ವೇದರಾಜ ಎನ್.ಕೆ.
ಯುದ್ದಗ್ರಸ್ತ ಉಕ್ರೇನಿನಿಂದ ಭಾರತೀಯರನ್ನು, ಮುಖ್ಯವಾಗಿ ವಿದ್ಯಾರ್ಥಿಗಳನ್ನು ಕರೆ ತಂದ “ಆಪರೇಷನ್ ಗಂಗಾ” ಭೂಮಂಡಲದಾದ್ಯಂತ ಭಾರತದ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿ ಎಂದು ಪ್ರಧಾನ ಮಂತ್ರಿಗಳು ಸಾರಿದ್ದಾರೆ. ಇಲ್ಲ, ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ ಎಂದು ಹಲವು ಟೀಕಾಕಾರರು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲೂ ಮತ್ತು ಅವರ ಪಾಲಕರಲ್ಲೂ ಕೃತಜ್ಞತಾ ಭಾವಕ್ಕಿಂತ ಆಕ್ರೋಶ, ಆತಂಕವೇ ಹೆಚ್ಚಿರುವಂತೆ ಕಾಣುತ್ತದೆ. ವ್ಯಂಗ್ಯಚಿತ್ರಕಾರರು ಇದನ್ನೆಲ್ಲ ಹೇಗೆ ಕಂಡಿದ್ದಾರೆ ನೋಡೋಣ!
***
ಪ್ರಧಾನ ಮಂತ್ರಿಗಳು ಆಯ್ದ ನಾಲ್ಕು ಮಂತ್ರಿಗಳನ್ನು ಈ ಕೆಲಸದಲ್ಲಿ ಈ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಕಳಿಸಿದ್ದರು.
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಇವರ ಹೇಳಿಕೆಗಳು ಮತ್ತು ವರದಿಗಳು, ಇವರು ನಿಜವಾಗಿ ಯಾರಿಗೆ, ಏನು ನೆರವಾಗಲು ಹೋಗಿದ್ದರು ಎಂಬ ಪ್ರಶ್ನೆಯನ್ನು ಸಹಜವಾಗಿ ಎತ್ತಿವೆ.
ವಿದ್ಯಾರ್ಥಿಗಳನ್ನು ಹೊತ್ತು ತರುತ್ತಿದ್ದ ಭಾರತೀಯ ವಾಯು ಪಡೆಯ ವಿಮಾನದಲ್ಲಿ ವೈಮಾನಿಕ ಸಿಬ್ಬಂದಿಯ ವಿಶಿಷ್ಟ ಟೋಪಿ ಧರಿಸಿದ್ದ ಕೇಂದ್ರದ ರಕ್ಷಣಾ ಖಾತ್ರೆಯ ಉಪಮಂತ್ರಿ ಭಾಷಣವನ್ನೇ ಬಿಗಿಯುತ್ತ “ಏನೂ ಯೋಚಿಸಬೇಡಿ. ಮೋದೀಜೀ ಕೃಪೆಯಿಂದ ನಿಮ್ಮ ಜೀವ ಉಳಿದಿದೆ. ಎಲ್ಲವೂ ಸರಿಯಾಗುತ್ತದೆ” ಎಂದರಂತೆ “ಭಾರತ್ ಮಾತಾಕೀ ಜೈ..ಮಾನನೀಯ ಮೋದೀಜೀ ಜಿಂದಾಬಾದ್” ಎಂದರಂತೆ. ಅಲ್ಲದೆ ವಿದ್ಯಾರ್ಥಿಗಳೂ ಅದೇ ರೀತಿ ಜಯಕಾರ ಹಾಕುವಂತೆ ಹೇಳಿದರಂತೆ(ಎನ್.ಡಿ.ಟಿ.ವಿ., ಮಾರ್ಚ್ 4)
“ಮೋದೀಜೀ ಕೃಪೆಯಿಂದ ನಿಮ್ಮ ಜೀವ ಉಳಿದಿದೆ”
ಆಕ್ಸಿಜನ್ ಇಲ್ಲ,,. ಆಸ್ಪತ್ರೆ ಬೆಡ್ ಇಲ್ಲ… ನೋಟುರದ್ದತಿ,,, ರೈತರ ಪ್ರತಿಭಟನೆ….
(ಸತೀಶ ಆಚಾರ್ಯ, ಫೇಸ್‍ಬುಕ್)
ಇನ್ನೊಬ್ಬ ಕೇಂದ್ರ ಮಂತ್ರಿಗಳು ವಿದ್ಯಾರ್ಥಿಗಳಿಗೆ ತ್ರಿವರ್ಣ ಬಾವುಟ ಕೊಡುತ್ತ ಇವೇ ಎರಡು ಜಯಕಾರಗಳನ್ನು ಕೂಗುತ್ತ ಪುನರುಚ್ಚರಿಸುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆಯಂತೆ.
ಮತ್ತೊಬ್ಬ ಮಂತ್ರಿಯನ್ನು, ನಿಮ್ಮ ಭಾಷಣ ಸಾಕು, ವಿದ್ಯಾರ್ಥಿಗಳನ್ನು ಭಾರತಕ್ಕೆ ಯಾವಾಗ ಒಯ್ಯುತ್ತೀರಿ ಎಂದು ಹೇಳಿ ಎಂದು ರೊಮಾನಿಯಾದ ಸ್ನಗೊಯ್ ನಗರದ ಮೇಯರ್ ಹೇಳಿದರಂತೆ… “ಅವರಿಗೆ ಆಶ್ರಯ, ಆಹಾರ ಒದಗಿಸಿರುವುದು ನಾವು, ನೀವಲ್ಲ” ಎಂದೂ ಅವರಿಗೆ ನೆನಪಿಸಿದರಂತೆ.(ಸ್ಕ್ರಾಲ್, ಮಾ.7)
ಮತ್ತೊಬ್ಬ ಮಂತ್ರಿ “ದೇವರ ನಂತರ ಮನೆಯಲ್ಲಿ ಮೋದೀಜೀ ಹೆಸರನ್ನು ಜಪಿಸಲಾಗುತ್ತಿದೆ, ಏಕೆಂದರೆ, ಈಗ ಮೋದೀಜೀ ಮಾತ್ರ ಏನನ್ನಾದರೂ ಮಾಡಲು ಸಾಧ್ಯ, ಬೇರೆ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ” ಎಂದೊಬ್ಬರು ಹೇಳುವ ವೀಡಿಯೋವನ್ನು ತನ್ನ ‘ಕೂ’ ಅಕೌಂಟಿನಲ್ಲಿ ಶೇರ್ ಮಾಡಿಕೊಂಡಿದ್ದಾರಂತೆ( ನ್ಯೂಸ್‍ಲಾಂಡ್ರಿ, ಮಾ.7); ಕೇಸರಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಮುಂದಿನ ಚಿತ್ರವನ್ನೂ ಹಾಕಿಕೊಂಡಿದ್ದಾರಂತೆ
ಪಾಕಿಸ್ತಾನ,ಚೀನಾ, ಅಮೆರಿಕಾ ದೇಶಗಳ ವಿದ್ಯಾರ್ಥಿಗಳು ಉಕ್ರೇನಿನಿಂದ ನೆರವಿಗೆ ಅಂಗಲಾಚುತ್ತಿದ್ದರೆ, ಅವರ ದೇಶದ ಮುಖಂಡರು ಆಚೆ ದಡದಲ್ಲಿ ನಿಂತು ನೋಡುತ್ತಿದ್ದರಷ್ಟೇ, ಆದರೆ ನಮ್ಮ ಪ್ರಧಾನಿಗಳು ಎದೆಯೆತ್ತರದ ನೀರಿನಲ್ಲಿ ಸ್ವತಃ ಸೇತುವೆಯಾಗಿ ನಿಂತು ವಿದ್ಯಾರ್ಥಿಗಳನ್ನು ಉಳಿಸಿದರು!
***
ಆದರೆ ಹೇಗೋ ಜೀವವುಳಿಸಿಕೊಂಡು ಮರಳಿದ ವಿದ್ಯಾರ್ಥಿಗಳ ಅನುಭವ ಬೇರೆಯೇ ಇದ್ದಂತಿದೆ.
ಭಾರತ ಸರಕಾರದ ನೆರವೇನೋ ಸಿಕ್ಕಿತು, ಆದರೆ ಅದು ಸಿಕ್ಕಿದ್ದು ಹಲವಾರು ತೊಂದರೆಗಳನ್ನು ಎದುರಿಸಿ ನೂರಾರು ಕಿ.ಮೀ. ನಡೆದೋ, ಇನ್ನೂ ಹೇಗೇಗೋ ಪೋಲಂಡ್, ರೊಮಾನಿಯ, ಹಂಗೆರಿ ಮುಂತಾದ ದೇಶಗಳ ಗಡಿ ತಲುಪಿ, ಅದನ್ನು ದಾಟಿ ಬಂದ ಮೇಲೆಯೇ ಎಂದು ವಿದ್ಯಾರ್ಥಿಗಳು ತಮ್ಮ ಪಾಡು ತೋಡಿಕೊಂಡಿದ್ದು ವರದಿಯಾಗಿದೆ. ಗಡಿಯ ಬಳಿಯಾದರೂ ಉಕ್ರೇನಿನ ಭದ್ರತಾ ಪಡೆಗಳಿಂದ ಕಾಪಾಡಲು ಭಾರತ ಸರಕಾರದ ಪ್ರತಿನಿಧಿಗಳು ಯಾರೂ ಇರಲಿಲ್ಲವಂತೆ.(ನ್ಯೂಸ್ ಲಾಂಡ್ರಿ, ಮಾ.7)
ಇದು ಈ ವ್ಯಂಗ್ಯಚಿತ್ರಕಾರರಿಗೆ ಕೊವಿಡ್ ಪ್ರಕೋಪದ ಸಂದರ್ಭದಲ್ಲಿ ಹಣಕಾಸು ಮಂತ್ರಿಗಳ ಉದ್ಗಾರವನ್ನು ನೆನಪಿಸಿದೆ,
“ನೀನು ಹೇಗೆ ಉಕ್ರೇನ್ ಗಡಿ ದಾಟಿ ಬಂದೆ?” “ದೇವರ ಕೃಪೆ!” “ಬೇಗ ಬಾ, ನಿನ್ನ ಸಹಾಯಕ್ಕೆ ಇಲ್ಲಿದ್ದೇನೆ”
(ಅಲೋಕ್ ನಿರಂತರ್ ಫೇಸ್ ಬುಕ್) ( ಸುಭಾನಿ, ಡೆಕ್ಕನ್ ಕ್ರಾನಿಕಲ್)
ಇನ್ನು ಕೆಲವು ವಿದ್ಯಾರ್ಥಿಗಳಂತೂ ಪ್ರಧಾನಿಗಳು ಕಳಿಸಿದ ಮಂತ್ರಿಗಳದ್ದು “ಶೋಆಫ್” ಎಂದೇ ಹೇಳಿದ್ದಾರೆ. ಎಲ್ಲಿ ಸರಕಾರದ ಸಹಾಯ ಅತ್ಯಂತ ಅಗತ್ಯವಿತ್ತೋ ಅಲ್ಲಿ ಸಿಗಲೇ ಇಲ್ಲ (ಎನ್.ಡಿ.ಟಿ.ವಿ.), ಇಲ್ಲೀಗ ಗುಲಾಬಿ ಹೂ ಕೊಟ್ಟರೆ ಏನು ಬಂತು ಎಂದು ಕೇಳಿದ್ದಾರೆ.
(ಮುಂಜುಲ್, ನ್ಯೂಸ್9ಲೈವ್)
ಬಹುಶಃ ಆ ಮಂತ್ರಿಗಳನ್ನು ಅದೇ ಕೆಲಸಕ್ಕೆ ಆರಿಸಿ ಕಳುಹಿಸಲಾಗಿತ್ತೇನೋ! ಏಕೆಂದರೆ ಅವರ ವರ್ತನೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಪ್ರತಿಕೂಲ ಪ್ರತಿಕ್ರಿಯೆಗಳು ಬಂದರೂ, ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿಗಳು ಮೌನವಾಗಿದ್ದರು. ಅಷ್ಟೇ ಅಲ್ಲ, ನಂತರ ಪುಣೆಯಲ್ಲಿ ಒಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಮತ್ತು ವಾರಣಾಸಿಯಲ್ಲಿ ಉಕ್ರೇನಿನಿಂದ ಮರಳಿದ ಕೆಲವು ಆರಿಸಿದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ ಹೇಳಿರುವ ಅವರ ಮಾತುಗಳು ಇದನ್ನು ಪುಷ್ಟೀಕರಿಸುವಂತಿವೆ.
