ಬೆಂಗಳೂರು: ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಯು ಬಿಜೆಪಿಯವರ ಕಣ್ಣೊರೆಸುವ ತಂತ್ರವಷ್ಟೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಗೆ ನಿಜವಾಗಿಯೂ ಸರಿಯಾಗಿ ಮೀಸಲಾತಿ ಕೊಡಬೇಕು ಎಂದಿದ್ದರೆ ಎರಡು ದಿನದ ವಿಶೇಷ ಅಧಿವೇಶನ ಕರೆದು ಬಿಲ್ ಪಾಸ್ ಮಾಡಿ 9ನೇ ಪರಿಚ್ಛೇದಕ್ಕೆ ಸೇರಿಸಬಹುದಿತ್ತು. ಕೇಂದ್ರದಲ್ಲೂ ಇವರದ್ದೇ ಸರ್ಕಾರ ಇದ್ದು ಸುಲಭ ಆಗುತ್ತಿತ್ತು ಎಂದು ಹೇಳಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಸಮಿತಿ ಮಾಡಿದ್ದು ನಮ್ಮ ಸರ್ಕಾರ. ವರದಿ ಬಂದು ಎಷ್ಟು ಸಮಯ ಆಯ್ತು. ಇವರಿಗೆ ಮೀಸಲಾತಿ ಕೊಡಬೇಕು ಎಂಬ ಇಚ್ಛೆ ಇದ್ದಿದ್ದರೆ ವರದಿ ಸಿಕ್ಕಿದ ಕೂಡಲೇ ಜಾರಿಗೆ ತರಬಹುದಿತ್ತು. ಈಗೇಕೆ ತರಾತುರಿಯಲ್ಲಿ ಸುಗ್ರೀವಾಜ್ಞೆ ತರಲಾಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವರದಿಯನ್ನು ಜಾರಿಗೆ ತರಬೇಕೆಂದು ಸದನದಲ್ಲಿಯೂ ನಾವು ನಿರಂತರವಾಗಿ ಮಾಡಿದ್ದೆವು. ಈಗ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇವರು ಸಾಮಾಜಿಕ ನ್ಯಾಯದ ಪರವಾಗಿಲ್ಲ. ನಮ್ಮ ಹೋರಾಟದ ಫಲವಾಗಿ ನ್ಯಾಯ ಸಿಕ್ಕಿದೆ ಎಂದರು.
ರಾಜ್ಯ ಸರ್ಕಾರ ಎಸ್‌ಸಿ ಎಸ್‌ಟಿ ಮೀಸಲಾಗಿ ಹೆಚ್ಚಳ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. ಗುರುವಾರ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತವೂ ಸಿಕ್ಕಿದೆ.
ದೆಹಲಿಗೆ ತೆರಳಿದ ಸಿದ್ದರಾಮಯ್ಯ
ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ಬುಧವಾರ ದೆಹಲಿಯಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ತೆರಳಿದರು.
ಮೀಸಲಾತಿ ಪ್ರಮಾಣ ಶೇ. 15 ರಿಂದ 17ಕ್ಕೆ ಏರಿಕೆ
ಕರ್ನಾಕಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ರೂಪಿಸಲಾಗಿರುವ ಕರಡು ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅಕ್ಟೋಬರ್ 20ರಂದು ಅನುಮೋದನೆ ನೀಡಿತ್ತು. ಈ ಸಂಬಂಧ ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಸುಗ್ರೀವಾಜ್ಞೆಗೆ ರಾಜ್ಯಪಾಲರು ಭಾನುವಾರ(ಅಕ್ಟೋಬರ್ 23) ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಇಂದು ಅಧಿಕೃತವಾದ ವಿಶೇಷ ರಾಜ್ಯಪತ್ರ ಪ್ರಕಟಿಸಲಾಗಿದೆ. ಈ ಮೂಲಕ ಇನ್ನು ಮುಂದೆ ಪರಿಶಿಷ್ಟರ ಜಾತಿ ಮೀಸಲಾತಿ ಪ್ರಮಾಣ ಶೇ. 15 ರಿಂದ 17ಕ್ಕೆ ಏರಲಿದ್ದು, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ. 3 ರಿಂದ 7ಕ್ಕೆ ಏರಿಸಲಾಗಿದೆ.