ಬೆಂಗಳೂರು: ಕೃಷ್ಣರಾಜಪುರದದ ಗಾಯತ್ರಿ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಮುಂದಾಗಿತ್ತು. ಈ ಸಂದರ್ಭದಲ್ಲಿ ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ ದಂಪತಿಗಳು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಬೆದರಿಕೆ ಒಡ್ಡಿರುವ ಪ್ರಕರಣ ನಡೆದಿದೆ.
ಸೋನಾ ಸೇನ್ ಮತ್ತು ಸುನೀಲ್ ಸಿಂಗ್ ದಂಪತಿ ಕ್ಯಾನ್ ಹಾಗೂ ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಒತ್ತುವರಿ ತೆರವಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ದಂಪತಿಗಳ ಕಟ್ಟಡವು ಮೂರು ಅಂತಸ್ತಿನದ್ದಾಗಿದ್ದು, 2 ಮೀಟರ್ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿ ಆಗಿದೆ ಎಂದು ಗುರುತಿಸಿರುವ ಸ್ಥಳದಲ್ಲಿಯೇ ಕಟ್ಟಡದ ಕಂಬವೂ ಇರುವ ಕಾರಣ, ಒತ್ತುವರಿ ತೆರವು ವೇಳೆ ಇಡೀ ಕಟ್ಟಡ ಉರುಳುವ ಭೀತಿ ಎದುರಾಗಿದೆ.
ಕಷ್ಟಪಟ್ಟು ಮನೆ ಕಟ್ಟಿದ್ದೇವೆ. ಮನೆ ಕಟ್ಟಲು ಸಾಲ ಮಾಡಿದ್ದೇವೆ. ಈಗ ಮನೆ ಒಡೆದು ಹಾಕಿದರೆ ಹೇಗೆ? ನಿನ್ನೆ ಕಟ್ಟಡ ತಡೆಗೋಡೆಯನ್ನು ಒಡೆದಿದ್ದಾರೆ. ಇದಕ್ಕೆಲ್ಲಾ ನಮಗೆ ಪರಿಹಾರ ಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬರಬೇಕು. ಅವರ ಜೊತೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ಸೋನಾ ಸೇನ್ ಹಾಗೂ ಸುನೀಲ್ ಸಿಂಗ್ ಅವರು, ಕಳೆದ 15 ವರ್ಷಗಳ ಹಿಂದೆ ನಾವು ₹40 ಲಕ್ಷ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡು ಕಂಗಾಲಾಗಿದ್ದೆವು. ಈಗ ಪರಿಸ್ಥಿತಿ ಒಂದು ಹಂತಕ್ಕೆ ಬರುತ್ತಿದೆ. ಮನೆ ಕಳೆದುಕೊಂಡರೆ ಬದುಕುವುದು ಹೇಗೆ? ಮನೆ ಕೆಡವಲು ಬಿಡುವುದಿಲ್ಲ ಎಂದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ದಂಪತಿಯನ್ನು ರಕ್ಷಿಸಲು ಮುಂದಾದರೂ ಏನೂ ಪ್ರಯೋಜನವಾಗಲಿಲ್ಲ. ಈ ವೇಳೆ ಪೊಲೀಸರ ಎದುರೇ ದಂಪತಿ ಬೆಂಕಿಕಡ್ಡಿ ಗೀರಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಕೈಹಿಡಿದು ತಡೆದರು. ‘ಈ ಮನೆ ಸದ್ಯಕ್ಕೆ ಬಿಟ್ಟು, ಬೇರೆ ಮನೆ ಡಿಮಾಲಿಷನ್’ ಮಾಡಿ ಎಂದು ಪೊಲೀಸರು ಬಿಬಿಎಂಪಿಗೆ ಸೂಚಿಸಿದಾಗ ಅದಕ್ಕೂ ದಂಪತಿ ವಿರೋಧ ವ್ಯಕ್ತಪಡಿಸಿದರು. ‘ಯಾರ ಮನೆಯನ್ನೂ ಕೆಡವಲು ಬಿಡುವುದಿಲ್ಲ. ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಇಲ್ಲಿಂದ ವಾಪಸ್ಸು ಹೋಗಬೇಕು. ನಾವು ಒಂದೊಮ್ಮೆ ಬೆಂಕಿ ಹಚ್ಚಿಕೊಂಡರೆ ಅದಕ್ಕೆ ಪೊಲೀಸರೇ ಕಾರಣ’ ಎಂದು ದಂಪತಿ ಆಕ್ರೋಶ ವ್ಯಕ್ತಪಡಿಸಿದರು.
ತೆರವು ಕಾರ್ಯ ಮುಂದುವರಿಯಲಿದೆ: ಭೈರತಿ ಬಸವರಾಜ್
ಯಾರೆ ಇರಲಿ, ಎಷ್ಟೇ ದೊಡ್ಡವರಿರಲಿ ತೆರವು ಕಾರ್ಯ ಮುಂದುವರೆಯಲಿದೆ. ಕೃಷ್ಣರಾಜಪುರದ ಗಾಯತ್ರಿ ಲೇಔಟ್ನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ. ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ನೀರಿನಲ್ಲಿ ಮುಳುಗುವ ಪರಿಸ್ಥಿತಿ ಇದೆ. ಹೀಗಾಗಿ ತೆರವು ಕಾರ್ಯವನ್ನು ಮುಂದುವರಿಸುವ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.