“ನನ್ನ ಕೋಲು ಹಿಡಿದುಕೊಳ್ಳಿ”
(ಮೀರ್ ಸುಹೈಲ್, ಫೇಸ್‍ಬುಕ್)
***
ಭಾರತ ಸರಕಾರ ತಾನು ಮಾಡಬಹುದಾದನ್ನೆಲ್ಲ ಮಾಡಿದೆ, ವಿದ್ಯಾರ್ಥಿಗಳೇ ಸೊಕ್ಕಿನಿಂದ ವರ್ತಿಸಿದ್ದಾರೆ, ಅವರು ಭಾರತ ಸರಕಾರ ಆಗಾಗ್ಗೆ ನೀಡಿದ ಎಚ್ಚರಿಕೆಗಳನ್ನು ಕಡೆಗಣಿಸಿದ್ದರಿಂದಲೇ ಅಷ್ಟೊಂದು ಪಾಡು ಪಡಬೇಕಾಯಿತು ಎಂದು ತಮ್ಮ ಸಂಕಟ ತೋಡಿಕೊಂಡ ವಿದ್ಯಾರ್ಥಿಗಳನ್ನು ಮೂದಲಿಸಿರುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಾಲ್ ಮಾಡಿರುವುದೂ ವರದಿಯಾಗಿದೆ.
ಆದರೆ ಭಾರತ ಸರಕಾರ ಸಾಕಷ್ಟು ಮೊದಲೇ ಎಚ್ಚರಿಕೆ ನೀಡಿತ್ತು ಎಂಬುದು ಒಪ್ಪತಕ್ಕಂತಹ ಮಾತಲ್ಲ ಎಂದು ಸರಕಾರದ ‘ಸಲಹಾ ಆದೇಶ’(ಅಡ್ವೈಸರಿ)ಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತ ‘ಆಲ್ಟ್ ನ್ಯೂಸ್’ ಹೇಳಿದೆ.
ಭಾರತೀಯ ರಾಯಭಾರ ಕಚೇರಿಯ ಇಂತಹ ಆರಂಭದ ‘ಅಡ್ವೈಸರಿ’ಗಳು ಮುಂಜಾಗರೂಕತಾ ಕ್ರಮವಾಗಿ ಬೇಕಾದರೆ ಉಕ್ರೇನ್ ಬಿಟ್ಟು ಹೋಗಬಹುದು ಎಂಬ ರೀತಿಯಲ್ಲಿದ್ದವು, ಫೆಬ್ರುವರಿ 22ರ ನಂತರವೇ “ತಕ್ಷಣವೇ ಹೊರಡಿ” ಎಂಬ ಸಲಹಾದೇಶ ಹೊರಡಿಸಲಾಯಿತು.
“ಇದೊಂದು ಹೊಸ ಅಡ್ವೈಸರಿ, ರಷ್ಯಾನೀಡಿದ ಮಾಹಿತಿಗಳನ್ನು ಆಧರಿಸಿದ್ದು,
ನಾವು ಪೂರ್ವದ ಕಡೆಗೆ ನಡೆಯಬೇಕಂತೆ, ಯಾವುದೇ ಫ್ರೆಂಡ್ಲಿ ಕ್ಷಿಪಣಿಯಿಂದ
ಹೊಡೆಸಿಕೊಳ್ಳದಂತೆ ಗೈರುಹಾಜರಾಗಬೇಕಂತೆ!
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
ಇದಲ್ಲದೆ ಸರಕಾರದ ಫೆಬ್ರುವರಿ 22ರ ಅಡ್ವೈಸರಿ ಬರುವ ವೇಳೆಗೆ ಏರ್ ಇಂಡಿಯಾವೂ ಸೇರಿದಂತೆ ವಿಮಾನಯಾನ ಕಂಪನಿಗಳು ಟಿಕೇಟ್ ದರಗಳನ್ನು ಮೂರು ಪಟ್ಟು ಏರಿಸಿದ್ದವಂತೆ!
ತದ್ವಿರುದ್ಧವಾಗಿ ಅಮೆರಿಕನ್ ವಿದೇಶಾಂಗ ಇಲಾಖೆ ಜನವರಿ 23 ರಂದೇ ತನ್ನ ಎಲ್ಲಾ ನಾಗರಿಕರಿಗೆ ಆದಷ್ಟು ಬೇಗನೇ ಉಕ್ರೇನ್ ನಿಂದ ಹೊರಟು ಬನ್ನಿ ಎಂಬ ಸೂಚನೆ ಕಳಿಸಿತ್ತು. ಫೆಬ್ರುವರಿ 11ರಂದಂತೂ ಇನ್ನು 48 ಗಂಟೆಗಳೊಳಗಾಗಿ ಹೊರಡಲೇ ಬೇಕಾಗಿದೆ ಎಂದು ನೋಟೀಸು ಕೊಟ್ಟಿತ್ತು ಎಂದು ‘ಆಲ್ಟ್ ನ್ಯೂಸ್’ ಕಂಡು ಹಿಡಿದಿದೆ. ಅಂದರೆ ರಷ್ಯನ್ ಅತಿಕ್ರಮಣದ ವೇಳೆಗೆ ಅಲ್ಲಿ ಅಮೆರಿಕನ್ ವಿದ್ಯಾರ್ಥಿಗಳು, ನಾಗರಿಕರಾರೂ ಇರಲಿಲ್ಲ. ಆದ್ದರಿಂದ ಅವರನ್ನು ಸುರಕ್ಷಿತವಾಗಿ ಪಾರು ಮಾಡುವ ಪ್ರಶ್ನೆಯೂ ಇರಲಿಲ್ಲ!
***
“ಉಕ್ರೇನಿನಿಂದ ಒಂದು ಚಿತ್ರ’ (ಮಂಜುಲ್, ವೃಬ್ಸ್ ಆಫ್ ಇಂಡಿಯ)
ಪ್ರಧಾನಿಗಳೊಂದಿಗೆ ಸಂವಾದದಲ್ಲಿ ಪ್ರಧಾನಿಗಳು ಹೇಳುವುದನ್ನು ಕೇಳಬೇಕು, ಏನಾದರೂ ಹೇಳುವುದಿದ್ದರೆ “ಸಕಾರಾತ್ಮಕ ಮತ್ತು ರಾಜಕೀಯೇತರ” ಮಾತುಗಳು ಮಾತ್ರ ಇರಬೇಕು ಎಂದು ವಾರಣಾಸಿಯಲ್ಲಿ ಚುನಾವಣಾ ಪ್ರಚಾರದ ನಡುವೆ ವಿದ್ಯಾರ್ಥಿಗಳೊಂದಿಗೆ ಭೇಟಿಯ ಬಹುಪ್ರಚಾರಿತ ಕಾರ್ಯಕ್ರಮಕ್ಕೆ ಆರಿಸಿದ ಉಕ್ರೇನಿನಿಂದ ಆಗಷ್ಟೇ ಆಪರೇಷನ್ ಗಂಗಾ’ ದಲ್ಲಿ ಮರಳಿದ ವಿದ್ಯಾರ್ಥಿಗಳಿಗೆ ತಾಕೀತು ಮಾಡಲಾಗಿತ್ತು ಎಂದು ಕನಿಷ್ಟ ಇಬ್ಬರು ವಿದ್ಯಾರ್ಥಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದ್ದಾರೆ. ಆದರೆ ಪ್ರಧಾನಿಗಳು ಬಿಜೆಪಿ ಚುನಾವಣಾ ಚಿಹ್ನೆ ರಾರಾಜಿಸುತ್ತಿದ್ದ ನೀಲಿ ಕೋಟ್ ಧರಿಸಿಯೇ ಬಂದಿದ್ದರಂತೆ!(ನ್ಯೂಸ್‍ಲಾಂಡ್ರಿ)
ಅವರಿಬ್ಬರೂ ತಮಗೆ ಒಂದು ಮುಖ್ಯ ಪ್ರಶ್ನೆ ಕೇಳುವುದಿತ್ತು-ತಮ್ಮ ಶಿಕ್ಷಣದ 4ವರ್ಷಗಳು ಮುಗಿದಿದ್ದು ಇನ್ನೆರಡು ವರ್ಷಗಳು ಉಳಿದಿವೆ, ಮುಂದೇನು ಎಂಬ ಬಗ್ಗೆ ಸರಕಾರ ಯೋಚಿಸಿದೆಯೇ, ಈ ಬಗ್ಗೆ ಸರಕಾರದಿಂದ ಮಾಹಿತಿ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಇವರೆಲ್ಲ ಶೈಕ್ಷಣಿಕ ಸಾಲ ಮಾಡಿ ಹೋದವರು, ಶಿಕ್ಷಣ ಮುಗಿಯದೆ ಸಾಲ ಮತ್ತು ಬಡ್ಡಿ ತೆರುವುದಾದರೂ ಹೇಗೆ ಎಂಬುದೀಗ ಅವರ ಮತ್ತು ಅವರ ಪಾಲಕರ ಮುಖ್ಯ ಆತಂಕ. ಪ್ರಧಾನಿಗಳಾಗಲೀ, ಸರಕಾರದ ಯಾವುದೇ ವಕ್ತಾರರಾಗಲೀ ಈ ಬಗ್ಗೆ ಏನೂ ಹೇಳಿಲ್ಲ.
