ಬೆಂಗಳೂರು : ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಅಲೋಪಥಿ ವೈದ್ಯರು ಇಂದು (ಒಪಿಡಿ) ಹೊರ ರೋಗಿ ವಿಭಾಗದ ಸೇವೆಯನ್ನು ಬಹಿಷ್ಕರಿಸುವುದರ ಮೂಲಕ ಮುಷ್ಕರ ನಡೆಸುತ್ತಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ನಡೆಯುತ್ತಿರುವ ಈ ಮುಷ್ಕರ ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು ಇದರಿಂದಾಗಿ ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ.
ಕಳೆದ ತಿಂಗಳು ಸೆಂಟ್ರೆಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ನೀಡಿದಂತೆ ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗಡ್ಡೆ ತೆಗೆಯುವುದು, ಗ್ಯಾಂಗ್ರಿನ್, ಹಲ್ಲಿನ ರೂಟ್ ಕ್ಯಾನಲ್ ಸೇರಿದಂತೆ ಮುಂತಾದ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸರಕಾರದ ಈ ನಿರ್ಧಾರವನ್ನು ಐಎಂಎ ಖಂಡಿಸಿದ್ದು, ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ.
ಐಎಂಎ ಹಮ್ಮಿಕೊಂಡಿರುವ ಈ ಮುಷ್ಕರಕ್ಕೆ ನರ್ಸಿಂಗ್ ಹೋಮ್ ಅಸೋಸಿಯೇಷನ್ (ಫಾನಾ) ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲ ಘೋಷಿಸಿವೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಹೆಚ್ಚು ಗೊಂದಲಗಳು ಉಂಟಾಗಬಹದು, ನುರಿತ ಅನುಭವ ಪಡೆದ ವೈದ್ಯರೇ ಶಸ್ತ್ರ ಚಿಕಿತ್ಸೆ ಮಾಡುವಾಗ ಸಾಕಷ್ಟು ಹೆಚ್ಚರ ವಹಿಸಿದರೂ ಕೆಲವೊಮ್ಮೆ ಎಡವಟ್ಟುಗಳ ಆಗುವ ಸಾಧ್ಯಗಳಿರುತ್ತವೆ. ಹೀಗಿರುವಾಗ ಶಲ್ಯ ಮತ್ತು ಶಾಲಕ್ಯ ಪದವೀಧರರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಕರ್ನಾಟಕ ಶಾಖೆಯ ಕಾರ್ಯದರ್ಶಿ ಡಾ.ಎಸ್.ಎಂ ಪ್ರಸಾದ್ ತಿಳಿಸಿದ್ದಾರೆ.