ನವದೆಹಲಿ: ರಾಜ್ಯಸಭೆಯ 12 ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಇಂದು ಸಹ ಹೋರಾಟವನ್ನು ಮುಂದುವರೆಸಿದ್ದಾರೆ.
ರಾಜ್ಯಸಭೆಯ ಕಲಾಪ ಆರಂಭಗೊಂಡಿಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದರು. ಸದನದಲ್ಲಿ ತೀವ್ರ ಗದ್ದಲಗೊಂಡಿದ್ದರಿಂದ ಸಭಾಪತಿ ವೆಂಕಯ್ಯ ನಾಯ್ಡು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಅಮಾನತು ಆದೇಶ ರದ್ದು ಮಾಡುವವರೆಗೂ ಪ್ರತಿಭಟನೆ ನಡೆಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.
ಇದನ್ನು ಓದಿ: ಚಳಿಗಾಲದ ಅಧಿವೇಶನ: 12 ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳು ಪ್ರತಿಭಟನೆ
ಸಭಾಪತಿ ವೆಂಕಯ್ಯ ನಾಯ್ಡು, ಇದು ಅಸಂಸದೀಯ ನಡವಳಿಕೆ, ಸಂಸತ್ತಿನ ಅಧಿವೇಶನಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಸದನಗಳ ಕಾರ್ಯವೈಖರಿ ನೋಡಿ ಜನ ಕಂಗಾಲಾಗಿದ್ದಾರೆ. ಇದು ಸದನಕ್ಕೆ ಅಗೌರವ ತರುವ ನಡವಳಿಕೆ ಎಂದಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ 12 ಸದಸ್ಯರ ಅಮಾನತು ಆದೇಶ ಹಿಂಪಡೆಯಬೇಕೆಂಬುದು ನಮ್ಮ ಒತ್ತಾಯವಾಗಿದ್ದು, ಸಭೆ ನಡೆಸಿ ಮುಂದಿನ ನಡೆ ನಿರ್ಧರಿಸುತ್ತೇವೆ. ಅಮಾನತು ಆದೇಶ ತಾಂತ್ರಿಕವಾಗಿ ಕಾನೂನುಬದ್ಧವಾಗಿಲ್ಲ ಎಂದು ಹೇಳಿದ್ದಾರೆ.
12 ಮಂದಿ ಸಂಸದರ ಪೈಕಿ ಆರು ಮಂದಿ ಕಾಂಗ್ರೆಸ್, ಶಿವಸೇನೆ, ಟಿಎಂಸಿಯ ತಲಾ ಇಬ್ಬರು ಹಾಗೂ ಸಿಪಿಐ(ಎಂ) ಮತ್ತು ಸಿಪಿಐನಿಂದ ತಲಾ ಒಬ್ಬರು ಸೇರಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟ ಕಾರಣದಿಂದಾಗಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.