ಮೂರು ವರ್ಷದಲ್ಲಿ ಯುಎಪಿಎ ಅಡಿ ಬಂಧಿಸಲ್ಪಟ್ಟ ಶೇ.50ಕ್ಕೂ ಹೆಚ್ಚಿನವರು 30 ವರ್ಷಕ್ಕಿಂತ ಕೆಳಗಿನವರು: ಕೇಂದ್ರ ಸರಕಾರ

ನವದೆಹಲಿ: ದೇಶದಲ್ಲಿ 2018 ರಿಂದ 2020 ನಡುವೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧನಕ್ಕೊಳಗಾದವರ ಪೈಕಿ ಶೇಕಡಾ 50ಕ್ಕೂ ಹೆಚ್ಚಿನವರು 30 ವರ್ಷಕ್ಕಿಂತ ಕೆಳಗಿನವರು ಎಂದು ಸಂಸತ್ತಿಗೆ ಕೇಂದ್ರ ಸರಕಾರ ಮಾಹಿತಿ ನೀಡಿದೆ.

ಸಂಸದರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸಚಿವ ನಿತ್ಯಾನಂದ ರೈ ನೀಡಿದ ಉತ್ತರದಲ್ಲಿ ಮೇಲಿನ ಮಾಹಿತಿ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಈ  ಕಾಯ್ದೆಯಡಿ 4,690 ಜನರನ್ನು ಬಂಧಿಸಲಾಗಿದೆ. ಇವರ ಪೈಕಿ 2,501 ಮಂದಿ ಅಥವಾ ಶೇಕಡಾ 53.32ರಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ 1,338 ಮಂದಿಯನ್ನು ಬಂಧಿಸಲಾಗಿದೆ. ಇವುಗಳ ಪೈಕಿ 931 ಮಂದಿ ಅಥವಾ ಶೇ.69.5ರಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.

ಯುಎಪಿಎ ಬಂಧನಗಳಲ್ಲಿ ಉತ್ತರ ಪ್ರದೇಶದ ನಂತರ ಮಣಿಪುರ ಎರಡನೇ ಸ್ಥಾನದಲ್ಲಿದ್ದು ಇಲ್ಲಿ ಕಳೆದ ಮೂರು ವರ್ಷಗಳಲ್ಲಿ 943 ಮಂದಿಯನ್ನು ಬಂಧಿಸಲಾಗಿದೆ. ಇವರ ಪೈಕಿ 499 ಮಂದಿ 30 ವರ್ಷಕ್ಕಿಂತ ಕೆಳಗಿನವರು.

ಜಮ್ಮು-ಕಾಶ್ಮೀರ ಮೂರನೇ ಸ್ಥಾನದಲ್ಲಿದ್ದು 750 ಮಂದಿಯನ್ನು ಈ ಕಾಯ್ದೆಯಡಿ ಬಂಧಿಸಲಾಗಿದ್ದು ಇವರ ಪೈಕಿ 366 ಮಂದಿ 30 ವರ್ಷಕ್ಕಿಂತ ಕೆಳಗಿನವರು ಎಂದು ಮಾಹಿತಿಯಲ್ಲಿ ಉಲ್ಲೇಖಿಸಿದೆ.

ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟವರಲ್ಲಿ ಬಿಹಾರ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 2019ಕ್ಕೆ ಹೋಲಿಸಿದರೆ 2020 ರಲ್ಲಿ ಹೆಚ್ಚಳವಾಗಿದೆ.

ಯುಎಪಿಎ ಅಡಿಯಲ್ಲಿರುವ ಪ್ರಕರಣಗಳನ್ನು ರಾಜ್ಯ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತದೆ. ಎನ್‌ಐಎಗೆ ಸಂಬಂಧಿಸಿದಂತೆ, ಎನ್‌ಐಎ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಇದುವರೆಗೆ ದೇಶಾದ್ಯಂತ 49 ವಿಶೇಷ ನ್ಯಾಯಾಲಯಗಳನ್ನು ಗೊತ್ತುಪಡಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *