ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆರನೇ ನೇರ ಬಜೆಟ್ ಅನ್ನು ಗುರುವಾರ ಮಂಡಿಸಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಂಡಿಸಲಾಗಿರುವ ಈ ಬಜೆಟ್ ಬಗ್ಗೆ ವಿವಿಧ ವಲಯದಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಆಡಳಿತರೂಢ ಪಕ್ಷದ ನಾಯಕರು ಬಜೆಟ್ ಅನ್ನು ಪ್ರಶಂಸೆ ಮಾಡುತ್ತಿದ್ದು, ವಿಪಕ್ಷಗಳು ಇದನ್ನು ತೀವ್ರವಾಗಿ ಟೀಕಿಸಿವೆ. ಲೋಕಸಭೆ ಚುನಾವಣೆಯಲ್ಲಿ ಜನರನ್ನು ಸೆಳೆಯಲು ಬಜೆಟ್ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಿರ್ಮಲಾ ಸೀತಾರಾಮನ್ ಅವರು 2024 ರ ಬಜೆಟ್ ಮಂಡಿಸಿದ ನಂತರ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, “ಇದು ಉತ್ತೇಜಕ ಬಜೆಟ್ ಆಗಿದ್ದು, 2047 ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸುತ್ತೇವೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ” ಎಂದು ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವಾದ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸಲು ಈ ಬಜೆಟ್ ಮಾರ್ಗಸೂಚಿಯನ್ನು ರೂಪಿಸುತ್ತದೆ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: 16 ನೇ ಹಣಕಾಸು ಆಯೋಗಕ್ಕೆ 4 ಸದಸ್ಯರನ್ನು ನೇಮಿಸಿದ ಕೇಂದ್ರ ಸರ್ಕಾರ
ಬಜೆಟ್ ಯುವ ಭಾರತದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಈ ಮಧ್ಯಂತರ ಬಜೆಟ್ ಎಲ್ಲರನ್ನೂ ಒಳಗೊಳ್ಳುವ ಮತ್ತು ವಿನೂತ ಬಜೆಟ್ ಆಗಿದೆ. ಇದು ನಿರಂತರತೆಯ ವಿಶ್ವಾಸವನ್ನು ಹೊಂದಿದೆ. ಇದು ವಿಕ್ಷಿತ್ ಭಾರತ್‌ನ ಎಲ್ಲಾ ನಾಲ್ಕು ಸ್ತಂಭಗಳಾದ ಯುವ, ಗರೀಬ್, ಮಹಿಳಾ ಮತ್ತು ಕಿಸಾನ್ ಅನ್ನು ಸಶಕ್ತಗೊಳಿಸುತ್ತದೆ. ಈ ಬಜೆಟ್ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
ಅದಾಗ್ಯೂ, ಲೋಕಸಭೆ ಚುನಾವಣೆಯಲ್ಲಿ ಜನರನ್ನು ಸೆಳೆಯಲು ಬಜೆಟ್ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ಚೌಧರಿ ಹೇಳಿದ್ದು, “ಇದು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಬಜೆಟ್ ಆಗಿದೆಯೇ…” ಎಂದು ಪ್ರಶ್ನಿಸಿದ್ದಾರೆ. ಬಜೆಟ್ ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಜನರನ್ನು ಓಲೈಸಲು ಮಂಡಿಸಲಾಗಿದೆ ಹೊರತುಪಡಿಸಿ ಬೇರೇನೂ ಅಲ್ಲ ಎಂದು ಅವರು ಹೇಳಿದ್ದಾರೆ.
ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಮಾತನಾಡಿ, “ಈ ಬಜೆಟ್ ಪೊಳ್ಳಾಗಿದ್ದು, ಯುವಕರು, ಮಹಿಳೆಯರು, ರೈತರಿಗೆ ಏನೂ ನೀಡಿಲ್ಲ.. ಜುಲೈನಲ್ಲಿ ಬಜೆಟ್ ಮಂಡಿಸುತ್ತೇವೆ ಎಂದು ಹೇಳಿದಾಗ ದುರಹಂಕಾರ ಕಂಡಿದ್ದೇನೆ. ಯಾವುದೇ ಚುನಾವಣೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ಬಜೆಟ್ ಎಲ್ಲಿದೆ? ಎಂದು ಪ್ರಶ್ನಿಸಿದ್ದು, “ಇದರಲ್ಲಿ ಹೊಸದನ್ನು ಘೋಷಿಸಲಾಗಿದೆಯೇ? ರೈತರ ಮೇಲಿನ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲಾಗಿದೆಯೇ? ಹಣದುಬ್ಬರವನ್ನು ತಡೆಯಲು ಏನಾದರೂ ಮಾಡಲಾಗಿದೆಯೇ?” ಎಂದು ಅವರು ಹೇಳಿದ್ದಾರೆ.
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮಾತನಾಡಿ, “ಇದು ನಿರಾಶಾದಾಯಕ ಬಜೆಟ್. ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಉತ್ತುಂಗದಲ್ಲಿದೆ ಆದರೆ ಬಜೆಟ್‌ನಲ್ಲಿ ಅದರ ಬಗ್ಗೆ ಏನೂ ಹೇಳಿಯೆ ಇಲ್ಲ… ಇದು ಸಾಮಾನ್ಯ ಜನರಿಗೆ ನಿರಾಶಾದಾಯಕ ಬಜೆಟ್” ಎಂದು ಹೇಳಿದ್ದಾರೆ.
ಡಿಎಂಕೆ ಸಂಸದ ದಯಾನಿಧಿ ಮಾರನ್ ಪ್ರತಿಕ್ರಿಯಿಸಿ,”ಹಣಕಾಸು ಸಚಿವರು ಹೊಗಳಲು ಬಹಳ ಸಮಯ ತೆಗೆದುಕೊಂಡರು, ಆದರೆ ನೀಡಿದ್ದು ಶೂನ್ಯವಾಗಿದೆ. ಅವರು ಹಿಂದಿನ ಸರ್ಕಾರದ ಬಗ್ಗೆ ಶ್ವೇತಪತ್ರ ಮಂಡಿಸಲು ಹೊರಟಿದ್ದಾರೆ… ಕಳೆದ 10 ವರ್ಷಗಳಲ್ಲಿ ಏನೂ ಆಗಿಲ್ಲ. ದೇಶವು ಈಗಾಗಲೇ ನಿರಾಶೆಗೊಂಡಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಂತರ ಬಜೆಟ್ 2024 ಮುಖ್ಯಾಂಶಗಳು | ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದ ಹಣಕಾಸು ಮಂತ್ರಿ!
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಪ್ರತಿಕ್ರಿಯಿಸಿ “ಜುಲೈನಲ್ಲಿ ನಿಜವಾದ ಬಜೆಟ್ ಬರಲಿದೆ, ಜನರಿಗೆ ಪ್ರಯೋಜನವಾಗಲಿದೆ, ಪ್ರವಾಸೋದ್ಯಮ ಹೆಚ್ಚಾಗುತ್ತದೆ, ಕೈಗಾರಿಕೆಗಳು ಸಹ ಬೆಳೆಯುತ್ತವೆ ಮತ್ತು ರಾಷ್ಟ್ರವು ಪ್ರಗತಿ ಹೊಂದುತ್ತದೆ ಎಂದು ನಾವು ಭಾವಿಸುತ್ತೇವೆ…”
“ಸರ್ಕಾರವು ಯಾವುದೇ ಜನಪರ ನೀತಿಯನ್ನು ತರುತ್ತದೆಯೇ ಎಂದು ನಾವು ನೋಡಬೇಕಾಗಿದೆ. ಈ ಸರ್ಕಾರವು ಸಾರ್ವಜನಿಕರಿಗಾಗಿ ಏನನ್ನೂ ಮಾಡುತ್ತಿಲ್ಲ. ನಾನು ಸರ್ಕಾರದಿಂದ ಏನನ್ನೂ ಸಕಾರಾತ್ಮಕವಾಗಿ ನಿರೀಕ್ಷಿಸುತ್ತಿಲ್ಲ. ಇದು ಚುನಾವಣಾ ವರ್ಷವಾಗಿರುವುದರಿಂದ ಸರ್ಕಾರ ಕೆಲವು ಸಾಬೂನುಗಳನ್ನು ಅಷ್ಟೆ ಘೋಷಿಸಬಹುದು” ಸಿಪಿಐ ಸಂಸದ ಪಿ ಸಂತೋಷ್ ಕುಮಾರ್ ಹೇಳಿದ್ದಾರೆ. ಎಂಡಿಎಂಕೆ ಸಂಸದ ವೈಕೋ ಅವರು, ಕೇಂದ್ರ ಸರ್ಕಾರ ಭಾರತದ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ…” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಸೌಹಾರ್ದ ಮಾನವ ಸರಪಳಿ : ಮಾನವೀಯತೆ ಉಳಿಸಲು ಕೋಮುವಾದವನ್ನು ಸೋಲಿಸಬೇಕಿದೆ Janashakthi Media