ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆಗೊಳಿಸುವವರ ವಿರುದ್ಧ ಜಲಮಂಡಳಿ ಕ್ರಮ ವಿರೋಧಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಎಎಪಿ ಬಹಿರಂಗ ಪತ್ರ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡುವವರ ವಿರುದ್ದ ಕ್ರಮ ಜರುಗಿಸಲು ಮತ್ತು 5 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿರುವುದು ಆಕ್ಷೇಪಾರ್ಹ ನಡೆಯಾಗಿದೆ. ಇದು ಜನವಿರೋಧಿ ನೀತಿಯಾಗಿದ್ದು ತಕ್ಷಣ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದಿರುವ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸೇರ್ಪಡೆ ಮಾಡಲಾಗುತ್ತಿರುವುದರಿಂದ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ ವಿ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಕಾರಣ ನೀಡಿರುವುದು ಹಾಸ್ಯಾಸ್ಪದವಾಗಿದೆ. ಒಳಚರಂಡಿ ವ್ಯವಸ್ಥೆ ಚೆನ್ನಾಗಿದ್ದರೆ ನೀರು ಸುಗಮವಾಗಿ ಹರಿಹೋಗುತ್ತದೆ.

ಇದನ್ನೂ ಓದಿ: ನೀರು ಕಲುಷಿತಗೊಳ್ಳುವುದು ಪುನರಾವರ್ತನೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ

ಜಲಮಂಡಳಿಯ ಈ ನೀತಿಯು ತನ್ನ ಜವಾಬ್ದಾರಿಯನ್ನು ಬದಿಗಿಟ್ಟು ಜನಸಾಮಾನ್ಯರ ಕಿವಿಹಿಂಡುತ್ತಿರುವಂತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನಗರದ ಎಲ್ಲ ಒಳಚರಂಡಿಗಳ ಅಡೆತಡೆಗಳನ್ನು ಪರಿಶೀಲಿಸಿ, ದುರಸ್ತಿಗೊಳಿಸುವುದು ಜಲಮಂಡಳಿ ಕರ್ತವ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ವಾಸ್ತವದಲ್ಲಿ ಒಳಚರಂಡಿಗಳಿಗೆ ಅಡೆತಡೆ ಉಂಟಾಗುತ್ತಿರುವುದೇ ಬೃಹತ್ ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆ, ಮಾಲ್ ಗಳಿಂದ. ಜನಸಾಮಾನ್ಯರಿಗೆ ದಂಡದ ರುಚಿ ತೋರಿಸುವ ಜಲಮಂಡಳಿ ಅಧಿಕಾರಿಗಳು ದೊಡ್ಡ ದೊಡ್ಡ ಬಿಲ್ಡರ್ ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಕೈಗಾರಿಕೆ ಮತ್ತು ಘನತ್ಯಾಜ್ಯ ಮಿಶ್ರಿತ ನೀರು ಸೇರ್ಪಡೆಯಿಂದ ಕಾವೇರಿ ನೀರು ಕಲುಷಿತಗೊಂಡು ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಲಾಗಿದೆ.

ಇದರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಉಳ್ಳವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಜಲಮಂಡಳಿ ಅಧ್ಯಕ್ಷರಾಗಿ ಮುಂದುವರಿಯಲು ಅನರ್ಹರಾಗಿದ್ದಾರೆ. ಜಲಮಂಡಳಿಗೆ ದಕ್ಷ ಅಧಿಕಾರಿಯನ್ನು ನೇಮಕ ಮಾಡಿ. ಸಣ್ಣ ಪ್ರಮಾಣದ ಮಳೆಗೂ ಪ್ರವಾಹ ಪರಿಸ್ಥಿತಿ ಉದ್ಭವಿಸುವುದನ್ನು ತಪ್ಪಿಸಿ ಎಂದು ಮೋಹನ್ ದಾಸರಿ ಒತ್ತಾಯಿಸಿದ್ದಾರೆ.

ಜಲಮಂಡಳಿ ವ್ಯಾಪ್ತಿಯ ಕೆರೆಗಳಿಗೆ ಕಲುಷಿತ ನೀರು ಸೇರ್ಪಡೆಗೊಳ್ಳುತ್ತಿರುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ, ಕೆರೆಗಳ ಶುದ್ಧೀಕರಣಗೊಳಿಸಿಲ್ಲ. ಈಗಾಗಲೇ ಕೆಲವು ಕೆರೆಗಳಲ್ಲಿ ಮೀನುಗಳು ಸೇರಿದಂತೆ ಜಲಚರಗಳು ಸಾಮೂಹಿಕವಾಗಿ ಸಾವನ್ನಪ್ಪಿರುವ ಕುರಿತು ವರದಿಗಳಾಗಿವೆ. ಕಳೆದ 4 ತಿಂಗಳಿಂದ ಬೆಂಗಳೂರಿಗರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರನ್ನು ಕೊಡಲಾಗಿಲ್ಲ, ಟ್ಯಾಂಕರ್ ಮಾಫಿಯಾವನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ. ಹೀಗೆ ಎಲ್ಲ ವಿಚಾರಗಳಲ್ಲೂ ಅಸಮರ್ಥತೆ ತೋರಿರುವ ರಾಮ್ ಪ್ರಸಾತ್ ಮನೋಹರ್ ಅವರು ದಂಡದ ರೂಪದಲ್ಲಿ ಜನಸಾಮಾನ್ಯರ ಜೇಬಿಂದ ಹಣ ಕೀಳಲು ತನ್ನ ಸಾಮರ್ಥ್ಯವನ್ನು ತೋರ್ಪಡಿಸುತ್ತಿದ್ದಾರೆ. ಇದು ಸ್ವಾಗತಾರ್ಹ ನಡೆಯಲ್ಲ ಎಂದು ಮೋಹನ್ ದಾಸರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಂಡದ ಪ್ರವೃತ್ತಿ ಕೈಬಿಟ್ಟು, ಮಳೆ ನೀರು ಕೊಯ್ಲು ಪದ್ದತಿಯು ಮೂಲಕ ಸಾರ್ವಜನಿಕರು ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಜಲಮಂಡಳಿ ಮಾಡಬೇಕು. ಅನವಶ್ಯಕವಾಗಿ ಬೆಂಗಳೂರು ನಿವಾಸಿಗಳ  ಮೇಲೆ ದಂಡದ ರೂಪದಲ್ಲಿ ಹಗಲು ದರೋಡೆ ಅಂತಹ ಕೃತ್ಯಕ್ಕೆ ಕೈ ಹಾಕಿದಲ್ಲಿ ಬೆಂಗಳೂರಿಗರ ಮನೆಮನೆಗೂ ತೆರಳಿ ಜಾಗೃತಿ ಮೂಡಿಸಿ, ಅವರುಗಳೊಂದಿಗೆ ತೀವ್ರ ಮಟ್ಟದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪತ್ರದ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಇದನ್ನೂ ನೋಡಿ: ಮಹಾರಾಷ್ಟ್ರದಲ್ಲಿ ಬಿಜೆಪಿಯ ತಂತ್ರ ಬ್ಯೂಮರಾಂಗ್ ಆಗುತ್ತಾ? ಹೌದು ಎನ್ನುತ್ತಿವೆ ಲೆಕ್ಕಾಚಾರಗಳು!?

Donate Janashakthi Media

Leave a Reply

Your email address will not be published. Required fields are marked *