ಆಟವೇ ಮುಗಿದಿತ್ತು
ಆಕಾಶದಿಂದ ಆಟಿಕೆಗಳು ಬೀಳುತ್ತಿವೆ ಎಂದು ನೋಡುವಷ್ಟರಲ್ಲಿ
ಆಡಲು ಕೈ ಕಾಲುಗಳಿಲ್ಲ
ಮೈದಾನವೆಲ್ಲ ಹೆಣದ ರಾಶಿ
ನಿನ್ನೆ ಆಡಲು ಬಂದವರು ಇಂದು ಯಾರೂ ಕಾಣುತ್ತಿಲ್ಲ.
ಇದ್ದಕ್ಕಿದ್ದಂತೆ ಬಂದೆರಗಿದ ಆ ಸದ್ದು, ಬೆಳಕು ಏನೆಂದು ನೋಡುವಷ್ಟರಲ್ಲಿ
ಎಲ್ಲವೂ ಬೂದಿ
ನಿಮ್ಮ ಮನೆಯ ಮಕ್ಕಳು ಆಟವಾಡುವುದನ್ನೊಮ್ಮೆ ನೆನೆಯಿರಿ
ನೀವು ಮಕ್ಕಳಾಗಿದ್ದಾಗ ಆಡಿದ್ದನ್ನೂ ಒಮ್ಮೆ ನೆನೆಯಿರಿ
ನಿಮಗಿಲ್ಲದ ಶಿಕ್ಷೆ ನಮಗೇಕೆ
ನಾವು ಮಾಡಿದ ತಪ್ಪಾದರೂ ಏನು
ಈ ಭೂಮಿಯಲ್ಲಿ ತಪ್ಪಾಗಿ ಹುಟ್ಟಿದೆವಾ
ನಮ್ಮನ್ನು ಶಾಶ್ವತವಾಗಿ ಮಲಗಿಸಿ ನೀವು ಸಾಧಿಸುವುದಾದರೂ ಏನನ್ನ
ನಾವಿಲ್ಲದ, ಸಾವೇ ತುಂಬಿರುವ ಸಮಾಜದಲ್ಲಿ ನಿಮ್ಮ ದರ್ಬಾರು ಜೋರಾಗಿ ನಡೆಯಲ್ಲಿ
ಬಿದ್ದ ಗೋಡೆಗಳಿಗೆ, ಕರುಕಲಾದ ವಾಹನಗಳಿಗೆ ನಿಮ್ಮ ರಾಜಕೀಯ ಧ್ವೇಶದ ಆದೇಶವನ್ನು ನೀಡಿ ಬೋಪರಾಕ್ ಹಾಕಿಸಿಕೊಳ್ಳಿ. ಪ್ಯಾಲೆಸ್ತೇನಿ
– ಎಚ್.ಆರ್.ನವೀನ್ ಕುಮಾರ್, ಹಾಸನ.
ನೆಲ ದನಿಯ ಹಾಡು
ಹಿಂದೊಮ್ಮೆ ನನ್ನ ತಾಯ್ನೆಲವಾಗಿತ್ತು
ಪ್ರೀತಿಯ ಸರೋವರಗಳ ಸುತ್ತ ಬೆಳ್ಳಕ್ಕಿಗಳ ಚಿಲಿಪಿಲಿ ಎದೆಬಡಿತಗಳ ತಾಳದಂತಿತ್ತು
ಆ ಮಣ್ಣಿನಲಿ ಹೂಗಂಪು ಹೊನಲಾಗಿ ಹರಿದಿತ್ತು
ಗುಡ್ಡದ ಮೇಲಿನ ಆಲಯಗಳ ನಾದ
ನಿತ್ಯ ಬದುಕಿನ ಸಿಕ್ಕುಗಳ ಸಾಂತ್ವನವಾಗಿತ್ತು ;
ಹೌದು ಎಲ್ಲವೂ ಉದುರಿ ಹೋದವು
ಸುರುಟಿದ ತರಗೆಲೆಗಳಂತೆ ಚಂಡಮಾರುತದಲಿ
ಬಣ್ಣದ ಚಿಟ್ಟೆಗಳೆಲ್ಲ ಸುಟ್ಟ ರೆಕ್ಕೆಗಳಂತಾದವು
ಅವರು ನಮ್ಮದೆಂದರು ಇವರು ಹೌದೆಂದರು
ಮದಗಜಗಳ ಹಸಿವಿಗೆ ಹಸಿರು ಮಸಣವಾಯಿತು
ನಡಿಗೆಯಬ್ಬರಕೆ ಮಸಣ ಮರುಭೂಮಿಯಾಯ್ತು ;
ಹೌದು ಸರಹದ್ದಿನ ಬಾಂಬು ಕ್ಷಿಪಣಿಗಳ ಸದ್ದಿನಲಿ
ಹಸಿವೆ ನೀರಡಿಕೆಗಳೆಲ್ಲ ರೋದನವಾಯ್ತು
ಬೂದಿರಾಶಿಯ ಕೇಕೆ ಸಿಡಿದ ಬುರುಡೆಗಳ ಶಬ್ದ
ಹರಿದ ನೆತ್ತರ ಹೊಳೆಯ ನಡುವೆ ವಿಜಯ ಪತಾಕೆ
ನೆಟ್ಟವರ ಮೋಜಿಗೆ ಗುರಿ ಇಟ್ಟವರ ಮಸ್ತಿಗೆ
ಗಡಿರೇಖೆಗಳ ಪಾವಿತ್ರ್ಯತೆಯ ಸಿಂಚನ ;
ಮತ್ತದೇ ನೆನಪು
ಗುಡ್ಡದ ಮೇಲೆ ನಡೆದಾಡುವಾಗ ಪೂರ್ವಸೂರಿಗಳ
ಪಿಸುಗುಟ್ಟುವ ಸದ್ದು
ದೂರದಲಿ ಕಾಣುವುದು ನಡೆದಾಡುವ ಶವಗಳು ಗಗನಚುಂಬಿಗಳ ನಡುವೆ
ಆಧುನಿಕ ಕ್ಷಿಪಣಿ ಬಾಂಬು ಡ್ರೋನುಗಳ ಮೆರವಣಿಗೆ
ಪಟಪಟಿಸುವ ಪತಾಕೆಯ ಅಂಚು ಕೆಂಪಾಗಿದೆ
ನನ್ನಜ್ಜಂದಿರ ಎದೆಹನಿಯೇ ಇರಬೇಕು !
