ನವದೆಹಲಿ: ವಿಪಕ್ಷಗಳ ಕೂಟವು ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆಗೆ (ಎಸ್‌ಐಆರ್) ತೀವ್ರ ವಿರೋಧ ವ್ಯಕ್ತಪಡಿಸಿರುವ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿವೆ.
ತಮಿಳುನಾಡಿನಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದ್ದು, ಅದರ ಬೆನ್ನಲ್ಲೇ ಆಡಳಿತಾರೂಢ ಡಿಎಂಕೆ ನೇತೃತ್ವದಲ್ಲಿ ಡಿಎಂಕೆ ಮಿತ್ರಪಕ್ಷಗಳು ಮಹತ್ವದ ಸಭೆ ನಡೆಸಿವೆ.
ಈ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನವೆಂಬರ್.4ರಿಂದ ಡಿಸೆಂಬರ್.4ರವರೆಗೆ ಮತದಾರ ಪಟ್ಟಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಮುಂದಾಗಿದ್ದು, ಅದನ್ನು ಸ್ಥಗಿತಗೊಳಿಸುವಂತೆ ಈ ಸಭೆಯಲ್ಲಿ ಸರ್ವಪಕ್ಷಗಳೂ ಬೇಡಿಕೆಯಿಟ್ಟಿವೆ.
ಇದನ್ನೂ ಓದಿ: ನವೆಂಬರ್ 19 ರಂದು ಬೆಂಗಳೂರಿನಲ್ಲಿ ಅಕ್ಕ ಪಡೆ ಪ್ರಾರಂಭ: ಲಕ್ಷ್ಮಿ ಹೆಬ್ಬಾಳ್ಕರ್
ಒಂದು ವೇಳೆ ಚುನಾವಣಾ ಆಯೋಗ ಈ ಬೇಡಿಕೆಗೆ ಒಪ್ಪದಿದ್ದರೆ ಮತದಾರ ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಪಕ್ಷಗಳು ನಿರ್ಣಯ ಕೈಗೊಂಡಿವೆ. ಡಿಎಂಕೆಯನ್ನು ಬೆಂಬಲಿಸುವ 46ಕ್ಕೂ ಹೆಚ್ಚು ಪಕ್ಷಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಇತ್ತ ಎಐಡಿಎಂಕೆ, ಪಿಎಂಕೆ, ನಟ ವಿಜಯ್ ನೇತೃತ್ವದ ಟಿವಿಕೆ ಸೇರಿ ಇನ್ನೂ ಹಲವು ಎನ್‌ಡಿಎ ಮಿತ್ರಪಕ್ಷಗಳು ಸಭೆಯನ್ನು ಬಹಿಷ್ಕರಿಸಿವೆ.
ಕೇಂದ್ರದ ಕೈಗೊಂಬೆಯಾಗಿರುವ ಆಯೋಗ
ಇದಲ್ಲದೇ ಚುನಾವಣಾ ಆಯೋಗವು ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಪಕ್ಷಗಳು ಸಭೆಯಲ್ಲಿ ನಿರ್ಣಯ ಕೈಗೊಂಡಿವೆ. ಅಲ್ಲದೇ ತರಾತುರಿಯಲ್ಲಿ ಪರಿಷ್ಕರಣೆ ನಡೆಸುವ ಕ್ರಮವನ್ನು ಸಭೆಯಲ್ಲಿ ನಾಯಕರು ಖಂಡಿಸಿದ್ದು, ಜ.31ಕ್ಕೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.
ಅದಕ್ಕೂ ಮುನ್ನ ಕ್ರಿಸ್‌ಮಸ್ ಹಾಗೂ ಪೊಂಗಲ್ ಹಬ್ಬಗಳಿದ್ದು ಸಾಕಷ್ಟು ಮಂದಿ ಪರಿಷ್ಕರಣೆಯಲ್ಲಿ ಭಾಗಿಯಾಗಲು ಕಷ್ಟವಾಗಲಿದೆ. ಇದರಿಂದ ಹಲವರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಬಿಹಾರದಲ್ಲಿ ಪರಿಷ್ಕರಣೆ ನಡೆಸುವ ವೇಳೆಯೂ ಕೆಲವು ಸಂಘಟನೆಗಳು, ಪಕ್ಷಗಳು ಅದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಆ ಪ್ರಕರಣಗಳು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ.
ಪರಿಷ್ಕರಣೆ ವಿವಾದದ ಲಾಭ ಪಡೆಯುತ್ತಿರುವ ಡಿಎಂಕೆ: ವಿಜಯ್
ಮತದಾರ ಪಟ್ಟಿ ಪರಿಷ್ಕರಣೆಯ ವಿವಾದವನ್ನು ಡಿಎಂಕೆ ತನ್ನ ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ. ತನ್ನ ಆಡಳಿತದಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಮತದಾರ ಪಟ್ಟಿ ಪರಿಷ್ಕರಣೆಯ ದಾಳವನ್ನು ಬಳಸುತ್ತಿದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಆರೋಪಿಸಿದ್ದಾರೆ.
ಏನೇನು ನಿರ್ಧಾರ
-ಡಿಎಂಕೆ ಹಾಗೂ ಮಿತ್ರಪಕ್ಷಗಳು ಸಭೆಯಲ್ಲಿ ಭಾಗಿ
-ಮತಪಟ್ಟಿ ಪರಿಷ್ಕರಣೆ ಸ್ಥಗಿತಗೊಳಿಸುವಂತೆ ಬೇಡಿಕೆ
-ಬೇಡಿಕೆಗೆ ಒಪ್ಪದಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ
-ಮತದಾರರು ತಮ್ಮ ಹಕ್ಕು ಕಳೆದುಕೊಳ್ಳುವ ಭೀತಿ
-ತರಾತುರಿಯಲ್ಲಿ ಎಲ್ಲರಿಗೂ ಭಾಗಿಯಾಗಲು ಕಷ್ಟ
ಇದನ್ನೂ ನೋಡಿ: ದ್ವೇಷ ಭಾಷಣ| ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು ದಾಖಲು Janashakthi Media
