ನವದೆಹಲಿ: ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಂಸ್ಥೆಗಳ ಮೇಲೆ ಕೇಳಿ ಬಂದಿರುವ ಆರೋಪಗಳ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿರುವ ವಿರೋಧ ಪಕ್ಷಗಳು ಇಂದು(ಫೆಬ್ರವರಿ 02) ಬಜೆಟ್ ಅಧಿವೇಶನದ ವೇಳೆ ಗದ್ದಲ ಎಬ್ಬಿಸಿ ಚರ್ಚೆಗೆ ಪಟ್ಟು ಹಿಡಿದರು.
ಅದಾನಿ ಸಮೂಹ ಸಂಸ್ಥೆಗಳು ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್ ಸಂಸ್ಥೆ ವರದಿ ಬಿಡುಗಡೆಗೊಂಡಿದೆ.
ಇದನ್ನು ಓದಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಷೇರು ತಿರುಚುವಿಕೆ-ಲೆಕ್ಕಪತ್ರ ವಂಚನೆ ಆರೋಪ; ತನಿಖೆಗೆ ಕಾಂಗ್ರೆಸ್ ಆಗ್ರಹ
ವರದಿ ಬಿಡುಗಡೆ ನಂತರದಲ್ಲಿ ಭಾರತೀಯ ಷೇರು ಹೂಡಿಕೆದಾರಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಗಂಭೀರವಾಗಿ ಚರ್ಚೆಗಳು ಆಗಬೇಕಾಗಿದೆ ಎಂದು ವಿರೋಧ ಪಕ್ಷಗಳು ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ. ಇದರಿಂದ ಲೋಕಸಭೆ ಅಧಿವೇಶನದಲ್ಲಿ ಕೋಲಾಹಲ ಉಂಟಾಗಿ ಸಂಸತ್ ಕಲಾಪವನ್ನು ಮುಂದೂಡಬೇಕಾಯಿತು.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು 9 ಪಕ್ಷಗಳು ನೋಟಿಸು ಸಲ್ಲಿಸಿ ಕೋರಿದವು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 267ನೇ ನಿಯಮದ ಅಡಿಯಲ್ಲಿ ತಮ್ಮ ನಿಲುವಳಿ ನೋಟಿಸನ್ನು ಸಲ್ಲಿಸಿ ಚರ್ಚೆಗೆ ಅವಕಾಶ ಕೋರಿದರು. ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಕೆ. ಕೇಶವ ರಾವ್ ಹಾಗೂ ತೆಲಂಗಾಣದ ಬಿಆರ್‌ಎಸ್ ಪಕ್ಷದ ಸಂಸದರೊಬ್ಬರು ನಿಲುವಳಿ ಸೂಚನೆ ಮಂಡಿಸಿದರು. ಲೋಕಸಭೆಯಲ್ಲಿನ ಕಾಂಗ್ರೆಸ್ ವಿಪ್ ಮಣಿಕಂ ಟ್ಯಾಗೋರ್ ಅವರು ಬೇಡಿಕೆ ಇರಿಸಿದರು.
ಅಧಿವೇಶನ ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಜಂಟಿ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ವಿವಿಧ ವಿರೋಧ ಪಕ್ಷಗಳ ನಾಯಕರು, ಅದಾನಿ ಸಮೂಹದ ವಿವಾದವನ್ನು ಚರ್ಚಿಸಲು ಅವಕಾಶ ಕೋರಲು ನಿರ್ಧರಿಸಿದ್ದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ತೃಣಮೂಲ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಕ್ಷ, ಡಿಎಂಕೆ, ಜೆಡಿಯು ಮತ್ತು ಎಡಪಕ್ಷಗಳು ಸೇರಿದಂತೆ 13 ಪಕ್ಷಗಳ ನಾಯಕರು ಭಾಗಿಯಾಗಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