ನವದೆಹಲಿ: ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಸ್ಪಷ್ಟ ದುರ್ಬಳಕೆಯು ನಾವು ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರಕ್ಕೆ ಪರಿವರ್ತನೆಯಾಗುತ್ತಿದ್ದೇವೆ ಎಂಬ ಭಾವನೆ ಮೂಡಿಸುತ್ತಿದೆ ಎಂದು ದೇಶದ ಪ್ರಮುಖ ಒಂಭತ್ತು ಪಕ್ಷದ ಮುಖಂಡರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐ ಸಂಸ್ಥೆ ಬಂಧಿಸಿರುವ ಕ್ರಮವನ್ನು ಉಲ್ಲೇಖಿಸಿರುವ ಪ್ರತಿಪಕ್ಷಗಳು, ಚುನಾವಣಾ ಕಣದಿಂದ ಹೊರಗೆ ರಾಜಕೀಯ ಮೇಲುಗೈ ಸಾಧಿಸಲು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯಪಾಲರ ಕಚೇರಿಗಳಂಥ ಸಾಂವಿಧಾನಿಕ ಕಚೇರಿಗಳ ದುರುಪಯೋಗ ಮಾಡುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇಂಥಹ ಪ್ರಯತ್ನಗಳು ತೀವ್ರ ಖಂಡನೀಯ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಪ್ರಜಾಪ್ರಭುತ್ವದ ಉಳಿವು ಮತ್ತು ನಾಲ್ಕನೇ ಸಂಸ್ಥೆಗಳು
ಭಾರತ ಈಗಲೂ ಪ್ರಜಾಸತ್ತಾತ್ಮಕ ದೇಶವೆಂದು ತಾವು ಒಪ್ಪುತ್ತೀರಿ ಎಂದು ನಾವು ಭಾವಿಸುತ್ತೇವೆ. ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಅಸ್ಪಷ್ಟ ದುರ್ಬಳಕೆಯು, ನಾವು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವಕ್ಕೆ ಪರಿವರ್ತನೆಯಾಗಿದ್ದೇವೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
“2014ರಿಂದ ನಿಮ್ಮ ಆಡಳಿತದ ಅಡಿಯಲ್ಲಿ ತನಿಖಾ ಸಂಸ್ಥೆಗಳು ದಾಖಲಿಸಿದ ಪ್ರಕರಣಗಳು, ಬಂಧಿಸಿದ, ದಾಳಿ ಮಾಡಿದ ಅಥವಾ ವಿಚಾರಣೆಗೆ ಒಳಗಾದ ಒಟ್ಟು ಪ್ರಮುಖ ರಾಜಕಾರಣಿಗಳ ಪೈಕಿ, ಗರಿಷ್ಠ ರಾಜಕಾರಣಿಗಳು ವಿವಿಧ ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಆದರೆ ಬಿಜೆಪಿಗೆ ಸೇರುವ ವಿರೋಧ ಪಕ್ಷದ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ಬಗ್ಗೆ, ತನಿಖಾ ಸಂಸ್ಥೆಗಳು ನಿರಾಸಕ್ತಿ ವಹಿಸುತ್ತವೆ.. ಲಾಲು ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಸಂಜಯ್ ರಾವತ್ (ಶಿವಸೇನೆ), ಆಜಂ ಖಾನ್ (ಸಮಾಜವಾದಿ ಪಕ್ಷ) ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ(ಟಿಎಂಸಿ) ವಿರುದ್ಧದ ಪ್ರಕರಣಗಳು ಇದಕ್ಕೆ ಉದಾಹರಣೆಯಾಗಿ ಕೊಡಬಹುದು” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ರಾಜ್ಯಪಾಲರು ಸಂಘ ಪರಿವಾರದ ಅಜೆಂಡಾ ಜಾರಿಗೆ ಯತ್ನಿಸುತ್ತದ್ದಾರೆ: ಸೀತಾರಾಂ ಯೆಚೂರಿ
ಶಾರದಾ ಚಿಟ್ ಫಂಡ್ ಹಗರಣ ಪ್ರಕರಣ, ನಾರದ ಕುಟುಕು ಕಾರ್ಯಾಚರಣೆ ಪ್ರಕರಣ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಾಜಿ ಟಿಎಂಸಿ ನಾಯಕ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಪ್ರತಿಪಕ್ಷ ನಾಯಕರನ್ನು ಉಲ್ಲೇಖಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ, ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷ(ಎಎಪಿ) ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ, ಎಎಪಿ ನಾಯಕ, ಭಗವಂತ್ ಮಾನ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ದವ್ ಠಾಕ್ರೆ, ಸಮಾಜವಾದಿ ಪಕ್ಷ(ಎಸ್‌ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಹಾರ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರುಗಳು ಪ್ರಧಾನಿ ಮೋದಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