ಅನುಮತಿ ಪಡೆಯದೆ ಮಕ್ಕಳ ದಾಖಲಾತಿ : ಖಾಸಗಿ ಶಾಲೆ ವಿರುದ್ಧ ದೂರು ದಾಖಲು

ಬೆಂಗಳೂರು: ನಗರದ ಪ್ರತಿಷ್ಠಿತ ಆರ್ಕಿಡ್ ಇಂಟರ್​ನ್ಯಾಷನಲ್ ಶಿಕ್ಷಣ ಸಂಸ್ಥೆಯು ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿ ನಡೆಸುತ್ತಿರುವ ಶಾಲೆಗೆ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮತಿ ಪಡೆದುಕೊಂಡಿಲ್ಲ ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ.

ಶಾಲೆಯಲ್ಲಿ ಕಲಿಯುತ್ತಿದ್ದ ಸುಮಾರು 104 ಮಕ್ಕಳು ಮತ್ತು ಪೋಷಕರಲ್ಲಿ ಆತಂಕ ವ್ಯಕ್ತವಾಗಿದ್ದು, ಏನು ಮಾಡಬೇಕು ಎಂದು ತೋಚದ ಸ್ಥಿತಿ ತಲುಪಿದ್ದಾರೆ.

ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಆರಂಭಿಸಿರುವ ಶಾಲೆಯಲ್ಲಿ ಪ್ರಿ ನರ್ಸರಿಯಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಪೋಷಕರಿಂದ ಲಕ್ಷಾಂತರ ರೂಪಾಯಿ ಶುಲ್ಕ ಪಡೆದುಕೊಳ್ಳಲಾಗಿತ್ತು ಎಂದು ದೂರಲಾಗಿದೆ. ಶಾಲೆ ಅನುಮತಿ ಪಡೆದಿಲ್ಲ ಎನ್ನುವುದು ದೃಢಪಟ್ಟ ನಂತರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಬೆಂಗಳೂರು ಉತ್ತರ-1 ಶೈಕ್ಷಣಿಕ ವಿಭಾಗದ ಬಿಇಒ ರಮೇಶ್ ದೂರು ದಾಖಲಿಸಿದರು. ಶಾಲೆಯ ಪ್ರಾಂಶುಪಾಲರು ಮತ್ತು ಕಾರ್ಯದರ್ಶಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ಕಳಿಸಿದ್ದಾರೆ. ಎಫ್​ಐಆರ್ ದಾಖಲಾದ ನಂತರ ಶಾಲೆಯು ಮಕ್ಕಳಿಗೆ ರಜೆ ನೀಡಿದೆ.

ಶೈಕ್ಷಣಿಕ ವರ್ಷ ಆರಂಭವಾಗಿ ಹಲವು ತಿಂಗಳುಗಳೇ ಕಳೆದ ನಂತರ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಶಾಲೆಗೆ ಈಗಾಗಲೇ 104ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳ ಮುಂದಿನ ಪರಿಸ್ಥಿತಿ ಏನು ಎನ್ನುವ ಬಗ್ಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

ಎಫ್​ಐಆರ್​ನಲ್ಲಿ ಪೊಲೀಸರು ಶಾಲೆಯ ಕಾರ್ಯದರ್ಶಿ ಮತ್ತು ಪ್ರಾಚಾರ್ಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ‘ಶಾಲೆಯ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆಯ ಅನುಮತಿ ಪಡೆದಕೊಳ್ಳದೇ 2022-23ರ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ದಾಖಲಿಸಿಕೊಂಡು ಪೋಷಕರನ್ನು ವಂಚಿಸಿದೆ’ ಎಂದು ಬಿಇಒ ರಮೇಶ್ ಅವರು ದೂರಿನಲ್ಲಿ ಹೇಳಿದ್ದಾರೆ.

ದೂರಿನ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಆರ್ಕಿಡ್ಸ್ ಶಾಲೆಯು, ನಾವು ಅಗತ್ಯ ಅನುಮತಿ, ಲೈಸೆನ್ಸ್, ಅನುಮೋದನೆಗಾಗಿ ಕರ್ನಾಟಕದ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. ಇಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆ ಕಾಮಗಾರಿ, ಶಾಲೆಯ ಬ್ರಾಂಡ್ ನೇಮ್ ಕಾರಣಕ್ಕೆ ಹಲವು ಪೋಷಕರು ನಮ್ಮ ಶಾಲೆಗೆ ಮಕ್ಕಳನ್ನು ದಾಖಲಿಸಲು ಉತ್ಸಾಹ ತೋರಿದರು. ತೀರಾ ಇತ್ತೀಚೆಗಷ್ಟೇ ನಮ್ಮ ಅರ್ಜಿ ತಿರಸ್ಕೃತಗೊಂಡಿರುವ ಮಾಹಿತಿ ಲಭ್ಯವಾಯಿತು. ಕೆಲವು ಸ್ಪಷ್ಟನೆಗಳನ್ನು ಅಧಿಕಾರಿಗಳು ಕೋರಿದ್ದಾರೆ. ಅವನ್ನು ಒದಗಿಸಿದ ನಂತರ ನಮಗೆ ಶೀಘ್ರದಲ್ಲಿಯೇ ಅನುಮತಿ ಸಿಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳನ್ನು ಸಮೀಪದ ಆರ್ಕಿಡ್ಸ್ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಮಾಡಿದ್ದೇವೆ. ಮಕ್ಕಳ ಶಿಕ್ಷಣ ನಿಲ್ಲದಂತೆ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *