂದೂ ಇ.ಡಿ. ಹೇಳಿದೆ.