ಒಂದು ದೇಶದ ಅಭಿವೃದ್ಧಿ ಆ ದೇಶದ ಉನ್ನತ ಶಿಕ್ಷಣ ಮಟ್ಟವನ್ನು ಅವಲಂಬಿಸಿರುತ್ತೆ ಎನ್ನೋ ಮಾತಿದೆ. ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿದಂತೆಲ್ಲಾ ಉತ್ತಮ ಸಂಶೋಧನೆಗಳು ನಡೆದು, ಸಮಾಜಕ್ಕೆ ಅಪಾರ ಕೊಡುಗೆ ಸಿಕ್ಕಿದರೆ ದೇಶದ ಅಭ್ಯುದಯಕ್ಕೂ ನೆರವಾಗುತ್ತೆ. ಹಾಗಾಗಿಯೇ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣವನ್ನು ಉನ್ನತೀಕರಿಸುವ ಕೇಂದ್ರಗಳಾಗಿ ಗುರ್ತಿಸಿಕೊಂಡಿವೆ. ಆದರೆ, ಇತ್ತೀಚೆಗೆ ಸರ್ಕಾರಗಳ ನಿರ್ಲಕ್ಷ್ಯವೋ ಅಥವಾ ಖಾಸಗಿ ಲಾಭಿಯೋ ಸಾಕಷ್ಟು ವಿವಿ ಗಳು ಹೆಸರಿಗಷ್ಟೇ ಘೋಷಣೆಯಾಗಿದೆಯಾ ಎನ್ನೊ ಅನುಮಾನ ಮೂಡುತ್ತೆ. ಇಂತಹ ಅನುಮಾನಕ್ಕೆ ಕಾರಣ ಹಾಸನದ ವಿಶ್ವವಿದ್ಯಾಲಯ. 2023ರ ಮಾರ್ಚ್ ನಿಂದ ಕಾರ್ಯಾರಂಭ ಮಾಡಿರೊ ಹಾಸನದ ವಿಶ್ವ ವಿದ್ಯಾಲಯ ಅಕ್ಷರಶಃ ಅನಾಥವಾಗಿದೆ. ಅನಾಥ
ಮಂಜುಶ್ರೀ ಜೆ.ಎಸ್ , ಹಾಸನ
ಎರಡು ವರ್ಷಗಳ ಹಿಂದೆ ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದ ಹಾಸನ ವಿವಿ ಕೇಂದ್ರವನ್ನು ಪ್ರತ್ಯೇಕಿಸಿ ಹೊಸ ವಿಶ್ವವಿದ್ಯಾಯಲವನ್ನು ಸೃಜನೆ ಮಾಡಲಾಗಿದೆ. ಸಹಜವಾಗಿಯೇ ಹಾಸನದ ವಿವಿ ಸ್ಥಾಪನೆ ಆದಾಗ ಎಲ್ಲರಿಗೂ ಖುಷಿಯಾಗಿತ್ತು. ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯತ್ತ ಸಾಗುತ್ತಿರೊ ಹಾಸನಕ್ಕೆ ಆಡಳಿತಾತ್ಮಕ ದೃಷ್ಟಿಯಿಂದ ಈ ವಿವಿ ನೆರವಾಗುತ್ತೆ ಎಂದೇ ಎಲ್ಲರೂ ಭಾವಿಸಿದ್ರು. ಆದ್ರೆ ವಾಸ್ತವವೇ ಬೇರೆಯಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಕೊನೆ ಬಜೆಟ್ ನಲ್ಲಿ ಘೋಷಣೆಯಾದ ಹಾಸನ ವಿವಿ ಹೆಸರಿಗಷ್ಟೇ ಸೀಮಿತವಾಗಿ, ಯಾವುದೇ ಅಭಿವೃದ್ಧಿ ಇಲ್ಲದೆ, ಅಭಿವೃದ್ಧಿಗೆ ಅನುದಾನ ಇಲ್ಲದೆ ಸೊರಗುತ್ತಿದೆ. ಕನಿಷ್ಟ ಆಡಳಿತಾತ್ಮಕ ಸೌಲಭ್ಯಗಳಿಲ್ಲದೆ ಅನಾಥವಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನಾಥ
ಬಾರದ ಅನುದಾನ ಸಿಗದ ಸೌಲಭ್ಯ:
2023ರ ಮಾರ್ಚ್ ವರೆಗೂ ಮೈಸೂರು ವಿವಿ ವ್ಯಾಪ್ತಿಗೆ ಸೇರಿದ್ದ ಹಾಸನ ಜಿಲ್ಲೆ ಪದವಿ ಹಾಗು ಸ್ನಾತಕೋತ್ತರ ಕಾಲೇಜುಗಳು, ಹಾಸನ ವಿವಿ ಸ್ಥಾಪನೆ ಬಳಿಕ ಹಾಸನ ವಿವಿ ವ್ಯಾಪ್ತಿಗೆ ಸೇರಿಕೊಂಡಿದೆ. 22 ಸರ್ಕಾರಿ, 20 ಖಾಸಗಿ, 2 ಸ್ವಾಯತ್ತ ಪದವಿ ಕಾಲೇಜುಗಳು, 2 ವಿವಿ ಕೇಂದ್ರಗಳು ಸೇರಿ 54 ಪದವಿ ಕಾಲೇಜುಗಳು, 16 ಸ್ನಾತಕೋತ್ತರ ಕಾಲೇಜು ಸೇರಿ ಒಟ್ಟು 70 ಕಾಲೇಜುಗಳು ಈ ವಿವಿ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಇವುಗಳಲ್ಲಿ ಸರಿಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಬ್ಯಾಸ ಮಾಡುತ್ತಿದ್ದಾರೆ. ಅನಾಥ
ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋ: ಶೇ.95ರಷ್ಟು ಕಾಮಗಾರಿ ಪೂರ್ಣ, ಮುಂದಿನ ವರ್ಷ ಸಂಚಾರ ಆರಂಭ..?
ಇಷ್ಟೆಲ್ಲ ಕಾಲೇಜುಗಳು ಈ ವಿವಿ ವ್ಯಾಪ್ತಿಗೆ ಸೇರಿದ್ದರೂ ಆಡಳಿತಾತ್ಮಕವಾಗಿ ಯಾವುದೇ ಸೌಲಭ್ಯಗಳನ್ನು ಸರ್ಕಾರ ಮಾಡಿಕೊಟ್ಟಿಲ್ಲ. ಕೇವಲ ಉಪಕುಲಪತಿಗಳನ್ನು ನೇಮಿಸಿ, ಕುಲ ಸಚಿವರೊಬ್ಬರನ್ನು ನೇಮಕ ಮಾಡಿ ಕೈತೊಳೆದುಕೊಂಡಿದ್ದು, ಇಲ್ಲಿಗೆ ನೇಮಕವಾಗಿರೊ ಉಪಕುಲಪತಿಗಳು ಹಾಗೂ ಕುಲ ಸಚಿವರು ದಿಕ್ಕೆಟ್ಟು ಹೋಗಿದ್ದಾರೆ. ವಿವಿ ಆಡಳಿತ ಕೇಂದ್ರವಿರುವ ಹಾಸನದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಕನಿಷ್ಟ 300 ಸಿಬ್ಬಂದಿ ಬೇಕು. ಆದರೆ, ಹಾಸನ ವಿವಿ ಕೇಂದ್ರದಲ್ಲಿ ಇರುವ ಸಿಬ್ಬಂದಿ ಕೇವಲ 10 ಜನರು. ಇವರೆಲ್ಲಾ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು. ಎರಡು ವರ್ಷಗಳಿಂದ ಕನಿಷ್ಟ ಸೌಲಭ್ಯಗಳಿಲ್ಲದೆ, ಪರೀಕ್ಷೆಗಳನ್ನು ನಡೆಸಲಾಗದೆ, ಕಾಲೇಜುಗಳ ಆಡಳಿತಾತ್ಮಕ ಹೊಣೆಗಾರಿಕೆ ನಿರ್ವಹಣೆ ಮಾಡಲಾಗದೆ ವಿವಿ ಕೇಂದ್ರ ನಲುಗುತ್ತಿದೆ. ಅನಾಥ
ಆಡಳಿತಾತ್ಮಕ ವಿಭಾಗಕ್ಕೆ ಸೌಲಭ್ಯಗಳ ಕೊರತೆ:
ಜಿಲ್ಲಾ ಕೇಂದ್ರ ಹಾಸನದ ಬೆಂಗಳೂರು ರಸ್ತೆಯಲ್ಲಿರುವ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರವನ್ನೇ ಕೇಂದ್ರವಾಗಿರಿಸಿ ಸರ್ಕಾರ ಹಾಸನ ವಿವಿಯನ್ನು ಘೋಷಣೆ ಮಾಡಿತ್ತು. ಆದರೆ, ಹೊಸದಾಗಿ ಸ್ಥಾಪನೆಯಾದ ವಿವಿ ಕೇಂದ್ರಕ್ಕೆ ಓರ್ವ ಉಪ ಕುಲಪತಿಗಳು, ಕುಲ ಸಚಿವರು, ಪರಿಕ್ಷಾಂಗದ ಕುಲ ಸಚಿವರು ಹೀಗೆ ಹಲವು ಹುದ್ದೆಗಳು ಸೃಷ್ಟಿಯಾದರೂ ಈವರೆಗೆ ಒಂದೇ ಒಂದು ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಬೋಧನಾ ಕೊಠಡಿಗಳೇ ಇಲ್ಲಿನ ಅಧಿಕಾರಿಗಳಿಗೆ ಕಛೇರಿಗಳಾಗಿವೆ. ಕನಿಷ್ಟ ಕೂರಲು ಒಂದು ಕಛೇರಿಗಳಿಲ್ಲ. ಕಂಪ್ಯೂಟರ್ ಗಳಿಲ್ಲದೆ ಅಧಿಕಾರಿಗಳು ತಮ್ಮ ಪರ್ಸನಲ್ ಲ್ಯಾಪ್ ಟಾಪ್ ಗಳನ್ನು ಬಳಸಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗಳಿಲ್ಲದೆ ತಾವೇ ಅಧಿಕಾರಿಗಳಾಗಿ, ಕ್ಲರ್ಕ್ ಗಳಾಗಿ ದುಡಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕೇವಲ ಯೂನಿವರ್ಸಿಟಿಯನ್ನು ಘೋಷಣೆ ಮಾಡಿದ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ. ಈಗಾಗಲೆ ನಾಲ್ಕು ಸೆಮಿಸ್ಟರ್ ಗಳನ್ನು ನಡೆಸಿರೊ ಈ ವಿವಿಗೆ ಪರಿಕ್ಷಾಂಗ ವಿಭಾಗಕ್ಕೆ ಈವರೆಗೆ ಓರ್ವ ಪರಿಕ್ಷಾಂಗ ವಿಭಾಗದ ಕುಲ ಸಚಿವರ ನೇಮಕವೇ ಆಗಿಲ್ಲ. ಎಲ್ಲವನ್ನು ಕುಲ ಸಚಿವರೇ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಅನಾಥ
ಪರೀಕ್ಷೆ ನಡೆಸಲು ವ್ಯವಸ್ಥೆ ಇಲ್ಲ, ನಡೆದ ಪರೀಕ್ಷಾ ಪತ್ರಿಕೆ ಮೌಲ್ಯಮಾಪನಕ್ಕೆ ವ್ಯವಸ್ಥೆಯೂ ಇಲ್ಲ:
ಒಂದು ವಿವಿ ಕೇಂದ್ರ ಎಂದರೆ ಆಡಳಿತಾತ್ಮಕವಾಗಿ ಬೇಕಾದ ಎಲ್ಲಾ ವ್ಯವಸ್ಥೆಗಳು ಇರಬೇಕು. ಯಾವುದೇ ಸಿದ್ದತೆ ಇಲ್ಲದೆ ವಿವಿಯನ್ನು ಘೋಷಣೆ ಮಾಡಲಾಗಿದೆ. ಆದರೆ, ವಿವಿ ಕಾರ್ಯಾರಂಭವಾದ ಬಳಿಕವಾದರೂ ಸರ್ಕಾರ ಅಗತ್ಯ ಸೌಲಭ್ಯಕ್ಕಾಗಿ ಅನುದಾನ ನೀಡಿಲ್ಲ. ಎರಡು ವರ್ಷಗಳಿಂದ ಇಲ್ಲಿನ ಜವಾಬ್ದಾರಿ ವಹಿಸಿಕೊಂಡ ಉನ್ನತಾಧಿಕಾರ ಹೊಂದಿದವರು ವಿವಿ ಆಡಳಿತ ನಡೆಸಲು ಹೆಣಗಾಡುತ್ತಿದ್ದಾರೆ. 