“ಅಯ್ಯೋ! ನಮ್ಮ ಕೆಲವು ವಿದ್ಯಾರ್ಥಿಗಳು ಉಕ್ರೇನಿನಲ್ಲಿ ‘ಆತ್ಮನಿರ್ಭರ್’ ಆಗಿಬಿಟ್ಟಿದ್ದಾರೆ!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಹಣಕಾಸು ಮಂತ್ರಿಗಳು ಮತ್ತು ಮಾನವ ಸಂಪನ್ಮೂಲ ಮಂತ್ರಿಗಳು ಈ ವಿದ್ಯಾರ್ಥಿಗಳಿಗೆ ಇದೇ( ಆತ್ಮನಿರ್ಭರರಾಗಿ ಎಂಬ) ಉಪದೇಶ ನೀಡಬಹುದೇನೋ!
***
ಈ ಮೊದಲೇ, ನಮ್ಮ ಕೇಂದ್ರ ಮಂತ್ರಿಗಳೇ ಇವರಲ್ಲಿ 90% ನೀಟ್ ಪರೀಕ್ಷೆಯಲ್ಲಿ ವಿಫಲರಾದವರು ಎಂದು ಹೇಳಿದ್ದಾರಲ್ಲ!
(ಪಿ.ಮಹಮ್ಮದ್, ವಾರ್ತಾಭಾರತಿ) “90% ಮತ್ತು ಹೆಚ್ಚಿರುವವರು ಮಾರ್ಕ್ಸ್ ಕಾರ್ಡ್ ತೋರಿಸಿ…”
(ಸತೀಶ ಆಚಾರ್ಯ, ಫೇಸ್ ಬುಕ್)
“ಆಪರೇಷನ್ ಗಂಗಾ ನ್ಯೂ ಇಂಡಿಯಾ’ದ ಆತ್ಮ ವಿಶ್ವಾಸದ ಪ್ರತೀಕ” ಎಂದು ವಾರಣಾಸಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದ ಪ್ರಧಾನಿಗಳು ವಿದ್ಯಾರ್ಥಿಗಳು ಪಟ್ಟ ಪಾಡಿಗೆ ಯಥಾಪ್ರಕಾರ ಹಿಂದಿನ ಸರಕಾರಗಳನ್ನು ದೂರಿದರು ಎಂದೂ ವರದಿಯಾಗಿದೆ. ಅವರೂ ತಮ್ಮ ಮಂತ್ರಿಗಳ ಅಭಿಪ್ರಾಯವನ್ನೇ ಹೊಂದಿರಬಹುದೇ?
