ಬೆಂಗಳೂರು: ಆನ್ಲೈನ್ ಆಟಗಳನ್ನು ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ-2021ಯ ಆಕ್ಷೇಪಾರ್ಹ ನಿಬಂಧನೆಗಳನ್ನು ಕರ್ನಾಟಕ ಹೈಕೋರ್ಟ್ ಇಂದು ರದ್ದುಗೊಳಿಸಿದೆ.
ರಾಜ್ಯ ಸರ್ಕಾರವು ಆನ್ಲೈನ್ ಆಟಗಳನ್ನು ನಿಷೇಧ ಮಾಡಿತ್ತು. ನಿಷೇಧವನ್ನು ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಒಳಗೊಂಡು 11 ಖಾಸಗಿ ಕಂಪೆನಿಗಳು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 22ರಂದು ತೀರ್ಪು ಕಾಯ್ದಿರಿತ್ತು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠವು ತೀರ್ಪು ಪ್ರಕಟಿಸಿದೆ. ಸರ್ಕಾರದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ಸರ್ಕಾರದ ಕ್ರಮ ಸಂವಿಧಾನ ಬದ್ದವಾಗಿಲ್ಲ. ಆನ್ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುವಂತಿಲ್ಲ. ಸಂವಿಧಾನ ಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ. ಆದರೆ ಈಗಿನ ಆದೇಶ ಕಾನೂನುಬಾಹಿರ ಎಂದು ನ್ಯಾಯಪೀಠ ತಿಳಿಸಿದೆ.
ಕಾಯ್ದೆಯಲ್ಲಿನ ಕೆಲವು ಆಕ್ಷೇಪಾರ್ಹ ನಿಬಂಧನೆಗಳನ್ನು ರದ್ದುಗೊಳಿಸಿದೆ. ಈ ನಿಬಂಧನೆಗಳು ಸಂವಿಧಾನದ ಅಧಿಕಾರವ್ಯಾಪ್ತಿಯ ಹೊರತಾಗಿದೆ. ಇಡೀ ಕಾಯಿದೆಯನ್ನು ರದ್ದುಪಡಿಸಲಾಗಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಸಾಂವಿಧಾನಿಕ ನಿಯಮಗಳಿಗೆ ಅನುಗುಣವಾಗಿ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ತರಲು ಸರ್ಕಾರವನ್ನು ನಿರ್ಬಂಧಿಸಲಾಗಿಲ್ಲ ಎಂದು ಹೇಳಲಾಗಿದೆ. ಆನ್ಲೈನ್ ಗೇಮಿಂಗ್ ಉದ್ಯಮ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸಿದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸುಮಾರು 120 ಪುಟಗಳ ತೀರ್ಪಿನಲ್ಲಿ ಹೇಳಲಾಗಿದೆ.
ಸರ್ಕಾರ ಅಕ್ಟೋಬರ್ 10ರಿಂದ ಆನ್ಲೈನ್ ಆಟಗಳನ್ನು ನಿಷೇಧಿಸಿತ್ತು. ಡ್ರೀಮ್ ಇಲೆವೆನ್, ಪೇ ಟೀಂ ಫಸ್ಟ್, ಗೇಮ್ಜಿ ಆ್ಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ ಆಪ್ಗಳನ್ನು ಸ್ಥಗಿತಗೊಳಿಸಿತ್ತು. 2021 ಸೆಪ್ಟೆಂಬರ್ 04ಕ್ಕೆ ರಾಜ್ಯದಲ್ಲಿ ಆನ್ಲೈನ್ ಆಟಗಳ ನಿಷೇಧಕ್ಕೆ ಸರ್ಕಾರ ತೀರ್ಮಾನಿಸಿತ್ತು.
ಪೋಕರ್, ಚೆಸ್, ರಮ್ಮಿ, ಫ್ಯಾಂಟಸಿ ಆಟಗಳು (ಫ್ಯಾಂಟಸಿ ಕ್ರಿಕೆಟ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್), ತಾತ್ಕಾಲಿಕ ಆಟಗಳು ಮತ್ತು ಇ-ಕ್ರೀಡೆಗಳು ಕೌಶಲ್ಯ ಸಂಬಂಧಿಸಿದ್ದಾಗಿವೆ ಎಂದು ಹಲವು ನ್ಯಾಯಾಲಯಗಳು ಹೇಳಿವೆ. ಕೆಲವು ಆಟಗಳು ಹಣದ ಅಪಾಯವನ್ನು ಒಳಗೊಂಡಿವೆಯಾದರೂ ಅವು ಜೂಜಾಟಕ್ಕೆ ಸಂಬಂಧಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.