20,000 ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್ ಗೆ ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆ ನಡೆಸಿದ ಪತ್ರಿಕೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸ್ಟ್ರಾಂಗ್ ರೂಂ ವ್ಯವಸ್ಥೆ ಕೂಡ ವಿವಿಗೆ ಇಲ್ಲ. ಇಷ್ಟಲ್ಲದೆ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಪರಿಕ್ಷಾ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಬೇಕಾದ ದೊಡ್ಡ ಕೊಠಡಿಯಾಗಲಿ ಅಥವಾ ಇನ್ಯಾವುದೇ ಪರ್ಯಾಯ ವ್ಯವಸ್ಥೆಯಾಗಲೀ ಇಲ್ಲ. ಆದರೂ ಇದೊಂದು ಪ್ರತ್ಯೇಕ ವಿವಿ ಆಗಿರುವ ಕಾರಣಕ್ಕೆ ಇವೆಲ್ಲವನ್ನು ಮಾಡಲೇ ಬೇಕಿದೆ. ಅನಾಥ
ಇಷ್ಟೆಲ್ಲಾ ಸಮಸ್ಯೆಗಳು ಇದ್ದಾಗ್ಯೂ, ಪ್ರತಿಭಾರಿ ಸಭೆಗಳಲ್ಲಿ ಇದನ್ನು ಗಮನಕ್ಕೆ ತಂದಾಗ್ಯೂ ಕೂಡ ಈವರೆಗೆ ಯಾವುದೇ ವ್ಯವಸ್ಥೆಗಳಾಗಿಲ್ಲ ಎನ್ನೋದು ದುರಂತ. ಈಗ ಮತ್ತೆ ಪರೀಕ್ಷೆ ಸಮಯ ಬಂದಿದೆ. ಪರೀಕ್ಷೆ ನಡಸಲು ಉತ್ತರ ಪತ್ರಿಕೆಗಳ ಖರೀದಿಯೂ ಆಗಿದೆ. ಆದರೆ, ಉತ್ತರ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಇಡೋದು ಎಲ್ಲಿ, ಮೌಲ್ಯ ಮಾಪನ ಮಾಡೋದು ಎಲ್ಲಿ ಎನ್ನೋ ಟೆನ್ಷನ್ ಮತ್ತೆ ಶುರುವಾಗಿದೆ. 20 ಸಾವಿರ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅನಾಥ
ನೇಮಕವಾಗದ ಪೂರ್ಣ ಪ್ರಮಾಣದ ಸಿಂಡಿಕೇಟ್:
ಉನ್ನತ ಶಿಕ್ಷಣ ಸಂಸ್ಥೆಗಳು ಅಂದ್ರೆ ಶೈಕ್ಷಣಿಕವಾಗಿ ಬಹುತೇಕ ಸ್ವಾಯತ್ತತೆ ಹೊಂದಿರೊ ಕೇಂದ್ರಗಳು. ಇದರ ಆಡಳಿತ ವ್ಯವಸ್ಥೆಯನ್ನು ಉಪ ಕುಲಪತಿಗಳು, ಕುಲ ಸಚಿವರು ನೋಡಿಕೊಂಡರೂ ಕೂಡ ವಿವಿಗಳ ಸಿಂಡಿಕೇಟ್ ಗಳು ಇದರ ಅತ್ಯುನ್ನತ ಆಡಳಿತ ಮಂಡಳಿ ಆಗಿರುತ್ತವೆ. ವಿವಿಯ ಎಲ್ಲಾ ವಿಚಾರಗಳು ಇಲ್ಲಿ ಚರ್ಚೆಯಾಗಿಯೇ ಅಂತಿಮವಾಗುತ್ತವೆ. ದುರಂತ ಎಂದರೆ ಹಾಸನದ ವಿವಿ ಸ್ಥಾಪನೆಯಾಗಿ ಎರಡು ವರ್ಷವಾದರೂ ಹಾಸನ ವಿವಿಗೆ ಪೂರ್ಣ ಪ್ರಮಾಣದ ಒಂದು ಸಿಂಡಿಕೇಟ್ ಕೂಡ ರಚನೆ ಆಗಿಲ್ಲ. ರಾಜ್ಯಪಾಲರಿಂದ ನೇಮಕವಾದ ಇಬ್ಬರು ಸಿಂಡಿಕೇಟ್ ಮೆಂಬರ್ ಬಿಟ್ಟರೆ, ನಾಲ್ವರು ಪ್ರಾಂಶುಪಾಲರು ಹಾಗು ಉಪಕುಲಪತಿ ಹಾಗು ಕುಲ ಸಚಿವರು ಮಾತ್ರ ಇದ್ದು, ಇನ್ನೂ ನಾಲ್ವರು ಸಿಂಡಿಕೇಟ್ ಮೆಂಬರ್ ಗಳ ನೇಮಕವಾಗದೆ ಸಿಂಡಿಕೇಟ್ ಸಭೆಗಳು ಕೂಡ ಸರಿಯಾಗಿ ಆಗ್ತಿಲ್ಲ. ಹಾಗಾಗಿಯೇ ವಿವಿ ಕೂಡ ಅಭಿವೃದ್ಧಿ ಪಥದಲ್ಲಿ ಸಾಗುತ್ತಿಲ್ಲ ಎನ್ನೋ ಮಾತು ಕೇಳಿ ಬರ್ತಿದೆ. ಅನಾಥ
ಹಾಸನದ ವಿವಿ ಬಗ್ಗೆ ತಲೆ ಕೆಡಿಸಿಕೊಳ್ಳದ ಜಿಲ್ಲೆಯ ಜನಪ್ರತಿನಿಧಿಗಳು ಹಾಸನಕ್ಕೆ ಒಂದು ವಿವಿ ಬರಬೇಕು, ಹಾಸನದಲ್ಲಿರೊ ದೊಡ್ಡ ಸಂಖ್ಯೆಯ ಕಾಲೇಜುಗಳ ಆಡಳಿತಾತ್ಮಕ ದೃಷ್ಟಿಯಿಂದ ಇದು ಅನುಕೂಲ ಎನ್ನುವ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಇದು ನೆರವಾಗುತ್ತೆ ಎಂದೇ ಭಾವಿಸಿದ್ರು. ಆದ್ರೆ ವಿವಿ ಘೋಷಣೆಯಾಗಿ ಕಾರ್ಯಾರಂಭ ಮಾಡಿದ ಬಳಿಕ ಆಗ್ತಿರೋದೆ ಬೇರೆ. ವಿವಿಯ ಅಭಿವೃದ್ಧಿ ಆಗೋದಿರಲಿ, ಅರಳುವ ಮುನ್ನವೇ ವಿವಿ ಕೇಂದ್ರ ನಲುಗಿ ಹೋಗ್ತಿದೆ. ಅಭಿವೃದ್ಧಿ ಆಗೋ ಬದಲು ಮತ್ತೆ ಹಾಸನ ವಿವಿ ರದ್ದು ಮಾಡಿ ಹಾಸನ ಜಿಲ್ಲೆಯನ್ನು ಮೈಸೂರು ವಿವಿ ವ್ಯಾಪ್ತಿಗೆ ಸೇರಿಸಬೇಕೇ ಎನ್ನೋ ಚರ್ಚೆ ಕೂಡ ಆರಂಭವಾಗಿದೆ ಎನ್ನೋ ಮಾತುಗಳು ಕೇಳಿ ಬರ್ತಿದೆ.
ಹಾಸನದ ವಿವಿಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯಾಗಲಿ, ಸಂಘ ಸಂಸ್ಥೆಗಳಾಗಲಿ, ಉನ್ನತ ಶಿಕ್ಷಣದ ಬಗ್ಗೆ ಆಸಕ್ತಿ ಇರುವವರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಊರ ಹೊರಗಿರುವ ವಿವಿ ಕೇಂದ್ರ ಅನಾಥವಾಗಿ ದಿನದಿಂದ ದಿನಕ್ಕೆ ಯಾವುದೇ ಸೌಲಭ್ಯಗಳಿಲ್ಲದೆ, ಕನಿಷ್ಟ ಅಭಿವೃದ್ಧಿ ಇಲ್ಲದೆ ನರಳುತ್ತಿದ್ದು, ಇನ್ನಾದ್ರು ಸರ್ಕಾರ ಹಾಸನದ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಆಧ್ಯತೆ ನಿಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ನೋಡಿ: ಬಹುರೂಪಿ : ಶರಣ ಚಳವಳಿಯ ಕನ್ನಡಿಯಲ್ಲಿ ವರ್ತಮಾನದ ಬಿಕ್ಕಟ್ಟುಗಳು ಹಾಗೂ ಬಿಡುಗಡೆಯ ದಾರಿ Janashakthi Media