(ಇಂದಿನ ಪ್ಯಾಲೆಸ್ಟೈನ್ ಬಾಲಕ ಕೆಲವು ವರ್ಷಗಳ ನಂತರ ಅನುಭವಿಸಬಹುದಾದ ತಳಮಳದ ಕಾಲ್ಪನಿಕ ಅಭಿವ್ಯಕ್ತಿ)
ನಾ ದಿವಾಕರ
ಇದನ್ನೂ ಓದಿ: ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ವಸಾಹತುಶಾಹಿ ನೆಲೆಯಲ್ಲಿಯೇ ನೋಡಬೇಕು
ಬರಿಯ ನೆನಪಲ್ಲ (ಪ್ಯಾಲೆಸ್ತೇನಿ ಭಾವುಕ ಕಥನ)
ಕುಸಿದ ಕಟ್ಟಡದ ಅವಶೇಷಗಳಿಂದ ಹೊರಬಂದ
ಮಗುವಿನ ಕೈ ನೋಡಿದಾಗೆಲ್ಲ
ನನ್ನ ಮೂರು ಮಕ್ಕಳ ಕೈಗಳನ್ನು ಪರಿಶೀಲಿಸುತ್ತೇನೆ
ಕೈಬೆರಳುಗಳನ್ನು, ಕಾಲ್ಬೆರಳುಗಳನ್ನು
ಬಾಯಲ್ಲಿರುವ ಹಲ್ಲುಗಳನ್ನು!
ಕಡುಗಪ್ಪು ಹುಬ್ಬಿನ ತುಂಬೆಲ್ಲಇರುವ
ಒಂದೊಂದು ಕೂದಲನ್ನು ಎಣಿಸುತ್ತೇನೆ
ಅಲ್ ಯರ್ಮುಕ್ ಕ್ಯಾಂಪ್‌ನಲ್ಲಿ ಮಗುವೊಂದು ಮೌನವಾದಾಗೆಲ್ಲ
ಟಿವಿ ರೇಡಿಯೋಗಳಲ್ಲಿ ಪ್ರಸಾರವಾಗುತ್ತಿರುವ
ಹಾಡುಗಳ ವಾಲ್ಯೂಮ್ ಹೆಚ್ಚಿಸುತ್ತೇನೆ
ನನ್ನ ಮೂರು ಮಕ್ಕಳನ್ನು ಚಿವುಟಿ,
ನೋಯಿಸಿ , ಅಳಿಸಿ ಬದುಕಿಗೆ ಮರಳಿಸುತ್ತೇನೆ
ಕಲಂದಿಯ ಚೆಕ್ಪಾಯಿಂಟ್‌ನಲ್ಲಿ
ನನ್ನ ಹುಣ್ಣಾದ ಹೃದಯಕ್ಕೆ ಹಸಿವಾದಾಗಲೆಲ್ಲ
ನೆಮ್ಮದಿಗಾಗಿ ತಿನ್ನುತ್ತೇನೆ
ಭಾವಾವೇಶದಲ್ಲಿ ಕೊಂಚ ಹೆಚ್ಚೇ ತಿನ್ನುತ್ತೇನೆ- ಉಪ್ಪಿನ ಕಡುಬಯಕೆ
ಆಗ ನಾನು ಹೇಗಾದರೂ ಹೇಳಬಹುದು;
‘ಸಾಕು ನನ್ನ ಸುತ್ತ ಅಳುತ್ತಿರುವ ಎಲ್ಲರ ಕಣ್ಣೀರಲ್ಲಿ
ಕಿಡಿಯಾಗಿ ಹೊಮ್ಮುವ ಉಪ್ಪನ್ನು ತಡೆಗಟ್ಟಿ
ಮೂಲ : ಮಾಯಾ ಅಬು ಅಲ್-ಹಯ್ಯತ್
ಕನ್ನಡಕ್ಕೆ : ಆಕರ್ಷ ರಮೇಶ್ ಕಮಲ
ವಿಡಿಯೋ ನೋಡಿ: ಮುಂದಿನ ಕೆಲವು ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ದೇಶವಾಗುತ್ತದೆಯೇ?Janashakthi Media