(ಪಂಜು ಗಂಗೊಳ್ಳಿ, ಕನ್ನಡ ಒನ್ ನ್ಯೂಸ್)
ಕಳೆದ 7 ವರ್ಷಗಳಲ್ಲಿ ಭಾರತ ಇದುವರೆಗೆ ತನ್ನ ಕೈಗೆಟುಕದ ಕ್ಷೇತ್ರಗಳಲ್ಲಿಯೂ ವಿಶ್ವ ನಾಯಕನಾಗಿ ಮೂಡಿ ಬಂದಿದೆ ಎಂದೂ ವಾರಣಾಸಿಯಲ್ಲಿ ಅವರು ವಿದ್ಯಾರ್ಥಿಗಳಿಗೆ ಹೇಳಿದರು…. ಆದರೂ ತಾವೇಕೆ ಚಿಕ್ಕದೇಶಗಳಿಗೆ ಹೋಗಬೇಕಾಗಿದೆ, ಈ ಕ್ಷೇತ್ರ ಇನ್ನೂ ಕೈಗೆಟುಕಿಲ್ಲ ಏಕೆ ಎಂದು ವಿದ್ಯಾರ್ಥಿಗಳು ಬಹುಶಃ ಅವಕಾಶ ಸಿಕ್ಕಿದ್ದರೆ ಕೇಳುತ್ತಿದ್ದರೇನೋ!
ಕಳೆದ 7 ವರ್ಷಗಳಲ್ಲಿ 10 ಲಕ್ಷ ಕೊಟಿ ರೂ. ಸುಸ್ತಿ ಸಾಲಗಳನ್ನು ಮನ್ನಾ ಮಾಡಿದ ಸರಕಾರಕ್ಕೆ ಈ ಸುಮಾರು 20 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಗಳನ್ನು ಮನ್ನಾ ಮಾಡುವುದು ಕಷ್ಟವೇ ಎಂದೂ ಕೇಳುತ್ತಿದ್ದರೇನೋ!
ಮೂರ್ತಿ ಬೇಡ, ಒಂದು ಮೆಡಿಕಲ್ ಕಾಲೇಜಿನ ಆಶ್ವಾಸನೆ ಕೊಡಿ…
ನಮ್ಮ ಮಕ್ಕಳು ಎಂಬಿಬಿಎಸ್ ಕಲಿಯಲು ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ತಪ್ಪುತ್ತದೆ!
(ಸುಭಾನಿ, ಡೆಕ್ಕನ್ ಕ್ರಾನಿಕಲ್)
ಐದು ರಾಜ್ಯಗಳ ಚುನಾವಣಾ ಪ್ರಚಾರದ ವೇಳೆ ಮತದಾರರು ಇದನ್ನು ಕೇಳಿದ್ದಾರೋ ಗೊತ್ತಿಲ್ಲ.
ಕೊನೆಯದಾಗಿ, ಐದು ರಾಜ್ಯಗಳ ಚುನಾವಣಾ ವೇಳಾ ಪಟ್ಟಿಯ ಕೊನೆಯ ದಿನ ಮುಗಿಯುತ್ತಿದ್ದಂತೆಯೇ ಎಲ್ಲೆಲ್ಲೂ ಪೆಟ್ರೋಲ್ ಬಂಕ್‍ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡಿದೆಯಂತೆ- ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಸುವುದು ಸರಕಾರವಲ್ಲ, ಅವನ್ನು ಮಾರಾಟ ಮಾಡುವ ಕಂಪನಿಗಳು ಎಂದು ಸರಕಾರ ಮತ್ತೆ-ಮತ್ತೆ ಹೇಳಿದರೂ, ಚುನಾವಣೆಗಳ ವೇಳೆಯಲ್ಲಿ ಮಾತ್ರ ಪೆಟ್ರೋಲ್ ಬೆಲೆ ಏರಿಕೆ ಸ್ಥಗಿತಗೊಳ್ಳುವುದನ್ನು ಕಳೆದ ಏಳು ವರ್ಷಗಳಲ್ಲಿ ಜನರಿಗೆ ಮಾಮೂಲಾಗಿಸಿದ್ದು ಬಹುಶಃ ‘ನ್ಯೂಇಂಡಿಯಾ’ದ (ಅಥವ ಅಮೃತ ಕಾಲದ?) ಒಂದು ಪ್ರಮುಖ ಸಾಧನೆಯೆನ್ನಬಹುದೇನೋ.
ಅದೇ ‘ಧ್ರುವೀಕೃತ’ ಮತದಾರರನ್ನು,
ಪೆಟ್ರೋಲ್ ಸ್ಟೇಷನ್‍ಗಳಲ್ಲಿ ಒಂದಾಗಿಸಿದ್ದೀರಿ!
ನಾಯಕತ್ವ ಅಂದರೆ ಇದು ನೋಡಿ!
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್